ಚುರುಕುಗೊಂಡ ರಾಜಕೀಯ ಬೆಳವಣಿಗೆ

7
ಕಾಂಗ್ರೆಸ್‌ ತ್ಯಜಿಸುವತ್ತ ಗೋಪಾಲಕೃಷ್ಣ ಚಿತ್ತ, ತಿಪ್ಪೇಸ್ವಾಮಿ ನಡೆ ಇನ್ನೂ ನಿಗೂಢ

ಚುರುಕುಗೊಂಡ ರಾಜಕೀಯ ಬೆಳವಣಿಗೆ

Published:
Updated:

ಮೊಳಕಾಲ್ಮುರು: ಎಲ್ಲಾ ಪಕ್ಷಗಳ ಟಿಕೆಟ್‌ ಹಂಚಿಕೆ ಅಂತಿಮಗೊಂಡ ನಂತರ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ವ್ಯಾಪಕವಾಗಿ ಗರಿಗೆದರಿವೆ.

ಬಿ. ಶ್ರೀರಾಮುಲು ಸ್ಪರ್ಧೆ, ಹಾಲಿ ಶಾಸಕ ಎಸ್‌. ತಿಪ್ಪೇಸ್ವಾಮಿ ವಿರೋಧ, ರಾಮುಲು ವಿರುದ್ಧ ತೀವ್ರ ಪ್ರತಿಭಟನೆಗಳ ಮೂಲಕ ರಾಜ್ಯದ ಗಮನ ಸೆಳೆಯುವ ಮೂಲಕ ಈ ಕ್ಷೇತ್ರ ಈಗ ಮುಖ್ಯವಾಹಿನಿಗೆ ಬಂದಿದೆ. ಪ್ರಸ್ತುತ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ನಡೆಯುತ್ತಿರುವ ಟಿಕೆಟ್‌ ವಿದ್ಯಮಾನ ಮೂಲಕವೂ ಗಮನ ಸೆಳೆಯುವುದು ಹೆಚ್ಚಿದೆ.

ಕಾಂಗ್ರೆಸ್‌ ಟಿಕೆಟ್‌ ಅನ್ನು ಜಿಲ್ಲಾ ಪಂಚಾಯ್ತಿ ಬಿ.ಜಿ.ಕೆರೆ ಕ್ಷೇತ್ರದ ಸದಸ್ಯ ಯುವಕ ಡಾ. ಯೋಗೇಶ್‌ ಬಾಬು ಅವರಿಗೆ ನೀಡಲಾಗಿದೆ. ಇದು ಕ್ಷೇತ್ರದ ಅಚ್ಚರಿ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿ 20 ವರ್ಷಗಳಿಂದ ಕಾಂಗ್ರೆಸ್‌ನ ಸಕ್ರಿಯ ರಾಜಕಾರಣಿ ಹಾಗೂ ಈ ಕ್ಷೇತ್ರದ ಟಿಕೆಟ್‌ ಆಂಕಾಕ್ಷಿಯಾಗಿದ್ದ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ಕೈತಪ್ಪಿದೆ. ಜತೆಗೆ ಅವರಿಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲೂ ಟಿಕೆಟ್‌ ಸಿಕ್ಕಿಲ್ಲ.

ಪ್ರಭಾವಿ ಶ್ರೀರಾಮುಲು ಎದುರು ಯೋಗೇಶ್‌ ಬಾಬುಗೆ ಟಿಕೆಟ್‌ ನೀಡುವ ಮೂಲಕ ಬಿಜೆಪಿಗೆ ಕಾಂಗ್ರೆಸ್‌ ‘ಟಾಂಗ್‌’ ನೀಡಿದೆ. ರಾಮುಲು ಹೊರಗಿನವರು. ಸುಲಭವಾಗಿ ಜನರಿಗೆ ಸಿಗುವುದಿಲ್ಲ. ಆದ್ದರಿಂದ ಸ್ಥಳೀಯನಾದ ಯೋಗೇಶ್‌ ಬಾಬು ಬೆಂಬಲಿಸಿ ಎಂಬ ‘ಅಜೆಂಡಾ’ವನ್ನು ಕಾಂಗ್ರೆಸ್‌ ಮತದಾರರ ಮುಂದಿಟ್ಟಿದೆ. ಈ ಕಾರ್ಯತಂತ್ರ ಖಂಡಿತ ಫಲ ನೀಡಲಿದೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಎನ್‌ವೈಜಿ ನಡೆ ಬಿಜೆಪಿಯತ್ತ: ಎನ್.ವೈ.

ಗೋಪಾಲಕೃಷ್ಣಗೆ ಮೊಳಕಾಲ್ಮುರು ಹಾಗೂ ಬಳ್ಳಾರಿ ಎರಡೂ ಕಡೆ ಟಿಕೆಟ್‌ ಕೈತಪ್ಪಿರುವ ಪರಿಣಾಮ ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ನಿಗೂಢವಾಗಿದೆ. ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಾನು 20 ವರ್ಷಗಳಿಂದ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿದ್ದೆ. ಆಪರೇಷನ್‌ ಕಮಲಾ ನಡೆದಾಗ ಹಲವು ಆಮಿಷಗಳನ್ನು ಒಡ್ಡಿದರೂ ನಾನು ಅವನ್ನೆಲ್ಲಾ ನಿರಾಕರಿಸಿದ್ದೆ. ಈಗ ಪಕ್ಷ ನನ್ನನ್ನು ಪೂರ್ಣ ನಿರ್ಲಕ್ಷಿಸಿದೆ’ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೊನೆಪಕ್ಷ ಟಿಕೆಟ್‌ ತಪ್ಪಿದ ನಂತರವಾದರೂ ಕಾಂಗ್ರೆಸ್‌ನ ಜಿಲ್ಲೆ ಹಾಗೂ ರಾಜ್ಯ ಸಮಿತಿಯ ಯಾವುದೇ ಮುಖಂಡರು ನನ್ನನ್ನು ಸಂಪರ್ಕಿಸುವ ಸೌಜನ್ಯ ತೋರಿಲ್ಲ. ಇದು ಅತ್ಯಂತ ನೋವು ತಂದಿದೆ. ಇಷ್ಟವಿಲ್ಲದ ಮನೆಯಲ್ಲಿ ವಾಸ ಮಾಡುವ ವ್ಯಕ್ತಿ ನಾನಲ್ಲ’ ಎಂದು ಹೇಳಿದರು.

ಸೋಮವಾರ ಹಲವು ಅಭಿಮಾನಿಗಳು ಬೆಂಗಳೂರಿಗೆ ಬಂದು ಸಂಪರ್ಕ ಮಾಡಿದ್ದಾರೆ. ಬುಧವಾರ ರಾಂಪುರದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇನೆ. ಬಿಜೆಪಿ ಸೇರುವ ಸುದ್ದಿಗಳು ಹರಿದಾಡುತ್ತಿರುವುದು ನಿಜ. ಆದರೆ, ಬಿಜೆಪಿಯ ಯಾವುದೇ ಮುಖಂಡರು ನನ್ನನ್ನು ಈವರೆಗೂ ಸಂಪರ್ಕಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಆದರೆ, ಬೆಂಗಳೂರಿನ ನಿವಾಸದಲ್ಲಿ ಸಂಸದ ಬಿ.ಶ್ರೀರಾಮುಲು ಚರ್ಚೆ ನಡೆಸುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದವು. ಬಿಜೆಪಿ ಸೇರ್ಪಡೆಯಾದಲ್ಲಿ ಕೂಡ್ಲಿಗಿ, ಬಳ್ಳಾರಿ ಗ್ರಾಮೀಣ ಅಥವಾ ಮೊಳಕಾಲ್ಮುರು ಕ್ಷೇತ್ರದಿಂದ ಟಿಕೆಟ್‌ ಕೇಳುವ ಸಾಧ್ಯತೆ ಇದೆ ಎಂದು ಎನ್‌ವೈ ಬೆಂಬಲಿಗರು ಹೇಳಿದರು.

ಸಿದ್ದರಾಮಯ್ಯ ಭೇಟಿಗೆ ಹೊರಟ ತಿಪ್ಪೇಸ್ವಾಮಿ

ಬಿಜೆಪಿ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಶಾಸಕ ಎಸ್‌. ತಿಪ್ಪೇಸ್ವಾಮಿ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ತಳಕಿನಲ್ಲಿ ಮಂಗಳವಾರ ಬಿಜೆಪಿ ನಡೆಸಿದ ಸಭೆಯಲ್ಲಿ ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಮತ್ತೆ ಕರೆತರಲು ಮುಂದಾಗಬೇಕು ಎಂದು ಚರ್ಚೆ ನಡೆಸಲಾಗಿದೆ. ತಿಪ್ಪೇಸ್ವಾಮಿ ಮಂಗಳವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ಮೊಳಕಾಲ್ಮುರಿಗೆ ಯೋಗಿ ಭೇಟಿ

ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಏ. 21ರಂದು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಜತೆಗೆ ಕೇಂದ್ರದ ಸಚಿವರೊಬ್ಬರು ಸಹ ಭಾಗವಹಿಸಲಿದ್ದಾರೆ ಎಂದು ಮುಖಂಡ ಎಚ್.ಟಿ. ನಾಗರೆಡ್ಡಿ ತಿಳಿಸಿದ್ದಾರೆ.

– ಕೊಂಡ್ಲಹಳ್ಳಿ ಜಯಪ್ರಕಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry