ಮಂಗಳವಾರ, ಜೂಲೈ 7, 2020
27 °C

ಅತೃಪ್ತರ ಬಂಡಾಯ ಶಮನಕ್ಕೆ ಕಾಂಗ್ರೆಸ್ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತೃಪ್ತರ ಬಂಡಾಯ ಶಮನಕ್ಕೆ ಕಾಂಗ್ರೆಸ್ ಸೂತ್ರ

ಬೆಂಗಳೂರು: ಟಿಕೆಟ್‌ ಹಂಚಿಕೆ ಬೆನ್ನಲ್ಲೇ ಸ್ಫೋಟಗೊಂಡಿರುವ ಬಂಡಾಯ ಶಮನಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದು, ನಾಲ್ಕಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಲು ಚಿಂತನೆ ನಡೆಸಿದ್ದಾರೆ.

ಹಾಲಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ (ಬಾದಾಮಿ), ಕೆ. ಷಡಕ್ಷರಿ (ತಿಪಟೂರು), ಎಚ್.ಪಿ. ರಾಜೇಶ್ (ಜಗಳೂರು) ಬದಲು ಬೇರೆಯವರಿಗೆ ಟಿಕೆಟ್ ನೀಡಿದ್ದು, ಸ್ಥಳೀಯ ಮಟ್ಟದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ.

ಇದಲ್ಲದೆ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈತಪ್ಪಿದವರು ರೊಚ್ಚಿಗೆದ್ದು, ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ, ಬಂಡೆದ್ದವರನ್ನು ಮನವೊಲಿಸುವ ಜತೆಗೆ ಪರ್ಯಾಯ ಮಾರ್ಗ ಅನುಸರಿಸಲು ಪಕ್ಷ ಮುಂದಾಗಿದೆ.

ಈ ಮಧ್ಯೆ, ಇಲ್ಲಿನ ಹೊರವಲಯದ ಜೇಡ್‌ ರೆಸಾರ್ಟ್‌ನಲ್ಲಿ ಬಿ ಫಾರಂ ವಿತರಿಸುತ್ತಿದ್ದ ಕೆ‍ಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರನ್ನು ಭೇಟಿಯಾದ ಚಿಮ್ಮನಕಟ್ಟಿ, ‘ಪಕ್ಷ ಘೋಷಿಸಿದ ಅಭ್ಯರ್ಥಿ ದೇವರಾಜ್‌ ಪಾಟೀಲಗೆ ಬಿ ಫಾರಂ ನೀಡಬಾರದು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಟ್ಟೆ. ಆವರು ಸ್ಪರ್ಧಿಸುವುದಿಲ್ಲ, ನನಗೂ ಟಿಕೆಟ್ ಇಲ್ಲ. ಇದು ಸರಿಯಲ್ಲ’ ಎಂದೂ ವಾದಿಸಿದರು. ಅದಕ್ಕೆ ಪರಮೇಶ್ವರ, ‘ದೇವರಾಜ್ ಅವರಿಗೂ ಬಿ ಫಾರಂ ಕೊಡದಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸ್ವಲ್ಪ ದಿನ ಕಾಯಿರಿ’ ಎಂದು ಅವರನ್ನು ಸಮಾಧಾನಪಡಿಸಿದರು.

ಈ ಬೆಳವಣಿಗೆ ಗೊತ್ತಾಗುತ್ತಿದ್ದಂತೆ ಅಲ್ಲಿಗೆ ಬಂದ ದೇವರಾಜ್, ತಮಗೇ ಬಿ ಫಾರಂ ನೀಡುವಂತೆ ಪಟ್ಟು ಹಿಡಿದರು. ‘ಕಳೆದ ಬಾರಿ ಚಿಮ್ಮನಕಟ್ಟಿ ಆತ್ಮಹತ್ಯೆಗೆ ಯತ್ನಿಸಿದರು ಎಂಬ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಟ್ಟೆ. ಈ ಬಾರಿ ನನಗೇ ಕೊಡಬೇಕು’ ಎಂದೂ ಆಗ್ರಹಿಸಿದರು.

‘ಸದ್ಯ ಈ ಕ್ಷೇತ್ರದ ಬಿ ಫಾರಂ ಯಾರಿಗೂ ಕೊಡುವುದು ಬೇಡವೆಂದು ನಿರ್ಧರಿಸಿದ್ದೇವೆ’ ಎಂದು ಪರಮೇಶ್ವರ ಹೇಳಿದರು.

ಶಾಸಕ ಎಚ್.ಪಿ. ರಾಜೇಶ್ ಆಕ್ಷೇಪ ಎತ್ತಿರುವುದು ಮತ್ತು ಎಸ್‌.ಎಸ್. ಮಲ್ಲಿಕಾರ್ಜುನ ಅವರು ಒತ್ತಡ ತಂದ ಕಾರಣ, ಜಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಪುಷ್ಪಾವತಿ ಅವರಿಗೆ ಬಿ ಫಾರಂ ನೀಡಿಲ್ಲ.

ಮಡಿಕೇರಿ ಕ್ಷೇತ್ರಕ್ಕೆ ವಕೀಲ ಚಂದ್ರಮೌಳಿ ಅವರ ಹೆಸರು ಅಂತಿಮಗೊಂಡಿದ್ದರೂ ಬಿಜೆಪಿ ಮತ್ತು ಸ್ವಪಕ್ಷೀಯರ ಟ್ವಿಟರ್ ಟೀಕೆ ಕಾರಣಕ್ಕೆ ಅವರಿಗೂ ಬಿ ಫಾರಂ ವಿತರಿಸಲು ಕೆಪಿಸಿಸಿ ಹಿಂದೇಟು ಹಾಕಿದೆ. ಅಲ್ಲದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚಿಸಿದ ಉದ್ಯಮಿ ಮೆಹುಲ್ ಚೋಕ್ಸಿ ಪರ ಅವರು ವಕಾಲತ್ತು ವಹಿಸಿರುವುದು ಹೌದೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಚಂದ್ರಮೌಳಿ ಅವರಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.

ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್‌ ಕೂಡ ರೆಸಾರ್ಟ್‌ಗೆ ಬಂದು, ‘ನನಗೇಕೆ ಟಿಕೆಟ್ ನಿರಾಕರಿಸಿದ್ದೀರಿ’ ಎಂದು ಪರಮೇಶ್ವರ ಅವರನ್ನು ಖಾರವಾಗಿ ಪ್ರಶ್ನಿಸಿದರು. ‘31ಕ್ಕೂ ಹೆಚ್ಚು ಶಾಸಕರು ಸೋಲುತ್ತಾರೆ ಎಂದು ನಿಮ್ಮದೇ ವರದಿ ಇದೆ. ಹಾಗಿದ್ದ ಮೇಲೆ ಸೋಲುವವರೆಲ್ಲರಿಗೂ ಏಕೆ ಟಿಕೆಟ್ ಕೊಡುತ್ತೀರ’ ಎಂದೂ ಅವರು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

‘ನಾನು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಬಳಿ ಚರ್ಚಿಸುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.

120 ಅಭ್ಯರ್ಥಿಗಳಿಗೆ ಬಿ ಫಾರಂ

ಪಕ್ಷದ 120 ಅಭ್ಯರ್ಥಿಗಳಿಗೆ ಜಿ. ಪರಮೇಶ್ವರ ಮಂಗಳವಾರ ಬಿ ಫಾರಂ ವಿತರಿಸಿದರು.

ಇದೇ ವೇಳೆ, ‘ಮಂಗಳವಾರ ಬಿ ಫಾರಂ ವಿತರಿಸಲಾಗುತ್ತಿದೆ, ಬನ್ನಿ’ ಎಂದು ಕೆಪಿಸಿಸಿ ಅಧ್ಯಕ್ಷರು ಅಂಬರೀಷ್‌ ಅವರಿಗೆ ದೂರವಾಣಿ ಕರೆ ಮಾಡಿದ್ದರು.

ಆಗ ಅಂಬರೀಷ್‌, ‘ಟಿಕೆಟ್ ಬೇಕೆಂದು ನಾನು ಅರ್ಜಿ ಹಾಕಿಲ್ಲವಲ್ಲ. ನಾನು ಬಿ ಫಾರಂ ಪಡೆದುಕೊಳ್ಳಲು ಹಿಂದೆ ಯಾವಾಗಲಾದರೂ ಬಂದಿದ್ದೀನಾ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪರಮೇಶ್ವರ, ‘ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿ. ಇಲ್ಲವಾದರೆ ಜೆಡಿಎಸ್ ಜತೆ ಸಮ್ಮಿಶ್ರ ಸರ್ಕಾರ ಮಾಡಿ ಗುದ್ದಾಡಬೇಕಾಗುತ್ತದೆ’ ಎಂದು ನಗುತ್ತಲೇ ಸಲಹೆ ನೀಡಿದ್ದಾರೆ.

‘ನಾನು ಟಿಕೆಟ್ ಕೇಳದಿದ್ದರೂ ಅಭ್ಯರ್ಥಿಯಾಗಿ ಘೋಷಿಸಿದ್ದೀರಿ. ತುಂಬಾ ಸಂತೋಷ. ನಿಮ್ಮ ಬಿ ಫಾರಂ ಮನೆಗೇ ಕಳಿಸಿ’ ಎಂದು ಅಂಬರೀಷ್‌ ಕೋರಿದ್ದಾರೆ. ‘ನಿಮ್ಮ ಮನೆಗೆ ಕಳಿಸದೇ ಇನ್ಯಾರ ಮನೆಗೆ ಕಳಿಸಲಿ’ ಎಂದು ಪರಮೇಶ್ವರ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.