ಹೈಕಮಾಂಡ್‌ ನಿರ್ಧಾರದಿಂದ ತುಂಬಾ ನೋವಾಗಿದೆ

7
ಜಗಳೂರು ಕ್ಷೇತ್ರದ ಶಾಸಕ ಎಚ್.ಪಿ.ರಾಜೇಶ್‌ ಅಸಮಾಧಾನ; ‘ಬಿ’ ಫಾರಂಗೆ ಅಭಿಮಾನಿಗಳಿಂದ ಧರಣಿ

ಹೈಕಮಾಂಡ್‌ ನಿರ್ಧಾರದಿಂದ ತುಂಬಾ ನೋವಾಗಿದೆ

Published:
Updated:

ದಾವಣಗೆರೆ: ಜಗಳೂರು ಕ್ಷೇತ್ರದಿಂದ ಎಚ್‌.ಪಿ.ರಾಜೇಶ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿರುವುದನ್ನು ಖಂಡಿಸಿ ನೂರಾರು ಬೆಂಬಲಿಗರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಗಳೂರಿನಿಂದ ಬಸ್‌ ಹಾಗೂ ಇತರ ವಾಹನಗಳಲ್ಲಿ ನಗರಕ್ಕೆ ಬಂದಿಳಿದ ಬೆಂಬಲಿಗರು, ಗಾಂಧಿ ವೃತ್ತದಲ್ಲಿ ಜಮಾಯಿಸಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆಯ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ತೆರಳಿ ಧರಣಿ ಕುಳಿತರು.

ಈ ಸಂದರ್ಭ ಗ್ರಾಮದ ಮುಖಂಡ ಬಕ್ಕೇಶ್‌ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ರಾಜೇಶ್‌ ಗೆಲುವು ಸಾಧಿಸಿದ್ದಾರೆ. ಆದರೂ, ಈ ಬಾರಿ ಟಿಕೆಟ್‌ ಕೊಡದಿರುವುದು ಖಂಡನೀಯ’ ಎಂದರು.

ಬೇರೆ ಪಕ್ಷಗಳಿಂದ ವಲಸೆ ಬಂದವರಿಗೆ, ಬೇರೆ ಕ್ಷೇತ್ರದವರಿಗೆ ಟಿಕೆಟ್‌ ಕೊಡಲಾಗಿದೆ. ಜಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ, ಕಡೆಗಣಿಸಿ ಬೇರೊಬ್ಬರಿಗೆ ಟಿಕೆಟ್‌ ಕೊಟ್ಟಿರುವುದು ಸರಿಯಲ್ಲ ಎಂದರು.

ರಾಜೇಶ್ ಮಾಡಿದ ತಪ್ಪಾದ್ರೂ ಏನು? ಯಾವ ಕಾರಣಕ್ಕೆ ಟಿಕೆಟ್‌ ನೀಡಿಲ್ಲ. ಟಿಕೆಟ್‌ ಕೈತಪ್ಪಿರುವುದರ ಹಿಂದೆ ಯಾರ ಕೈವಾಡವಿದೆ ಎಂಬ ವಿಚಾರವನ್ನು ಬಹಿರಂಗಪಡಿಸಬೇಕು ಎಂದು ಪಟ್ಟು ಹಿಡಿದರು.

ಮುಖಂಡ ರಮೇಶ್‌ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದವರಿಗೆಲ್ಲ ಟಿಕೆಟ್‌ ಕೊಡಲಾಗಿದೆ. ಹೆಚ್ಚು ಮತಗಳ ಅಂತರದಿಂದ ಗೆದ್ದ ರಾಜೇಶ್‌ಗೆ ನಿರಾಕರಿಸಲಾಗಿದೆ. ಬಡವರಿಗೆ ಸಾವಿರಾರು ಮನೆಗಳ ಹಂಚಿಕೆ, ಕೆರೆಗಳಿಗೆ ನೀರು, ಸಿ.ಸಿ. ರಸ್ತೆ, ಡಾಂಬರ್ ರಸ್ತೆ ಕಾಮಗಾರಿ, ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಂಚಿಕೆ ಸೇರಿದಂತೆ ಜನಪರ ಕಾರ್ಯಗಳನ್ನು ರಾಜೇಶ್‌ ಮಾಡಿದ್ದಾರೆ. ಆದರೂ ಅವರಿಗೆ ಟಿಕೆಟ್‌ ನೀಡದಿರುವುದು ಅನ್ಯಾಯ’ ಎಂದರು.

ಮುಖಂಡ ನಿಜಲಿಂಗಪ್ಪ ಮಾತನಾಡಿ ‘ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹೈಕಮಾಂಡ್‌ ನಿರ್ಧಾರ ಬದಲಿಸಿ ‘ಬಿ’ ಫಾರಂ ನೀಡಲೇಬೇಕು’ ಎಂದು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮಾತನಾಡಿ, ‘ಸೋಮವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತನಾಡಿ ರಾಜೇಶ್‌ ಅವರಿಗೆ ‘ಬಿ’ ಫಾರಂ ನೀಡುವಂತೆ ಒತ್ತಾಯಿಸಿದ್ದೇನೆ. ಬುಧವಾರ ಪಕ್ಷದ ಚುನಾವಣಾ ಉಸ್ತುವಾರಿ ವೇಣುಗೋಪಾಲ್‌ ಬೆಂಗಳೂರಿಗೆ ಭೇಟಿ ನೀಡಲಿದ್ದು, ಮಾತನಾಡೋಣ ಎಂಬುದಾಗಿ ಸಿಎಂ ಭರವಸೆ ನೀಡಿದ್ದಾರೆ’ ಎಂದರು.

‘ಬುಧವಾರ ಸಂಜೆ ಬೆಂಗಳೂರಿಗೆ ತೆರಳಲಿದ್ದು, ಮುಖ್ಯಮಂತ್ರಿ ಹಾಗೂ ವೇಣುಗೋಪಾಲ್‌ ಜತೆ ಮಾತನಾಡುತ್ತೇನೆ. ಕ್ಷೇತ್ರದ ಜನರನ್ನು ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ‘ಒಂದೆರಡು ದಿನ ಕಾಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗಾಗಿ, ಜಗಳೂರು ಕ್ಷೇತ್ರದಿಂದ ಇದುವರೆಗೂ ‘ಬಿ’ ಫಾರಂ ಹಂಚಿಕೆ ಮಾಡಲಾಗಿಲ್ಲ’ ಎಂದರು.

ಜಗಳೂರು ತಾಲ್ಲೂಕಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎಚ್‌.ಪಿ.ರಾಜೇಶ್‌ ದುರ್ಬಲರಾಗಿದ್ದಾರೆ ಎಂಬ ವರದಿ ಹೈಕಮಾಂಡ್‌ಗೆ ತಲುಪಿದೆ. ವರದಿ ಆಧಾರದ ಮೇಲೆ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಹೊನ್ನಾಳಿಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ಮಂಜಪ್ಪ ಅವರಿಗೂ ಟಿಕೆಟ್‌ ಕೈತಪ್ಪಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಚುನಾವಣೆ ಸಂದರ್ಭ ಡಿ.ಜಿ.ಶಾಂತನಗೌಡರು ಮುಂದಿನ ಬಾರಿ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದಾಗಿ ಮಂಜಪ್ಪ ಹೇಳುತ್ತಿದ್ದಾರೆ. ಈ ಬಗ್ಗೆ ಇಬ್ಬರ ಜತೆಯಲ್ಲೂ ಚರ್ಚಿಸಿ ಗೊಂದಲ ಬಗೆಹರಿಸುವುದಾಗಿ ತಿಳಿಸಿದರು.

‘ಬಿಜೆಪಿಯವರು ಅಡ್ಜಸ್ಟ್‌ಮೆಂಟ್‌ ಗಿರಾಕಿಗಳು’

ಜಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ ಶಾಸಕ ರಾಜೇಶ್‌ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಮಲ್ಲಿಕಾರ್ಜುನ, ‘ಬಿಜೆಪಿಯವರು ಅಡ್ಜಸ್ಟ್‌ಮೆಂಟ್‌ ಗಿರಾಕಿಗಳು. ಗೆಲ್ಲಲೇಬೇಕು ಎಂದು ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ. ಜಗಳೂರಿನಲ್ಲಿ ಪಕ್ಷದ ಬಲ ಹೆಚ್ಚಿದ್ದು ಕಾಂಗ್ರೆಸ್‌ ಗೆಲುವು ಖಚಿತ ಎಂದರು.

‘ಟಿಕೆಟ್‌ ಸಿಗದವರಿಗೆ ಎಂಎಲ್‌ಸಿ ಸ್ಥಾನ’

ಜಗಳೂರಿನಿಂದ ಎ.ಎಲ್.ಪುಷ್ಪಾ ಅಥವಾ ಎಚ್‌.ಪಿ.ರಾಜೇಶ್‌, ಇಬ್ಬರಲ್ಲಿ ಯಾರಿಗೇ ಟಿಕೆಟ್‌ ಸಿಕ್ಕರೂ ಬಂಡಾಯ ಪ್ರದರ್ಶಿಸಬಾರದು. ಟಿಕೆಟ್‌ ಸಿಗದವರಿಗೆ ಮುಂದೆ ಎಂ.ಎಲ್‌.ಸಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

‘ಹೈಕಮಾಂಡ್‌ ನ್ಯಾಯ ನೀಡಲಿ’

‘ಜಗಳೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಟಿಕೆಟ್‌ ನೀಡದಿರುವುದು ತುಂಬಾ ನೋವು ತಂದಿದೆ. ನನಗೆ ಅನ್ಯಾಯವಾಗಿದ್ದು, ಹೈಕಮಾಂಡ್‌ ನ್ಯಾಯ ನೀಡಬೇಕು’ ಎಂದು ಶಾಸಕ ರಾಜೇಶ್‌ ಮನವಿ ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಮಧ್ಯೆಯೂ ತಾಲ್ಲೂಕಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಿದ್ದಿವೆ. ತಳಮಟ್ಟದಿಂದ ಪಕ್ಷ ಕಟ್ಟಿದ್ದೇನೆ. ಇದನ್ನೆಲ್ಲ ಪರಿಗಣಿಸಿ ‘ಬಿ’ ಫಾರಂ ಕೊಡಲೇಬೇಕು ಎಂದು ಒತ್ತಾಯಿಸಿದರು.

ಟಿಕೆಟ್ ಕೈತಪ್ಪಿರುವುದರ ಹಿಂದೆ, ಸ್ವಪಕ್ಷೀಯರ ಕೈವಾಡವಿರುವ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲ. ಹೈಕಮಾಂಡ್‌ಗೆ ತಪ್ಪು ವರದಿ ಸಲ್ಲಿಕೆಯಾಗಿರುವುದು ಗಮನಕ್ಕೆ ಬಂದಿದೆ. ವರದಿಯಲ್ಲಿನ ಅಂಶಗಳು ಸತ್ಯವಲ್ಲ ಎಂದೂ ತಿಳಿಸಿದ್ದೇನೆ ಎಂದರು.

ಜಗಳೂರಿನಲ್ಲಿ ತರಳಬಾಳು ಶ್ರೀಗಳು ಭ್ರಷ್ಟಾಚಾರ ಮುಕ್ತ ಚುನಾವಣೆಗೆ ಮುಂದಾಗಿದ್ದು ವಿಭಿನ್ನ ಪ್ರಯೋಗ. ಅವರ ಚಿಂತನೆಗಳು ಉತ್ತಮವಾಗಿದ್ದವು. ಆದರೆ, ಅಂತಿಮವಾಗಿ ಅವರ ಪ್ರಯತ್ನ ಕೈಗೂಡಲಿಲ್ಲ ಎಂದು ರಾಜೇಶ್‌ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry