ಸುಳ್ಳು ಸುದ್ದಿಗೆ ಬೇಸ್ತು ಬಿದ್ದ ಜನ!

7
ತಿಪ್ಪಗಾನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ₨120 ಕೋಟಿ ವಶ, ನಕಲಿ ಚಿತ್ರ ವೈರಲ್

ಸುಳ್ಳು ಸುದ್ದಿಗೆ ಬೇಸ್ತು ಬಿದ್ದ ಜನ!

Published:
Updated:

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿ ಗ್ರಾಮದ ಚೆಕ್‌ಪೋಸ್ಟ್ ಬಳಿ ಮಂಗಳವಾರ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹ 120 ಕೋಟಿ ಹಣವನ್ನು ಮಾದರಿ ನೀತಿ ಸಂಹಿತೆ (ಎಂಸಿಸಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

– ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಹರಿದಾಡುತ್ತ ವೈರಲ್ ಆದ ಇಂತಹದೊಂದು ಸುದ್ದಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಸುದ್ದಿಯ ಜಾಡು ಹಿಡಿಯಲು ಮುಂದಾದ ಪತ್ರಕರ್ತರಂತೂ ಇದೊಂದು ಸುಳ್ಳು ಸುದ್ದಿ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿದ್ದಂತೆ ಬೇಸ್ತು ಬಿದ್ದರೂ, ಮತ್ತೆ ಮತ್ತೆ ಸುದ್ದಿ ಖಾತ್ರಿ ಪಡಿಸಿಕೊಳ್ಳಲು ಅನೇಕ ಅಧಿಕಾರಿಗಳಿಗೆ ಕರೆ ಮಾಡಿದರು.

ಬೆಳಿಗ್ಗೆಯಿಂದಲೇ ಕಾಳ್ಗಿಚ್ಚಿನಂತೆ ಹರಿದಾಡಿದ ಈ ಸುದ್ದಿ ರಾಜಕೀಯ ವಲಯದಲ್ಲಿ ಅನೇಕ ಚರ್ಚೆಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಹಣ ಯಾವ ರಾಜಕಾರಣಿಗೆ ಸೇರಿರಬಹುದು? ಅದರ ಮೂಲ ಯಾವುದು? ಪರಿಣಾಮ ಏನಾಗಬಹುದು? ಹೀಗೆ ಹತ್ತು ಹಲವು ಉತ್ತರವಿಲ್ಲದ ಪ್ರಶ್ನೆಗಳು ಜನರ ನಡುವೆ ವಿನಿಮಯವಾಗುತ್ತಿದ್ದವು.

ಈ ಕುರಿತು ಗೌರಿಬಿದನೂರು ಕ್ಷೇತ್ರದ ಚುನಾವಣಾಧಿಕಾರಿ ಮಹಮದ್ ಅತಿಖುಲ್ಲಾ ಷರೀಫ್ ಅವರನ್ನು ವಿಚಾರಿಸಿದರೆ, ‘ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತಹ ಪ್ರಕರಣ ದಾಖಲಾಗಿಲ್ಲ. ಅದೊಂದು ಸುಳ್ಳು ಸುದ್ದಿ. ನೆರೆಯ ದೊಡ್ಡಬಳ್ಳಾಪುರ ಗುಂಜೂರು ಚೆಕ್‌ಪೋಸ್ಟ್‌ನಲ್ಲಿ ಆ ಹಣ ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಬರುತ್ತಿದೆ’ ಎಂದು ಹೇಳಿದರು.

ದೊಡ್ಡಬಳ್ಳಾಪುರದ ಕೆಲವರನ್ನು ವಿಚಾರಿಸಿದರೆ, ‘ತಿಪ್ಪಗಾನಹಳ್ಳಿ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ನಾಲ್ಕೈದು ದಿನಗಳ ಹಿಂದೆ ಈ ಪ್ರಕರಣ ನಡೆದಿದೆ. ಬಸ್‌ ಕೂಡ ಜಪ್ತಿ ಮಾಡಲಾಗಿದೆ. ಹೆಚ್ಚು ಹಣವಿರುವ ಕಾರಣಕ್ಕೆ ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ತಿಳಿಸಿದರು.

ಕೊನೆಗೆ ಜಿಲ್ಲಾ ಚುನಾವಣಾಧಿಕಾರಿ ದೀಪ್ತಿ ಕಾನಡೆ ಅವರನ್ನು ಪ್ರಶ್ನಿಸಿದರೆ, ‘ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಸುಳ್ಳು ಸುದ್ದಿ. ಒಂದು ಚಿತ್ರದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ನಿಂತಿರುವುದು ಕಾಣುತ್ತದೆ. ಆ ಬಗ್ಗೆ ಎಸ್‌್ಪಿ ಅವರಿಗೆ ವಿಚಾರಿಸಿರುವೆ. ಅವರು ನಮ್ಮ ಜಿಲ್ಲೆಯ ಪೊಲೀಸರಲ್ಲ ಎಂದು ದೃಢಪಡಿಸಿದ್ದಾರೆ. ಯಾರೂ ಇಂತಹ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry