ಒಣಗಿದ ತೋಟಗಳು ನಿರ್ಲಕ್ಷ್ಯಕ್ಕೆ ನಿದರ್ಶನ

7
ಸರ್ಕಾರದ ನಿರ್ಲಕ್ಷ್ಯಕ್ಕೆ ನಿದರ್ಶನ ಒಣಗಿರುವ ತೋಟಗಳು

ಒಣಗಿದ ತೋಟಗಳು ನಿರ್ಲಕ್ಷ್ಯಕ್ಕೆ ನಿದರ್ಶನ

Published:
Updated:

ಹಿರಿಯೂರು: ಜನರ ತೆರಿಗೆ ಹಣದಲ್ಲಿ ಒಂದೆರಡು ಭಾಗ್ಯಗಳನ್ನು ಕಲ್ಪಿಸಿ, ಅದೇ ದೊಡ್ಡ ಸಾಧನೆ ಎಂಬಂತೆ ಬೀಗುತ್ತಿರುವ ಕಾಂಗ್ರೆಸ್ ಮುಖಂಡರು ಒಮ್ಮೆ ಹಳ್ಳಿಗಳನ್ನು ತಿರುಗಬೇಕು. ತೆಂಗು, ಅಡಿಕೆ ಬೆಳೆಗಾರರ ಸ್ಥಿತಿ ಏನಾಗಿದೆ ಎಂದು ನೋಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ ಸವಾಲು ಹಾಕಿದರು.

ತಾಲ್ಲೂಕಿನ ಗೌನಹಳ್ಳಿ, ಕೆ.ಆರ್. ಹಳ್ಳಿ, ಡಿ. ಮಂಜುನಾಥ ನಗರದಲ್ಲಿ ಮಂಗಳವಾರ ಬೆಂಬಲಿಗರೊಂದಿಗೆ ಮತ ಯಾಚಿಸಿ ಅವರು ಮಾತನಾಡಿದರು.

ಹಿರಿಯೂರು ತಾಲ್ಲೂಕು ಒಂದರಲ್ಲೇ 12,500 ತೆಂಗಿನ ಮರಗಳು, 13 ಸಾವಿರ ಅಡಿಕೆ ಮರಗಳು ನೀರಿಲ್ಲದೇ ಒಣಗಿವೆ. ಇದರ ಹೊಣೆಯನ್ನು ನೇರವಾಗಿ ಶಾಸಕರು ಹೊರಬೇಕಾಗುತ್ತದೆ. ಕಳೆದ ವರ್ಷ ಜಲಾಶಯದಿಂದ ನಾಲೆಗಳಲ್ಲಾದರೂ ನೀರು ಹರಿಸಿ ಎಂದು ಜೆಡಿಎಸ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆವು. ಸ್ಥಳೀಯ ಶಾಸಕರು ಸೌಜನ್ಯಕ್ಕೂ ಬಂದು ಧರಣಿ ನಿರತರನ್ನು ಮಾತನಾಡಿಸಲಿಲ್ಲ. ರೈತರ ಗೋಳು ಆಲಿಸಲಿಲ್ಲ. ನಾಲೆಗಳ ಮೂಲಕ ನೀರು ಹರಿಸಿದ್ದರೆ ಕೊಳವೆಬಾವಿಗಳು ಚೇತರಿಸಿಕೊಳ್ಳುತ್ತಿದ್ದವು. ತೋಟಗಳು ಉಳಿಯುತ್ತಿದ್ದವು. ಮತ್ತೆ ಅಂತಹ ತೋಟಗಳನ್ನು ಬೆಳೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಚುನಾವಣೆ ಸಮೀಪಿಸಿರುವಾಗ ಕ್ಷೇತ್ರದ ಜನರನ್ನು ಕರೆದೊಯ್ದು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಪ್ರಗತಿಯನ್ನು ಶಾಸಕರು ತೋರಿಸುತ್ತಿದ್ದಾರೆ. ಇನ್ನೂ ಕಾಮಗಾರಿ ಎಷ್ಟು ಬಾಕಿ ಇದೆ? ಅದು ಮುಗಿಯಲು ಎಷ್ಟು ಕಾಲ ಬೇಕು? ಯೋಜನೆ ಮುಗಿದರೂ ನಮಗೆ ಬರುವ ನೀರಿನ ಪ್ರಮಾಣ ಎಷ್ಟು? ಎಂಬ ಮಾಹಿತಿ ಅವರಿಗೆ ಇಲ್ಲ ಎಂದು ದೂರಿದರು.

ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಸಿಎಂ ಆದರೆ, ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇವೆ ಎಂದು ಯಶೋಧರ ಭರವಸೆ ನೀಡಿದರು.

‘ನಾನು ಕೃಷಿಕ ಕುಟುಂಬದಿಂದ ಬಂದವನು. ರೈತರ ಕಷ್ಟಗಳ ಬಗ್ಗೆ ನನಗೆ ಯಾರೂ ಕಲಿಸಿಕೊಡಬೇಕಿಲ್ಲ. ಇಲ್ಲಿನ ರಾಜಕೀಯವನ್ನು ವ್ಯಾಪಾರಕ್ಕೆ ಬಳಸುವ ವ್ಯಕ್ತಿ ನಾನಲ್ಲ. ಅದರ ಅಗತ್ಯವೂ ಇಲ್ಲ. ಒಮ್ಮೆ ಮತ ನೀಡಿ ಸೇವೆ ಸಲ್ಲಿಸಲು ಅವಕಾಶ ಕೊಡಿ’ ಎಂದು ಅವರು ಮನವಿ ಮಾಡಿದರು.

ಪ್ರಚಾರದಲ್ಲಿ ಬಿ.ಎಚ್. ಮಂಜುನಾಥ್, ಎಂ. ಜಯಣ್ಣ, ಅಪ್ಪಣ್ಣ, ವಿಶ್ವನಾಥ್, ಕೆ.ಮಂಜುನಾಥ್, ಮಸ್ಕಲ್ ಶ್ರೀನಿವಾಸ್, ಬಸವರಾಜ್, ನಾಗೇಂದ್ರಪ್ಪ, ಕೆ.ಜಿ. ಹನುಮಂತರಾಯಪ್ಪ, ಸೈಯದ್ ಸಲಾವುದ್ದೀನ್, ನಾಗೇಂದ್ರಪ್ಪ, ರಾಮಚಂದ್ರಪ್ಪ, ನಾಗೇಂದ್ರಪ್ಪ, ಪಾಂಡುರಂಗ ತೊಡಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry