ಮಂಗಳವಾರ, ಆಗಸ್ಟ್ 4, 2020
26 °C
ಮಕ್ಕಳ ಮೇಲಿನ ಅತ್ಯಾಚಾರದ ವಿರುದ್ಧ ನಟಿ ಶಬಾನಾ ಅಜ್ಮಿ ಆಕ್ರೋಶ

‘ಬೇಟಿ ಬಚಾವೊ,’ಗಾಗಿ ಮಗಳು ಜೀವಂತವಿರಲಿ

ಪಿಟಿಐ Updated:

ಅಕ್ಷರ ಗಾತ್ರ : | |

‘ಬೇಟಿ ಬಚಾವೊ,’ಗಾಗಿ ಮಗಳು ಜೀವಂತವಿರಲಿ

ಮುಂಬೈ: ಅತ್ಯಾಚಾರಗಳ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಆಕ್ರೋಶಗಳಿಗೆ ಸಿನಿಮಾ ನಟರು ಮತ್ತು ಕ್ರೀಡಾಪಟುಗಳು ಈಗ ದನಿಗೂಡಿಸಿದ್ದಾರೆ. ಅತ್ಯಾಚಾರಿಗಳು ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೇಟಿ ಬಚಾವೊ, ಬೇಟಿ ಪಢಾವೊ (ಮಗಳನ್ನು ಉಳಿಸಿ, ಮಗಳನ್ನು ಓದಿಸಿ) ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆಂದರೆ, ಹೆಣ್ಣುಮಕ್ಕಳನ್ನು ಜೀವಂತವಾಗಿ ಮತ್ತು ಸುರಕ್ಷಿತವಾಗಿ ಇರಬೇಡವೇ’ ಎಂದು ಚಿತ್ರ ನಟಿ ಶಬಾನಾ ಅಜ್ಮಿ ಪ್ರಶ್ನಿಸಿದ್ದಾರೆ.

‘ನಮ್ಮ ದೇಶದಲ್ಲಿ ಮಹಿಳೆಯರು ಒಂದೆಡೆ ಭಾರಿ ಸಾಧನೆ ಮಾಡಿ, ಮಾದರಿ ನಾಯಕಿಯರೆನಿಸಿದ್ದಾರೆ. ಇನ್ನೊಂದೆಡೆ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಗಳಂತಹ ಸುದ್ದಿಗಳನ್ನು ಪ್ರತಿದಿನವೂ ನೋಡುತ್ತಿದ್ದೇವೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

‘ಭಾರತದಂತಹ ಸುಂದರವಾದ ದೇಶದಲ್ಲಿ ಕೆಲವು ತುಚ್ಛ ಮನುಷ್ಯರು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸುತ್ತಿರುವ ಅತ್ಯಾಚಾರಗಳು ಹಾಗೂ ಅತ್ಯಮೂಲ್ಯವಾದ ಮಕ್ಕಳ ಜೀವವನ್ನು ತೆಗೆಯುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ. ಈ ನೀಚ ಕೃತ್ಯಗಳನ್ನು ಖಂಡಿಸಬೇಕು, ಇವಕ್ಕೆಲ್ಲಾ ಕೊನೆಹಾಡಬೇಕು’ ಎಂದು ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ. ಬಾಕ್ಸರ್ ಮೇರಿ ಕೋಮ್‌ ಮತ್ತು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹ ಟ್ವೀಟ್ ಮಾಡಿದ್ದಾರೆ.

ಮೋದಿಗೆ ಪ್ರತಿಭಟನೆಯ ಸ್ವಾಗತ: ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ಗೆ ಭೇಟಿ ನೀಡುವಾಗ ಅವರನ್ನು ಪ್ರತಿಭಟನೆಯ ಮೂಲಕ ಸ್ವಾಗತಿಸಲು ಅಲ್ಲಿನ ಭಾರತೀಯರ ಸಂಘಟನೆಗಳು ನಿರ್ಧರಿಸಿವೆ.

ಭಾರತದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಅತ್ಯಾಚಾರಿಗಳಿಗೆ ಶಿಕ್ಷೆಯಾಗದಿರುವುದನ್ನು ಖಂಡಿಸಲು ಅವು ಈ ನಿರ್ಧಾರ ತೆಗೆದುಕೊಂಡಿವೆ.

ಅಂಗವಿಕಲ ಮಹಿಳೆ ಮೇಲೆ ಅತ್ಯಾಚಾರ

ಹೈದರಾಬಾದ್:
ಇಲ್ಲಿನ ವಿಜಯನಗರಂನಲ್ಲಿ ಅಂಗವಿಕಲ ಮಹಿಳೆಯೊಬ್ಬರ ಮೇಲೆ ಆಟೊ ಚಾಲಕನೊಬ್ಬ ಭಾನುವಾರ ರಾತ್ರಿ ಅತ್ಯಾಚಾರ ಎಸಗಿದ್ದಾನೆ.

ಮಹಿಳೆಯು ತನ್ನ ಸೋದರಿಯ ಮನೆಗೆ ಹೊರಟಿದ್ದರು. ಅವರನ್ನು ಕರೆದೊಯ್ಯಲು ಆಕೆಯ ಸಂಬಂಧಿಗಳು ಬರಬೇಕಿತ್ತು. ಅವರು ನಿಗದಿತ ಸಮಯಕ್ಕೆ ಬಾರದ ಕಾರಣ ಮಹಿಳೆ ಆಟೊ ಹತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ನಾನು ಆಟೊ ಹತ್ತುವ ಮುನ್ನವೇ ಇಬ್ಬರು ಪುರುಷ ಪ್ರಯಾಣಿಕರು ಅದರಲ್ಲಿದ್ದರು. ಬೇರೆ ಯಾವುದೇ ಆಟೊ ಕಾಣದಿದ್ದ ಕಾರಣ ಮತ್ತು ರಾತ್ರಿಯಾಗಿದ್ದರಿಂದ ಅದೇ ಆಟೊ ಹತ್ತಿದೆ. ಅದರೆ ನಾನು ಇಳಿಯಬೇಕಿದ್ದ ಸ್ಥಳ ಬಂದರೂ ಅವರು ಆಟೊ ನಿಲ್ಲಿಸದೆ ಮುಂದೆ ಹೋದರು. ಆಗ ನಾನು ಕಿರುಚಲಾರಂಭಿಸಿದೆ. ಆ ಇಬ್ಬರು ಪುರುಷರು ನನ್ನ ಬಾಯಿ ಮುಚ್ಚಿದರು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.

‘ಆಟೊ ಚಾಲಕ ಮತ್ತು ಆ ಇಬ್ಬರು, ಸಂತ್ರಸ್ತೆಯನ್ನು ನಿರ್ಜನ ಪ್ರದೇಶವೊಂದಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿ ಆಟೊ ಚಾಲಕ, ಅವರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆಗ ಆ ಮಹಿಳೆ ಜೋರಾಗಿ ಕೂಗಾಡಿದ್ದಾರೆ. ಆ ಜಾಗವನ್ನು ಹಾದುಹೋಗುತ್ತಿದ್ದ ಬೈಕ್ ಸವಾರರೊಬ್ಬರಿಗೆ ಮಹಿಳೆಯ ಕೂಗಾಟ ಕೇಳಿದೆ. ಸವಾರ ಜೋರಾಗಿ ಕೂಗುತ್ತಾ ಮಹಿಳೆಯತ್ತ ಹೋಗಿದ್ದಾರೆ. ಬೇರೊಬ್ಬ ವ್ಯಕ್ತಿ ತಮ್ಮತ್ತ ಬಂದದ್ದು ಗೊತ್ತಾಗುತ್ತಿದ್ದಂತೆ ಮೂವರು ಆರೋಪಿಗಳೂ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಬೈಕ್‌ ಸವಾರನೇ ಮಹಿಳೆಯನ್ನು ಆಕೆಯ ಸೋದರಿಯ ಮನೆಗೆ ತಲುಪಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದ್ದಾರೆ.

‘ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದೇವೆ. ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ದಲಿತ ಸಮುದಾಯದವರು, ಹೀಗಾಗಿ ದೌರ್ಜನ್ಯ ತಡೆ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

**

ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತದೆ ಎನ್ನುವುದು ಅತ್ಯಂತ ನೋವಿನ ಸಂಗತಿ. ಇದಕ್ಕಾಗಿ ನಾನು ಭಾರತೀಯಳಾಗಿ ವಿಷಾದಿಸುತ್ತೇನೆ ಮತ್ತು ನಾನು ಅಸಹಾಯಕಳು ಎನಿಸುತ್ತಿದೆ

– ಮೇರಿ ಕೋಮ್, ಬಾಕ್ಸರ್ ಮತ್ತು ರಾಜ್ಯಸಭಾ ಸದಸ್ಯೆ

**

ನಮ್ಮ ದೇಶದಲ್ಲಿ ಅತ್ಯಾಚಾರಗಳು ಇನ್ನು ಮುಂದೆ ಮರುಕಳಿಸಬಾರದು ಎಂದು ನಾವು ಒತ್ತಿ ಹೇಳಬೇಕಾಗಿದೆ <br/>ನಾವೆಲ್ಲಾ ಒಗ್ಗೂಡಿದರೆ ನಮ್ಮ ದೇಶ ಬದಲಾಗುತ್ತದೆ

– ಶಬಾನಾ ಅಜ್ಮಿ,ನಟಿ

**

ಉನ್ನಾವ್, ಕಠುವಾಗಳಲ್ಲಿ ಭಾರತೀಯ ಪ್ರಜ್ಞೆಯ ಕಗ್ಗೊಲೆಯಾಯಿತು. ಕೊಳೆತಿರುವ ನಮ್ಮ ವ್ಯವಸ್ಥೆ ಈಗ ಆ ಪ್ರಜ್ಞೆಯ ಮೇಲೆ ಅತ್ಯಾಚಾರ ನಡೆಸುತ್ತಿದೆ. ‘ಮಿ.ಸಿಸ್ಟಂ’ ನಿಮಗೆ ಧೈರ್ಯವಿದ್ದದ್ದೇ ಆದರೆ ಅತ್ಯಾಚಾರಿಗಳನ್ನು ಶಿಕ್ಷಿಸಿ

– ಗೌತಮ್ ಗಂಭೀರ್, ಕ್ರಿಕೆಟಿಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.