ಸೋಮವಾರ, ಜುಲೈ 13, 2020
25 °C

ನಿರಾಸೆ ಕಂಡ ರಾಯಲ್‌ ಚಾಲೆಂಜರ್ಸ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರಾಸೆ ಕಂಡ ರಾಯಲ್‌ ಚಾಲೆಂಜರ್ಸ್ ತಂಡ

ಮುಂಬೈ: ನಾಯಕ ವಿರಾಟ್ ಕೊಹ್ಲಿ (92; 62 ಎ, 4 ಸಿ, 7 ಬೌಂ) ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಮುಂಬೈ ಇಂಡಿಯನ್ಸ್ ಬೌಲರ್‌ಗಳ ಕರಾರುವಾಕ್ ದಾಳಿಗೆ ನಲುಗಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ನಿರಂತರ ಎರಡನೇ ಸೋಲು ಕಂಡಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ವಿರಾಟ್ ಪಡೆಯನ್ನು ಮುಂಬೈ ಇಂಡಿಯನ್ಸ್‌ 46 ರನ್‌ಗಳಿಂದ ಮಣಿಸಿತು. 214 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ಆರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟದೆ ಔಟಾದರೆ ಮೂವರು 20 ರನ್‌ ಗಳಿಸಲಾಗದೆ ಮರಳಿದರು.

ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌, ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ಆಘಾತ ಅನುಭವಿಸಿದರೂ ನಾಯಕ ರೋಹಿತ್ ಶರ್ಮಾ ಮತ್ತು ಎವಿನ್ ಲ್ಯೂವಿಸ್ ಅವರ ಅಮೋಘ ಜೊತೆಯಾಟದ ಬಲದಿಂದ ಮುಂಬೈ ಇಂಡಿಯನ್ಸ್ 213 ರನ್‌ ಕಲೆ ಹಾಕಿತು.

ಮೊದಲ ಓವರ್‌ನ ಎರಡು ಎಸೆತಗಳಲ್ಲಿ ಉಮೇಶ್ ಯಾದವ್‌ ಎರಡು ವಿಕೆಟ್ ಕಬಳಿಸಿದರು. ಅವರು ಹಾಕಿದ ಮೊದಲ ಎಸೆತ ಸೂರ್ಯಕುಮಾರ್ ಯಾದವ್‌ ಅವರ ಆಫ್‌ಸ್ಟಂಪ್‌ನ ಬೇಲ್ಸ್‌ ಎಗರಿಸಿತು. ಮುಂದಿನ ಎಸೆತ ಈಶಾನ್‌ ಕಿಶನ್‌ ಅವರ ಆಫ್‌ಸ್ಟಂಪ್‌ ಉರುಳಿಸಿತು.

ನಂತರ ಮುಂಬೈ ತಂಡದ ಇನಿಂಗ್ಸ್‌ಗೆ ಆರಂಭಿಕ ಆಟಗಾರ ಎವಿನ್‌ ಲ್ಯೂವಿಸ್‌ ಮತ್ತು ನಾಯಕ ರೋಹಿತ್ ಶರ್ಮಾ ಜೀವ ತುಂಬಿದರು. ಕ್ರಿಸ್ ವೋಕ್ಸ್‌, ವಾಷಿಂಗ್ಟನ್ ಸುಂದರ್ ಮತ್ತು ಮಹಮ್ಮದ್ ಸಿರಾಜ್‌ ಅವರ ದಾಳಿಯನ್ನು ನಿರಾತಂಕವಾಗಿ ಎದುರಿಸಿದ ಈ ಜೋಡಿ ಮೂರನೇ ವಿಕೆಟ್‌ಗೆ 108 ರನ್‌ ಸೇರಿಸಿದರು.

ಐದು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದ ಲ್ಯೂವಿಸ್‌ 42 ಎಸೆತಗಳಲ್ಲಿ 65 ರನ್‌ ಗಳಿಸಿದರು. 12ನೇ ಓವರ್‌ನಲ್ಲಿ ಕೋರಿ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಕೀಪರ್‌ ಕ್ವಿಂಟನ್ ಡಿ ಕಾಕ್‌ ಪಡೆದ ಉತ್ತಮ ಕ್ಯಾಚ್‌ಗೆ ಅವರು ಬಲಿಯಾದರು.

ನಾಯಕನ ಜೊತೆಗೂಡಿದ ಕೃಣಾಲ್ ಪಾಂಡ್ಯ 40 ರನ್ ಸೇರಿಸಿ ನಿರ್ಗಮಿಸಿದರು. ಕೀರನ್ ಪೊಲಾರ್ಡ್‌ಗೆ ಮಿಂಚಲು ಆಗಲಿಲ್ಲ. 19ನೇ ಓವರ್‌ನಲ್ಲಿ ಪೊಲಾರ್ಡ್ ಔಟಾದ ನಂತರ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ನಾಯಕನಿಗೆ ಉತ್ತಮ ಸಹಕಾರ ನೀಡಿದರು. ಶತಕದತ್ತ ಹೆಜ್ಜೆ ಹಾಕಿದ್ದ ರೋಹಿತ್ ಶರ್ಮಾ (94; 52 ಎ, 5 ಸಿ, 10 ಬೌಂ) ಅಂತಿಮ ಓವರ್‌ನ ಐದನೇ ಎಸೆತದಲ್ಲಿ ಕೋರಿ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.