ಸ್ವತಂತ್ರವಾಗಿ ಸ್ಪರ್ಧೆ; ಪ್ರಚಾರ ಶುರು: ಶ್ರೀನಿವಾಸ್‌

7
ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಹೇಳಿಕೆ

ಸ್ವತಂತ್ರವಾಗಿ ಸ್ಪರ್ಧೆ; ಪ್ರಚಾರ ಶುರು: ಶ್ರೀನಿವಾಸ್‌

Published:
Updated:

ಚಿಕ್ಕಮಗಳೂರು: ‘ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿ ಪ್ರಚಾರ ಆರಂಭಿಸಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಾಮಪತ್ರ ಸಲ್ಲಿಸುತ್ತೇನೆ’ ಎಂದು ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌.ಶ್ರೀನಿವಾಸ್‌ ತಿಳಿಸಿದರು.

ಮಂಗಳವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದೆ. ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಜೆಡಿಎಸ್‌ ಅಥವಾ ಇನ್ನಾವುದೇ ಪಕ್ಷದವರನ್ನು ಸಂಪರ್ಕಿಸಿಲ್ಲ. ಪಕ್ಷೇತರವಾಗಿ ಕಣಕ್ಕಿಳಿಯಲು ತೀರ್ಮಾನಿಸಿ ತರೀಕೆರೆ ಪಟ್ಟಣದಲ್ಲಿ ಪ್ರಚಾರ ಶುರು ಮಾಡಿದ್ದೇನೆ’ ಎಂದು ತಿಳಿಸಿದರು.

‘ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಕೈಹಿಡಿಯಲಿವೆ. ಮತದಾರರು ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಚುನಾವಣೆಗೆ ಸಮಯ ಬಹಳ ಕಡಿಮೆ ಇದೆ. ಹೀಗಾಗಿ, ತ್ವರಿತವಾಗಿ ನಿರ್ಧಾರ ಕೈಗೊಂಡು ಮುನ್ನಡೆಯುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ದಿನ 10 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಸೇರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವು ಕುರುಬ ಸಮುದಾಯದ ಟಿ.ಎಚ್‌.ಶಿವಶಂಕರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿ ಪಕ್ಷೇತರವಾಗಿ ಕಣಕ್ಕಿಳಿಯುತ್ತಿರುವ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಅವರೂ ಕುರುಬ ಸಮುದಾಯದವರು. ಕ್ಷೇತ್ರದಲ್ಲಿನ ಪ್ರಬಲ ಸಮುದಾಯಗಳ ಪೈಕಿ ಕುರುಬ ಸಮುದಾಯವೂ ಒಂದು. ಆದರೆ, ಇಬ್ಬರು ಕಣಕ್ಕಿಳಿಯುತ್ತಿರುವುದು ಸಮುದಾಯದವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕಾಂಗ್ರೆಸ್‌ ಪಕ್ಷವು ಮಾಜಿ ಶಾಸಕ ಲಿಂಗಾಯತ ಸಮುದಾಯದ ಎಸ್‌.ಎಂ.ನಾಗರಾಜ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಲಿಂಗಾಯತದ ಸಮುದಾಯದ ಒಬ್ಬರು, ಮಡಿವಾಳ ಸಮುದಾಯದ ಒಬ್ಬರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಬಂಡಾಯದ ಬಿಸಿ ತಗುಲುವ ಸುಳಿವು ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry