ಹೊಳಲ್ಕೆರೆ: ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ!

7
ಟಿಕೆಟ್ ವಂಚಿತರಿಂದ ಮಾಜಿ ಶಾಸಕ ಪಿ.ರಮೇಶ್ ನೇತೃತ್ವದಲ್ಲಿ ಸಭೆ: ಪಕ್ಷದಲ್ಲಿ ಬಂಡಾಯದ ಬಿಸಿ

ಹೊಳಲ್ಕೆರೆ: ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ!

Published:
Updated:

ಹೊಳಲ್ಕೆರೆ: ಬಿಜೆಪಿ ಬಂಡಾಯ ಅಭ್ಯರ್ಥಿ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಶಾಸಕ ಪಿ.ರಮೇಶ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಬಿಜೆಪಿ ಟಿಕೆಟ್ ವಂಚಿತರ ಸಭೆಯಲ್ಲಿ ಅವರು ಮಾತನಾಡಿದರು. ‘ಬಿಜೆಪಿಯಿಂದ ಮಾಜಿ ಶಾಸಕ ಎಂ.ಚಂದ್ರಪ್ಪ ಅವರಿಗೆ ಟಿಕೆಟ್ ನೀಡಿರುವುದು ನಮಗೆ ಇಷ್ಟವಿಲ್ಲ. ವಿರೋಧದ ನಡುವೆಯೂ ವರಿಷ್ಠರು ಚಂದ್ರಪ್ಪ ಅವರಿಗೆ ಟಿಕೆಟ್ ನೀಡಿದ್ದಾರೆ. ಚಂದ್ರಪ್ಪ ಅವರನ್ನು ಸೋಲಿಸುವುದೇ ನಮ್ಮ ಗುರಿ ಆಗಿದ್ದು, ಅವರ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ನಮ್ಮ ಬೆಂಬಲಿಗರ ಸಭೆ ನಡೆಸಿ ಒಂದೆರಡು ದಿನಗಳಲ್ಲಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುತ್ತೇವೆ’ ಎಂದರು.

‘ನಮ್ಮ ಹೋರಾಟ ಮಾಜಿ ಶಾಸಕ ಎಂ.ಚಂದ್ರಪ್ಪ ಅವರ ವಿರುದ್ಧವೇ ಹೊರತು ಬಿಜೆಪಿ ವಿರುದ್ಧ ಅಲ್ಲ. ನಾವು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು, ಪಕ್ಷದ ವಿರುದ್ಧ ಕೆಲಸ ಮಾಡುವುದಿಲ್ಲ. ನಮ್ಮಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದು, ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಬಣಕ್ಕೆ ಟಿಕೆಟ್ ಸಿಗದಿರುವುದರಿಂದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವ ಅಗತ್ಯ ಇಲ್ಲ. ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಅಗತ್ಯವೂ ಇಲ್ಲ’ ಎಂದರು.

ಟಿಕೆಟ್ ಆಕಾಂಕ್ಷಿಯಾಗಿದ್ದ ಶಶಿಶೇಖರ ನಾಯ್ಕ ಮಾತನಾಡಿ, ‘ಬಿಜೆಪಿಯಿಂದ ನಾನು ಪ್ರಬಲ ಆಕಾಂಕ್ಷಿ ಆಗಿದ್ದೆ. ಕ್ಷೇತ್ರದಲ್ಲಿ ಲಂಬಾಣಿ ಜನಾಂಗದ 33,000 ಮತಗಳಿದ್ದು, ಕಡಿಮೆ ಮತದಾರರಿರುವ ಭೋವಿ ಜನಾಂಗಕ್ಕೆ ಟಿಕೆಟ್ ಕೊಟ್ಟಿದ್ದಾರೆ. ಪಕ್ಕದ ಹೊಸದುರ್ಗ, ಮಾಯಕೊಂಡದಲ್ಲೂ ಭೋವಿ ಜನಾಂಗದವರಿಗೆ ಟಿಕೆಟ್ ನೀಡಿದ್ದು, ಇಲ್ಲಿ ಲಂಬಾಣಿ ಜನಾಂಗಕ್ಕೆ ಟಿಕೆಟ್ ಕೊಡಬಹುದಿತ್ತು. ಪಕ್ಷೇತರನಾಗಿ ಸ್ಪರ್ಧಿಸುವ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆ. ಹಿರಿಯರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದರು.

ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಹನುಮಕ್ಕ, ‘ಇದು ನಮಗೆ ನೋವಿನ ಸಭೆ. ನಾನು 2 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳನ್ನು

ಜನರಿಗೆ ತಿಳಿಸಿದ್ದೆ. ಪಕ್ಷ ಸಂಘಟನೆಗೆ ಹಣ ಮತ್ತು ಸಮಯವನ್ನು ಕಳೆದುಕೊಂಡಿದ್ದೇನೆ. ಪಕ್ಷದ ವರಿಷ್ಠರು ನನಗೆ ಟಿಕೆಟ್ ಕೊಡುವ ಭರವಸೆ ನೀಡಿ ಈಗ ಹುಸಿಗೊಳಿಸಿದ್ದಾರೆ. ಬಿಜೆಪಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ. ನನಗೆ ಅನ್ಯಾಯ ಆಗಿದೆ’ ಎಂದರು.

ಟಿಕೆಟ್ ವಂಚಿತ ಆಕಾಂಕ್ಷಿ ದೇವೇಂದ್ರ ನಾಯ್ಕ, ‘ಪಕ್ಷದ ವರಿಷ್ಠರು ಸ್ಥಳೀಯರನ್ನು ಕಡೆಗಣಿಸಿದ್ದಾರೆ. ವಲಸಿಗರಿಗೆ, ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಮೂಲ ಬಿಜೆಪಿಗರಿಗೆ ಅನ್ಯಾಯ ಮಾಡಿದ್ದಾರೆ. ಪಕ್ಷದ ತಪ್ಪು ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಹಿರಿಯ ವಕೀಲ ಹನುಮಂತೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಆರ್. ಶಿವಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ರಾಜಶೇಖರ್, ಧನಂಜಯ ನಾಯ್ಕ, ಲವಮಧು, ನಟರಾಜ್, ಮೋಹನ್, ಹುಲ್ಲೇಹಾಳ್ ಮಂಜುನಾಥ ಇದ್ದರು.

‘ಸ್ಪರ್ಧೆ ಬಗ್ಗೆ ಸದ್ಯದಲ್ಲೇ ತೀರ್ಮಾನ’

‘ಬಿಜೆಪಿಯಿಂದ ಟಿಕೆಟ್ ವಂಚಿತನಾಗಿದ್ದು, ಪಕ್ಷೇತರನಾಗಿ ಸ್ಪರ್ಧಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ತೀರ್ಮಾನ ಪ್ರಕಟಿಸುತ್ತೇನೆ’ ಎಂದು ಉದ್ಯಮಿ ಶಶಿಶೇಖರ ನಾಯ್ಕ ಹೇಳಿದರು. ‘ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸ ಇತ್ತು. ಆದರೆ, ಈಗ ಟಿಕೆಟ್ ಕೈತಪ್ಪಿದೆ. ಜೆಡಿಎಸ್ ಪಕ್ಷದಿಂದ ಆಹ್ವಾನ ಬಂದಿದ್ದು, ಅವಕಾಶ ಸಿಕ್ಕರೆ ಹೋಗುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry