ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ವಂಚನೆ: ಸಂಸತ್‌ ಸಮಿತಿ ಚರ್ಚೆ

ಮೇ 17ರಂದು ಸಮಿತಿ ಮುಂದೆ ಉರ್ಜಿತ್‌ ಹಾಜರ್‌
Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವರದಿಯಾದ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳ ಸಂಬಂಧ, ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ಮೇ 17ರಂದು ಸಂಸತ್‌ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಲಿದ್ದಾರೆ.

ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ನೇತೃತ್ವದಲ್ಲಿನ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯು, ಮಂಗಳವಾರ ಇಲ್ಲಿ ನಡೆದ ಸಭೆಯಲ್ಲಿ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಅವರಿಂದ ಮಾಹಿತಿ ಪಡೆಯಿತು.

ಸಮಿತಿ ಕೇಳಿರುವ ಹಲವಾರು ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯದ ಅಧಿಕಾರಿಗಳು ಭಾಗಶಃ ಉತ್ತರ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ನೀಡಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ.

ಸಭೆಯಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷ ನಲ್‌ ಬ್ಯಾಂಕ್‌ಗೆ ಎಸಗಿರುವ ವಂಚನೆ ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌, ವಿಡಿಯೊಕಾನ್‌ ಸಂಸ್ಥೆಗೆ ನೀಡಿರುವ ಸಾಲ ನೀಡಿಕೆಗೆ ಸಂಬಂಧಿಸಿದ ವಿವಾದಗಳ ಕುರಿತು ಚರ್ಚಿಸಲಾಯಿತು.

ಸಭೆಯ ಮುಂದೆ ಹಾಜರಾಗಲು ಉರ್ಜಿತ್‌ ಪಟೇಲ್‌ ಅವರಿಗೆ ಕೇಳಿಕೊಳ್ಳಲಾಗಿದೆ. ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆ ಪ್ರಕರಣಗಳು ಮತ್ತು ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳ ಬಗ್ಗೆ ಅವರಿಂದ ಮಾಹಿತಿ ಪಡೆಯಲು ಸಮಿತಿ ನಿರ್ಧರಿಸಿದೆ. ಸಮಿತಿ ಸದಸ್ಯರಾಗಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ನಿಯಂತ್ರಿಸಲು ಆರ್‌ಬಿಐ ಬಳಿ ಸಾಕಷ್ಟು ಅಧಿಕಾರ ಇಲ್ಲ’ ಎಂದು ಪಟೇಲ್‌ ಅವರು ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಬ್ಯಾಂಕ್‌ಗಳಲ್ಲಿನ ವಂಚನೆ ತಡೆಗಟ್ಟಲು ಆರ್‌ಬಿಐಗೆ ಯಾವ ಬಗೆಯ ಅಧಿಕಾರ ಬೇಕು ಎನ್ನುವುದನ್ನು ಸಮಿತಿಯು ತಿಳಿದುಕೊಳ್ಳಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮತ್ತು ವಂಚನೆ ತಡೆಗಟ್ಟುವ ವಿಷಯದಲ್ಲಿ ಆರ್‌ಬಿಐನ ನಿಯಂತ್ರಣ ಕ್ರಮಗಳು ಮಹತ್ವದ ಪಾತ್ರ ನಿರ್ವಹಿಸುವುದರಿಂದ ಉರ್ಜಿತ್‌ ಪಟೇಲ್‌ ಅವರನ್ನು ಸಮಿತಿಯ ಸಭೆಗೆ ಆಹ್ವಾನಿಸಿ ಆಗಿರುವ ಲೋಪಗಳ ಕುರಿತು ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT