ಗುರುವಾರ , ಡಿಸೆಂಬರ್ 12, 2019
17 °C
ಗೌರಿಬಿದನೂರಿನ ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಕಮಲ ತಂತ್ರ, ಮುಖಂಡರ ಸಮಾಧಾನಪಡಿಸಿ ಉದ್ಯಮಿಗೆ ಬಿ.ಫಾರ್ಮ್

ಬಿಜೆಪಿ ಟಿಕೆಟ್ ಗಿಟ್ಟಿಸಿದ ಉದ್ಯಮಿ ಜೈಪಾಲ್ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಟಿಕೆಟ್ ಗಿಟ್ಟಿಸಿದ ಉದ್ಯಮಿ ಜೈಪಾಲ್ ರೆಡ್ಡಿ

ಚಿಕ್ಕಬಳ್ಳಾಪುರ:  ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಗೌರಿಬಿದನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಉದ್ಯಮಿ ಕೆ.ಜೈಪಾಲ್ ರೆಡ್ಡಿ ಯಶಸ್ವಿಯಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜೈಪಾಲ್ ರೆಡ್ಡಿ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಮಲ ಪಾಳೆಯದಲ್ಲೇ ಆಂತರಿಕ ಕಲಹ ತಲೆದೋರಿತ್ತು.

ಬಿಜೆಪಿ ಟಿಕೆಟ್‌ಗಾಗಿ ಮುಖಂಡರಾದ ಜೈಪಾಲ್ ರೆಡ್ಡಿ, ರವಿನಾರಾಯಣರೆಡ್ಡಿ, ಸಿ.ಆರ್.ನರಸಿಂಹಮೂರ್ತಿ ಮತ್ತು ಎಚ್‌.ವಿ.ಶಿವಶಂಕರ್ ಅವರು ನಡುವೆ ಪೈಪೋಟಿ ನಡೆದಿತ್ತು. ಈ ಪೈಕಿ ಟಿಕೆಟ್ ಕೈತಪ್ಪುವ ಸುಳಿವು ದೊರೆಯುತ್ತಿದ್ದಂತೆ ನರಸಿಂಹಮೂರ್ತಿ ಅವರು ಇತ್ತೀಚೆಗೆ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು. ಹೀಗಾಗಿ ಇದೀಗ ಟಿಕೆಟ್‌ಗೆ ತ್ರೀಕೋನ ಪೈಪೋಟಿ ಏರ್ಪಟ್ಟಿತ್ತು ಎನ್ನಲಾಗಿದೆ.

‘ಇತ್ತೀಚೆಗಷ್ಟೇ ಯಡಿಯೂರಪ್ಪ ಅವರು ಜೈಪಾಲ್ ರೆಡ್ಡಿ ಅವರನ್ನು ತಮ್ಮ ಬೆಂಗಳೂರು ನಿವಾಸಕ್ಕೆ ಕರೆಯಿಸಿಕೊಂಡು ಪಕ್ಷದ ಬಿ.ಫಾರ್ಮ್ ನೀಡಿ, ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶತಾಯಗತಾಯ ಗೌರಿಬಿದನೂರಿನಲ್ಲಿ ಈ ಬಾರಿ ಬಿಜೆಪಿ ಗೆಲ್ಲಿಸಬೇಕು ಎಂದು ಹೇಳಿದ್ದಾರೆ’ ಎಂದು ತಿಳಿದು ಬಂದಿದೆ.

ಜಿಲ್ಲಾ ಘಟಕದ ಅಧ್ಯಕ್ಷರಿಗೆ ಗೊತ್ತಿಲ್ಲ!

ಈ ಕುರಿತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜು ನಾಥ್ ಅವರನ್ನು ಕೇಳಿದರೆ, ‘ಗೌರಿಬಿದ ನೂರು ಕ್ಷೇತ್ರದ ಅಭ್ಯರ್ಥಿ ಅಂತಿಮ ಮಾಡಲಾಗಿದೆ. ಆದರೆ ಅಧಿಕೃತ ಘೋಷಣೆಯಾಗಿಲ್ಲ. ನಾಳೆ ಪ್ರಕಟವಾಗಬಹುದು. ಜೈಪಾಲ್ ರೆಡ್ಡಿ ಅವರಿಗೆ ಬಿ.ಫಾರ್ಮ್ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ತಿಳಿದುಬಂದಿಲ್ಲ’ ಎಂದು ಹೇಳಿದರು.

ಜೈಪಾಲ್ ರೆಡ್ಡಿ ಅವರಿಗೆ ಈ ಬಗ್ಗೆ ವಿಚಾರಿಸಿದರೆ, ‘ಹೌದು ಯಡಿಯೂರಪ್ಪ ಅವರು ನನಗೆ ಬಿ.ಫಾರ್ಮ್ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಗೊತ್ತಾಗಿದೆಯೋ ಇಲ್ಲವೋ ಗೊತ್ತಿಲ್ಲ. ಗೊತ್ತಿರಬಹುದು.

ಪಕ್ಷದಿಂದ ಮಾಹಿತಿ ಬಂದಿರುತ್ತದೆ. ಅದರ ಬಗ್ಗೆ ಮಾತನಾಡೋಣ ಬಿಡಿ. ಸದ್ಯ ಸ್ಥಳೀಯ ರೆಲ್ಲರೂ ಚೆನ್ನಾಗಿದ್ದಾರೆ. ಬಂಡಾಯವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ನರಸಿಂಹಮೂರ್ತಿ ಅವರು ಪಕ್ಷ ತೊರೆದಿರುವುದರಿಂದ ಏನು ತೊಂದರೆ ಇಲ್ಲ’ ಎಂದು ತಿಳಿಸಿದರು.

ಏ.19 ರಂದು ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸಲು ಜೈಪಾಲ್ ರೆಡ್ಡಿ ಮುಹೂರ್ತ ನಿಗದಿ ಮಾಡಿದ್ದಾರೆ. ಸದ್ಯ ಟಿಕೆಟ್ ವಿಚಾರವಾಗಿ ಎದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದ್ದು, ಈ ಬಾರಿ ಬಿಜೆಪಿ ಟಿಕೆಟ್ ಪಡೆಯಲೇಬೇಕು ಎಂದು ಟೊಂಕಕಟ್ಟಿ ನಿಂತಿದ್ದ ಪರಿಶಿಷ್ಟ ವರ್ಗಗಳ ಮುಖಂಡರಾದ ಎಚ್.ವಿ.ಶಿವಶಂಕರ್ ಅವರಿಗೆ ಹೈಕಮಾಂಡ್ ತೀರ್ಮಾನ ನುಂಗಲಾರದ ಬಿಸಿ ತುಪ್ಪದಂತಾಗಿದೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ಈವರೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಾ.ಜಿ.ವಿ.ಮಂಜುನಾಥ್ ಎಂದು ಘೋಷಿಸಿದೆ. ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿಗಳು ಹೆಸರು ಈವರೆಗೆ ಅಧಿಕೃತವಾಗಿ ಪ್ರಕಟವಾಗಿಲ್ಲ.

ರವಿನಾರಾಯಣರೆಡ್ಡಿ ಬೆಂಬಲಿಗರ ಸಭೆ

ಗೌರಿಬಿದನೂರು: ಅತ್ತ ಜೈಪಾಲ್ ರೆಡ್ಡಿ ಅವರಿಗೆ ಬಿಜೆಪಿ ಬಿ.ಫಾರ್ಮ್ ದೊರೆತದ್ದ ತಿಳಿಯುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ರವಿನಾರಾಯಣ ರೆಡ್ಡಿ ಅವರು ಮಂಗಳವಾರ ಮಧ್ಯಾಹ್ನ ನಾಗಸಂದ್ರದಲ್ಲಿ ತಮ್ಮ ಬೆಂಗಲಿಗರ ಸಭೆ ನಡೆಸಿದ್ದು ಗಮನ ಸೆಳೆಯಿತು.

ಸಭೆಯಲ್ಲಿ ಮಾತನಾಡಿದ ರವಿನಾರಾಯಣ ರೆಡ್ಡಿ, ‘ಕಳೆದ ಒಂದು ದಶಕದಿಂದ ತಾಲ್ಲೂಕಿನಲ್ಲಿ ಬಿಜೆಪಿ ಸಂಘಟಿಸಿರುವೆ. ಇದೀಗ ಬೆಂಬಲಿಗರು ಮತ್ತು ಮುಖಂಡರ ಸಲಹೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ಮುಖಂಡ ಜೆ.ವಿ.ಹನುಮೇಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ಬಿಜೆಪಿ ಸಂಘಟನೆ ವಿಚಾರದಲ್ಲಿ ರವಿನಾರಾಯಣ ರೆಡ್ಡಿ ಅವರ ಶ್ರಮ ಅಪಾರವಾಗಿದೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಯುವ ಕಾರ್ಯಕರ್ತರು ಮತ್ತು ಪಕ್ಷದ ಹಿರಿಯ ಮುಖಂಡರ ನಡುವೆ ಜೈಪಾಲ್ ರೆಡ್ಡಿ ಅವರ ವಿಚಾರವಾಗಿ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ನಂತರ ಮುಖಂಡ ಭರತ್ ರೆಡ್ಡಿ ಮಧ್ಯಪ್ರವೇಶಿಸಿ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಕರ್ತರ ಜವಾಬ್ದಾರಿಗಳ ಬಗ್ಗೆ ಮಾತ್ರ ಚರ್ಚಿಸುವಂತೆ ಹೇಳಿ ಎಲ್ಲರನ್ನೂ ಸಮಾಧಾನಪಡಿಸಿದರು.

‘ನನಗೆ ಅಸಮಾಧಾನವಿಲ್ಲ’

‘ಜೈಪಾಲ್ ರೆಡ್ಡಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬೇಸರವಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ’ ಎಂದು ಹೇಳಿದರು.

‘ಬೆಂಬಲಿಗರ ಸಭೆ ನಡೆಸಿರುವ ಬಗ್ಗೆ ರವಿನಾರಾಯಣ ರೆಡ್ಡಿ ಅವರಿಗೆ ವಿಚಾರಿಸಿದರೆ, ‘ಕ್ಷೇತ್ರದಲ್ಲಿ ತುಂಬಾ ಶಿಸ್ತಿನಿಂದ ಪಕ್ಷ ಬೆಳೆಸಿದ್ದೇವೆ. ಆದ್ದರಿಂದ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಮ್ಮ ಬೆಂಬಲಿಗರು ಬೇಸರಗೊಂಡಿದ್ದರು. ಹೀಗಾಗಿ ಅವರನ್ನು ಸಮಾಧಾನಪಡಿಸಲು ಸಭೆ ಕರೆಯಲಾಗಿತ್ತು. ಎಲ್ಲರ ಮನವೊಲಿಸುವ ಕೆಲಸ ಮಾಡಿದ್ದೇವೆ’ ಎಂದು ತಿಳಿಸಿದರು.

 

ಪ್ರತಿಕ್ರಿಯಿಸಿ (+)