ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವರ್ಗದವರನ್ನೂ ಒಳಗೊಳ್ಳುತ್ತಿದ್ದ ಬಸವಣ್ಣ

ಬಸವ ಜಯಂತಿ, ವೀರಶೈವ ಲಿಂಗಾಯತ ಸಮಾವೇಶದಲ್ಲಿ ಶಿವಾನಂದ ಸ್ವಾಮೀಜಿ
Last Updated 18 ಏಪ್ರಿಲ್ 2018, 6:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಶ್ರಮಿಸಿದ್ದ ಬಸವಣ್ಣ, ಕನಕ, ಅಂಬೇಡ್ಕರ್ ಅವರಂಥ ದಾರ್ಶನಿಕರಿಗೆ ಜಾತಿ ಲೇಪನ ಹಚ್ಚಿ, ಒಬ್ಬೊಬ್ಬರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿರುವುದು ವಿಪರ್ಯಾಸದ ಸಂಗತಿ ಎಂದು ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ರೆಡ್ಡಿ ಸಮುದಾಯ ಭವನದಲ್ಲಿ ಸೋಮವಾರ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಮತ್ತು ವೀರಶೈವ ಲಿಂಗಾಯತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ದಾರ್ಶನಿಕರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿಕೊಳ್ಳುವುದಲ್ಲದೇ, ಅವರ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

‘ಬಸವೇಶ್ವರರು 12ನೇ ಶತಮಾನದಲ್ಲೇ ಎಲ್ಲ ಜಾತಿಯವರನ್ನು ಒಗ್ಗೂಡಿಸುತ್ತಾ ಇವನಾರವ, ಇವನಾರವ ಇವನಾರವ ಎಂದೆನಿಸದಿರಯ್ಯ.. ಇವ ನಮ್ಮವ ಇವ ನಮ್ಮ ಎಂದೆನಿಸೆಯ್ಯ ಎಂದರು. ಇಂದು ಮಹಾನುಭಾವರೊಬ್ಬರು ಬಸವಣ್ಣನ ಆ ಸಾಲುಗಳನ್ನೇ ಅಪಂಭ್ರಂಶಗೊಳಿಸಿ, ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಬಸವಣ್ಣ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ‘ಶರಣು’ ಎನ್ನುತ್ತಾ ಗೌರವಿಸುತ್ತಿದ್ದರು. ಹಾಗಾಗಿಯೇ ಅವರು ದಾರ್ಶನಿಕರಾದರು. ಜನರ ಪಾಲಿನ ದೈವವಾದರು. ಜನರಿಗೆ ಆಕರ್ಷಕ ವ್ಯಕ್ತಿಯಾದರು. ನಮಗೆಲ್ಲಾ ನಾಯಕರಾದರು. ಹೀಗಾಗಿ ಬಸವಣ್ಣನವರನ್ನು ಕನ್ನಡ ನಾಡಿನ ಮೊದಲ ಮೂಕ ನಾಯಕ ಎನ್ನುತ್ತೇವೆ’ ಎಂದರು.

ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಹದಿನೆಂಟು ವರ್ಷಗಳ ಹಿಂದೆ ಈ ಸಂಘವನ್ನು ಸ್ಥಾಪಿಸಿ, ವೀರಶೈವ ಸಮುದಾಯದಲ್ಲಿರುವ ಎಲ್ಲಾ ವರ್ಗದವರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬಯಲಲ್ಲಿ ಆರಂಭವಾದ ಈ ಸಂಘ ಈಗ ಇಷ್ಟು ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿದೆ’ ಎಂದರು.

‘18ರಂದು ಬಸವೇಶ್ವರರ ಜಯಂತಿ. ಆದರೆ, ಹಳ್ಳಿಗಳಲ್ಲೂ ಬಸವ ಜಯಂತಿ ಆಚರಿಸುವುದರಿಂದ ಒಂದು ದಿನ ಮುಂಚಿತವಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಕಾರ್ಯಕ್ರಮಕ್ಕೂ ಮುನ್ನ ಹಳ್ಳಿ ಹಳ್ಳಿಗಳಿಗೆ ತೆರಳಿ, ಈ ಸಮಾರಂಭದ ಕುರಿತು ಮಾಹಿತಿ ನೀಡಿದ್ದೇವೆ. ಆ ಕಾರಣದಿಂದಲೇ ಇಷ್ಟು ಜನ ಇಲ್ಲಿ ಸೇರಲು ಸಾಧ್ಯವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್, ಎಂ.ಟಿ. ಮಲ್ಲಿಕಾರ್ಜನಪ್ಪ ಇದ್ದರು. ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಆರ್.ಎಸ್. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕೋಶಾಧ್ಯಕ್ಷ ಮಹೇಶ್ವರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ಬಸವಣ್ಣ ‘ಆಮ್ ಆದ್ಮಿ’

ಬಸವಣ್ಣ ಕರಣಿಕನಾಗಿ ವೃತ್ತಿ ಆರಂಭಿಸಿ, ಕಾರ್ಮಿಕನಾಗಿ ಬೆಳೆದರು. ತಳಮಟ್ಟದ ಜನರ ಜತೆ ಬೆರೆತರು. ಹೀಗಾಗಿ, ಅವರೊಬ್ಬ ‘ಆಮ್ ಆದ್ಮಿ’. ಸಾಮಾನ್ಯ ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿದ್ದುಕೊಂಡೇ ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ಮುಂದಾದರು ಎಂದು ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಸವಣ್ಣನ ಗುಣಗಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT