ಭಾನುವಾರ, ಡಿಸೆಂಬರ್ 8, 2019
21 °C
ಕಾಂಗ್ರೆಸ್‌ ವೀಕ್ಷಕ ವಿನೀತ್‌ ಕಾಂಬೋಜ ಸೂಚನೆ

ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ

ಬ್ಯಾಡಗಿ: ಎಐಸಿಸಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಬಗ್ಗೆ, ಯಾವುದೇ ಅಸಮಾಧಾನ ಇಟ್ಟುಕೊಳ್ಳದೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಬೇಕು ಎಂದು ಕಾಂಗ್ರೆಸ್‌ ವೀಕ್ಷಕ ವಿನೀತ್‌ ಕಾಂಬೋಜ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಕಾಂಗ್ರೆಸ್‌ ತಾಲ್ಲೂಕು ಘಟಕ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ತಲೆಬಾಗಿ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಟಿಕೆಟ್ ಕೇಳುವುದು ಎಲ್ಲರ ಹಕ್ಕು. ಆದರೆ, ಟಿಕೆಟ್ ನೀಡಿದ ಬಳಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

23ಕ್ಕೆ ನಾಮಪತ್ರ: ಏಪ್ರಿಲ್ 23ರಂದು ಬೆಳಿಗ್ಗೆ 11 ಗಂಟೆಗೆ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸಬೇಕು. ಈ ವೇಳೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾಂಗ್ರೆಸ್‌ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪಕ್ಷದ ಹಿರಿಯ ಮುಖಂಡ ಸಿ.ಆರ್‌. ಬಳ್ಳಾರಿ ಅವರು ಸಭೆಗೆ ಕೊನೆ ಗಳಿಗೆಯಲ್ಲಿ ಬಂದರು.

ಶಾಸಕ ಬಸವರಾಜ ಶಿವಣ್ಣನವರ ಹಾಗೂ ಎಸ್‌.ಆರ್‌. ಪಾಟೀಲ ಅವರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಅವರನ್ನು ಪ್ರತಿನಿಧಿಸುವ ಮುಖಂಡರು ಮಾತ್ರ ಸಭೆಗೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಗೊಂದಲದಲ್ಲಿ ಮುಳುಗಿದ್ದು ಸ್ಪಷ್ಟವಾಗಿತ್ತು.

ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬೀರಪ್ಪ ಬಣಕಾರ, ಎಪಿಎಂಸಿ ಅಧ್ಯಕ್ಷ ಚನ್ನಬಸಪ್ಪ ಹುಲ್ಲತ್ತಿ, ಸದಸ್ಯರಾದ ದಾನಪ್ಪ ತೋಟದ, ಮಾಲತೇಶ ಕೆಂಪಗೊಂಡರ, ಪ್ರಭುಗೌಡ ಪಾಟೀಲ, ಮುಖಂಡರಾದ ಶಾಂತವ್ವ ದೇಸಾಯಿ, ದುರ್ಗೇಶ ಗೋಣೆಮ್ಮನವರ, ಮಂಜುನಾಥ ಬೋವಿ, ದಾನಪ್ಪ ಚೂರಿ, ಶಶಿಧರ ದೊಡ್ಡಮನಿ ಹಾಗೂ ರಮೇಶ ಸುತ್ತಕೋಟಿ ಇದ್ದರು.

 

ಪ್ರತಿಕ್ರಿಯಿಸಿ (+)