ಚಿನ್ನಾಭರಣಕ್ಕಾಗಿ ಫೈನಾನ್ಶಿಯರ್ ಹತ್ಯೆ!

7
ಕೊಲೆ ಪ್ರಕರಣ; ಅಕ್ಕ– ತಮ್ಮ ಸೇರಿ ಮೂವರು ಆರೋಪಿಗಳ ಬಂಧನ

ಚಿನ್ನಾಭರಣಕ್ಕಾಗಿ ಫೈನಾನ್ಶಿಯರ್ ಹತ್ಯೆ!

Published:
Updated:

ಬೆಂಗಳೂರು: ಕೆ.ಆರ್.ಪುರ ಸಮೀಪದ ದೇವಸಂದ್ರದಲ್ಲಿ ನಡೆದಿದ್ದ ಫೈನಾನ್ಶಿಯರ್ ಸಂಜಯ್ ಸತೀಶ್ ಅಲಿಯಾಸ್ ‌ಶೈಲೇಶ್ (68) ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಅಕ್ಕ– ತಮ್ಮ ಸೇರಿದಂತೆ ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಶಂಕರಮಠ ಬಳಿಯ ಎಂ.ಜಿ.ನಗರದ ಸುಮತಿ ಸತ್ಯವೇಲು (23), ಆಕೆಯ ತಮ್ಮ ಕಾರ್ತಿಕ್‌ ಅಲಿಯಾಸ್‌ ಅಪ್ಪು (20) ಹಾಗೂ ಗೆಳತಿ ಸುಮಯಾ ಬಾನು (22) ಬಂಧಿತರು. ಏ. 2ರಂದು ಸಂಜಯ್‌ ಅವರನ್ನು ಕೊಂದಿದ್ದ ಈ ಮೂವರು, ₹7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್‌ ದೋಚಿಕೊಂಡು ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಎರಡು ವಿಶೇಷ ತಂಡಗಳು ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್‌ ತಿಳಿಸಿದರು.

ಮಥುರಾದಲ್ಲಿ 30 ವರ್ಷಗಳ ಹಿಂದೆ ಕ್ಯಾಸೆಟ್ ಮಾರಾಟ ಮಳಿಗೆ ನಡೆಸುತ್ತಿದ್ದ ಸಂಜಯ್‌, ಯುವತಿಯೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ವಿಚ್ಛೇದನ ನೀಡಿದ್ದ ಪತ್ನಿ, ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಸಂಜಯ್, ಬೆಂಗಳೂರಿಗೆ ಬಂದಿದ್ದರು. ಅವರ ಪುತ್ರ ನ್ಯೂಜಿಲೆಂಡ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ತಾಯಿಯೊಂದಿಗೆ ಅಲ್ಲೇ ವಾಸವಿದ್ದಾರೆ ಎಂದು ಪೊಲೀಸರು ಹೇಳಿದರು.

ಮೊದಲು ಮಲ್ಲೇಶ್ವರದಲ್ಲಿದ್ದ ಸಂಜಯ್‌, ಮನೆ ಸಮೀಪದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಉದ್ಯೋಗ ತೊರೆದು ಫೈನಾನ್ಸ್ ವ್ಯವಹಾರ ಆರಂಭಿಸಿದ್ದರು. ವರ್ಷದ ಹಿಂದಷ್ಟೇ ದೇವಸಂದ್ರಕ್ಕೆ ವಾಸ್ತವ್ಯ ಬದಲಿಸಿದ್ದರು ಎಂದರು.  

ಠಾಣೆಯಲ್ಲಿ ಪರಿಚಯವಾಗಿದ್ದ ಆರೋಪಿ: ‘ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ದೂರು ಕೊಡಲೆಂದು ಮಾರ್ಚ್‌27ರಂದು ಸಂಜಯ್‌, ಮಲ್ಲೇಶ್ವರ ಠಾಣೆಗೆ ಹೋಗಿದ್ದರು. ಪತಿಯು ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಲೆಂದು ಆರೋಪಿ ಬಾನು ಸಹ ಠಾಣೆಗೆ ಬಂದಿದ್ದರು. ಅವಾಗಲೇ ಅವರಿಬ್ಬರಿಗೂ ಪರಿಚಯವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ನಾನು ಒಬ್ಬಂಟಿಯಾಗಿದ್ದೇನೆ. ನನ್ನ ಮನೆ ಕೆಲಸಕ್ಕೆ ಒಬ್ಬ ಮಹಿಳೆ ಬೇಕು’ ಎಂದು ಸಂಜಯ್‌ ಹೇಳಿದ್ದರು. ಆಗ ಆರೋಪಿ, ತನ್ನ ಸ್ನೇಹಿತೆ ಸುಮತಿಯನ್ನು ಕರೆದುಕೊಂಡು ಮಾರ್ಚ್‌ 31ರಂದು ಅವರ ಮನೆಗೆ ಹೋಗಿದ್ದಳು. ಅದೇ ವೇಳೆ ಅವರ ಮೈ ಮೇಲಿದ್ದ ಆಭರಣ ಹಾಗೂ ಮನೆಯಲ್ಲಿದ್ದ ನಗದು ನೋಡಿದ್ದರು. ‘ಇನ್ನೆರಡು ದಿನ ಬಿಟ್ಟು ವಾಪಸ್‌ ಬರುತ್ತೇವೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದರು ಎಂದರು.

ತಮ್ಮನ ಜತೆ ಸೇರಿ ಸಂಚು: ‘ಬಂಧಿತ ಕಾರ್ತಿಕ್‌, ಈ ಹಿಂದೆ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಫೈನಾನ್ಶಿಯರ್ ಮನೆಯಲ್ಲಿದ್ದ ಆಭರಣ ಹಾಗೂ ನಗದು ದೋಚಲು ಯೋಚಿಸಿದ್ದ ಬಾನು ಹಾಗೂ ಸುಮತಿ, ಆತನ ಸಹಾಯ ಕೋರಿದ್ದರು. ಮೂವರು ಸೇರಿಯೇ ಕೃತ್ಯಕ್ಕೆ ಸಂಚು ರೂಪಿಸಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಬುರ್ಖಾ ಧರಿಸಿ ಮೊದಲಿಗೆ ಮನೆಗೆ ಹೋಗಿದ್ದ ಸುಮತಿ, ಸಂಜಯ್‌ ಕುತ್ತಿಗೆಗೆ ವೇಲ್‌ನಿಂದ ಬಿಗಿದಿದ್ದಳು. ಹಿಂದೆಯೇ ಬಂದ ಬಾನು, ಕಾಲುಗಳನ್ನು ವೇಲ್‌ನಿಂದ ಕಟ್ಟಿದ್ದಳು. ನಂತರ ಕಾರ್ತಿಕ್, ಕಣ್ಣಿಗೆ ಖಾರದ ಪುಡಿ ಎರಚಿದ್ದ. ಬಳಿಕ ಮೂವರು ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು’ ಎಂದು ವಿವರಿಸಿದರು.

‘ಏಪ್ರಿಲ್‌ 5ರಂದು ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಮನೆ ಮಾಲೀಕರು, ತಮ್ಮ ಬಳಿ ಇದ್ದ ಇನ್ನೊಂದು ಕೀ ಬಳಸಿ ಮನೆಯೊಳಗೆ ಹೋದಾಗಲೇ ಶವ ಪತ್ತೆಯಾಗಿತ್ತು’ ಎಂದು ತನಿಖಾಧಿಕಾರಿ ಹೇಳಿದರು.

ಸಿ.ಸಿ.ಟಿ.ವಿ ಕ್ಯಾಮೆರಾದಿಂದ ಸಿಕ್ಕಿಬಿದ್ದರು

‘ಕೊಲೆ ನಡೆದ ಮನೆಯ ಸುತ್ತಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕೃತ್ಯದ ನಂತರ, ಇಬ್ಬರು ಮಹಿಳೆಯರು ಹಾಗೂ ಯುವಕ ಮನೆಯಿಂದ ಹೊರಗೆ ಹೋದ ದೃಶ್ಯ ಸೆರೆಯಾಗಿತ್ತು. ಮನೆ ಬಳಿ ಮೊಬೈಲ್‌ ಬಳಸಿದವರ ಬಗ್ಗೆ ಮಾಹಿತಿ ಕಲೆಹಾಕಿದಾಗಲೇ ಆರೋಪಿಗಳ ಸುಳಿವು ಸಿಕ್ಕಿತು’ ಎಂದು ತನಿಖಾಧಿಕಾರಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry