ಭಾನುವಾರ, ಡಿಸೆಂಬರ್ 15, 2019
20 °C
ಸಾಮೂಹಿಕ ಒಕ್ಕಣೆ ಕಣ ಉಪಯೋಗಿಸದ ರೈತರು

ರಸ್ತೆಯಲ್ಲೇ ಒಕ್ಕಣೆ: ವಾಹನ ಸವಾರರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಯಲ್ಲೇ ಒಕ್ಕಣೆ: ವಾಹನ ಸವಾರರ ಪರದಾಟ

ಯಳಂದೂರು: ತಾಲ್ಲೂಕಿನ ರೈತರ ಬೆಳೆಗಳ ಒಕ್ಕಣೆಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಕಣಗಳು ಕೆಲಸಕ್ಕೆ ಬಾರದೆ ನಿರುಪಯುಕ್ತವಾಗುತ್ತಿವೆ. ರೈತರು ಕಣವನ್ನು ಬಿಟ್ಟು ಒಕ್ಕಣೆ ಮಾಡುವುದಕ್ಕೆ ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ಇಂಥ ರಸ್ತೆಯಲ್ಲಿ ಸಂಚರಿಸಲು ವಾಹನ ಚಾಲಕರು ಪರದಾಡುವಂತಾಗಿದೆ.

ತಾಲ್ಲೂಕಿನ ಸುಮಾರು 5000ಕ್ಕೂ ಹೆಚ್ಚು ಹೇಕ್ಟರ್ ಕೃಷಿ ಜಮೀನಲ್ಲಿ ಭತ್ತ, ರಾಗಿ, ಜೋಳ, ಉದ್ದು, ಹುರಳಿ, ಅಲಸಂದೆ, ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಕೃಷಿ ಇಲಾಖೆಯು ಎಲ್ಲ ಗ್ರಾಮಗಳಲ್ಲೂ ಸಾಮೂಹಿಕ ಒಕ್ಕಣೆ ಕಣ ಹಾಗೂ ವೈಯುಕ್ತಿಕ ಕಣ ನಿರ್ಮಿಸಲು ಹೆಚ್ಚಿನ ಯೋಜನೆ ರೂಪಿಸದ ಕಾರಣ ಒಕ್ಕಣೆ ಕಾರ್ಯಕ್ಕೆ ಅಡ್ಡಿಯಾಗಿದೆ.

ತಮ್ಮ ಜಮೀನುಗಳಲ್ಲಿ ಕಣಗಳನ್ನು ನಿರ್ಮಿಸಿಕೊಳ್ಳಲು ಮುಂದಾಗದ ಬಹುತೇಕ ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡಲು ಮುಂದಾಗುತ್ತಿರುವುದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಯಳಂದೂರು, ಬಿಳಿಗಿರಿ ರಂಗನಬೆಟ್ಟ, ಕೆಸ್ತೂರು, ಮದ್ದೂರು, ವೈ.ಕೆ.ಮೋಳೆ, ಗೌಡಹಳ್ಳಿ ಸೇರಿದಂತೆ ಈ ಮಾರ್ಗದಲ್ಲಿ ಸಂಚಾರ ಮಾಡುವ ವಾಹನಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಳೆಗಳನ್ನು ರಸ್ತೆಗೆ ಹಾಕದಂತೆ ಅರಿವು ಮೂಡಿಸಿ ವಾಹನ ಸವಾರರಿಗೆ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸಬೇಕು, ಕೃಷಿ ಇಲಾಖೆಯು ಎಲ್ಲಾ ಗ್ರಾಮಗಳಲ್ಲಿ ಸಾಮೂಹಿಕ ಒಕ್ಕಣೆ ಕಣ ಹಾಗೂ ವೈಯುಕ್ತಿಕ ಕಣ ನಿರ್ಮಿಸಲು ಮುಂದಾಗಬೇಕು ಎಂಬುದು ವಾಹನ ಸವಾರರಾದ ಆಸಿಫ್, ಸುಂದರರಾಜು ಅವರ ಕೋರಿಕೆಯಾಗಿದೆ.

ರಸ್ತೆಗಳೇ ಕಣ: ತಾಲ್ಲೂಕಿನ ದುಗ್ಗಹಟ್ಟಿ, ಹೊನ್ನೂರು, ಗುಂಬಳ್ಳಿ, ಗೌಡಹಳ್ಳಿ, ಯರಂಗಬಳ್ಳಿ, ಅಗರ, ಯರಿಯೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಾಮೂಹಿಕ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ರೈತರು ಮಾತ್ರ ರಸ್ತೆಯಲ್ಲಿ ರಾಗಿ, ಮುಸುಕಿನಜೋಳ, ಹುರುಳಿ ಹಾಕುತ್ತಿದ್ದಾರೆ. ಅಲ್ಲದೇ ಗಾಳಿ ಬಂದಾಗ ಕಾಳನ್ನು ರಸ್ತೆ ಬದಿಯಲ್ಲೇ ತೂರುವುದರಿಂದ ದೂಳು  ವಾಹನ ಸವಾರರ ಕಣ್ಣಿಗೆ ಬೀಳುತ್ತದೆ. ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಅಪಾಯವಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಿದೆ.

ಜಾಗೃತಿ ಮೂಡಿಸಿ: ‘ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ಅಪಾಘಾತಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ಸಾಮೂಹಿಕ ಒಕ್ಕಣೆ ಕಣ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಮಾಹಿತಿ ನೀಡಿ, ರಸ್ತೆಗಳಲ್ಲಿ ಒಕ್ಕಣೆ ಮಾಡದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಸಿದ್ದಪ್ಪಸ್ವಾಮಿ.

‘ಕೃಷಿ ಇಲಾಖೆಯ ವತಿಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 8ಕ್ಕೂ ಹೆಚ್ಚು ಸಾಮೂಹಿಕ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ರೈತರು ಉಪಯೋಗಿಸುತ್ತಿಲ್ಲ. ಇದರಿಂದ  ಇರುವ ಕಣಗಳೇ ನಿರುಪಯುಕ್ತವಾಗಿವೆ. ರೈತರ ಜಮೀನುಗಳಲ್ಲಿ ವೈಯುಕ್ತಿ ಕಣಗಳ ನಿರ್ಮಾಣ ಮಾಡುವುದಕ್ಕೂ ರೈತರು ಆಸಕ್ತಿ ತೋರಿಸುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೊಡ್ಡೇಗೌಡ ತಿಳಿಸಿದರು.

 

ಪ್ರತಿಕ್ರಿಯಿಸಿ (+)