ಶುಕ್ರವಾರ, ಡಿಸೆಂಬರ್ 13, 2019
19 °C
ಶಶಿಕರ್ ಎಂಟರ್‌ಪ್ರೈಸಸ್’ ಗಾರ್ಮೆಂಟ್ಸ್‌ ಕಾರ್ಖಾನೆ ದಿಢೀರ್ ಬಂದ್

ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಪೀಣ್ಯದಲ್ಲಿರುವ ‘ಶಶಿಕರ್ ಎಂಟರ್‌ಪ್ರೈಸಸ್’ ಗಾರ್ಮೆಂಟ್ಸ್‌ ಕಾರ್ಖಾನೆಯನ್ನು ದಿಢೀರ್ ಬಂದ್‌ ಮಾಡಲಾಗಿದ್ದು, ಇದನ್ನು ಖಂಡಿಸಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಕಾರ್ಮಿಕ ಭವನದ ಎದುರು ‘ಗಾರ್ಮೆಂಟ್ಸ್‌ ಲೇಬರ್‌ ಯೂನಿಯನ್’ ನೇತೃತ್ವದಲ್ಲಿ ಸೇರಿದ್ದ ಕಾರ್ಮಿಕರು, ತಮಗಾದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದರು.

‘ಕಾರ್ಖಾನೆ ಬಂದ್‌ ಮಾಡಿದ್ದಕ್ಕೆ ಕಾರಣ ತಿಳಿಸಬೇಕು. ಸಂತ್ರಸ್ತ ಕಾರ್ಮಿಕರೆಲ್ಲರಿಗೂ ಪುನಃ ಕೆಲಸ ನೀಡಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಯೂನಿಯನ್ ಕಾರ್ಯದರ್ಶಿ ಕೆ.ಸರೋಜಾ, ‘ಕಾರ್ಮಿಕರಿಗೆ ಮುನ್ಸೂಚನೆ ನೀಡದೆ ಕಾರ್ಖಾನೆ ಬಂದ್‌ ಮಾಡಲಾಗಿದೆ. ಇದರಿಂದ 800 ಕಾರ್ಮಿಕರು ಬೀದಿಪಾಲಾಗಿದ್ದಾರೆ’ ಎಂದು ಹೇಳಿದರು.

‘ಕಾರ್ಖಾನೆ ಎದುರೇ ಕುಳಿತು ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಅವರ ಕೂಗಿಗೆ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಕಾರ್ಖಾನೆ ಪರವಿರುವ ಕೆಲ ಸಂಘಟನೆಗಳ ಮುಖಂಡರು, ಕಾರ್ಮಿಕರಿಗೆ ಬೆದರಿಕೆವೊಡ್ಡಿದ್ದಾರೆ. ಹೀಗಾಗಿ, ಕಾರ್ಮಿಕ ಭವನಕ್ಕೆ ಬಂದು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.

ಉಪ ಆಯುಕ್ತರಿಗೆ ಮನವಿ ಸಲ್ಲಿಕೆ: ಪ್ರತಿಭಟನಾನಿರತ ಕಾರ್ಮಿಕರಿದ್ದ ಸ್ಥಳಕ್ಕೆ ಬಂದಿದ್ದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್‌, ಮನವಿ ಸ್ವೀಕರಿಸಿದರು.

**

ಆಡಳಿತ ಮಂಡಳಿಗೆ ನೋಟಿಸ್‌ ನೀಡುತ್ತೇವೆ. ವಿಚಾರಣೆ ನಡೆಸಿ, ಕಾರ್ಮಿಕರಿಗೆ ಆದ ಅನ್ಯಾಯ ಸರಿಪಡಿಸುತ್ತೇವೆ

– ವೆಂಕಟೇಶ್‌, ಉಪ ಕಾರ್ಮಿಕ ಆಯುಕ್ತ

ಪ್ರತಿಕ್ರಿಯಿಸಿ (+)