ಸಣ್ಣಪುಟ್ಟ ಅಸಮಾಧಾನ ಅಂತ್ಯ: ಶಾರದಾ ಶೆಟ್ಟಿ

7
ಟಿಕೆಟ್ ಘೋಷಣೆಯಾದ ಬಳಿಕ ಕೆಲವು ಸ್ಥಳೀಯ ಮುಖಂಡರ ಭಿನ್ನಧ್ವನಿ

ಸಣ್ಣಪುಟ್ಟ ಅಸಮಾಧಾನ ಅಂತ್ಯ: ಶಾರದಾ ಶೆಟ್ಟಿ

Published:
Updated:

ಕುಮಟಾ: ಕುಮಟಾ– ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದುಕೊಂಡ ಬಳಿಕ ಸ್ಥಳೀಯ ಕೆಲ ಮುಖಂಡರು ವ್ಯಕ್ತಪಡಿಸಿದ್ದ ಅಸಮಾಧಾನವನ್ನು ಶಮನ ಮಾಡುವ ಕೆಲಸಕ್ಕೆ ಇದೀಗ ಶಾರದಾ ಶೆಟ್ಟಿ ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಎಲ್ಲ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರುವ ಕೆಲಸ ಆರಂಭಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೊನ್ನಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ನಾಗೇಶ ನಾಯ್ಕ ಕಲಭಾಗ, ಮಾಜಿ ಅಧ್ಯಕ್ಷ ಶಿವಪ್ಪ ಪಟಗಾರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್.ವಿ ಶಾನಭಾಗ, ಎಪಿಎಂಸಿ ಅಧ್ಯಕ್ಷ ಧೀರೂ ಶಾನಭಾಗ ಒಳಗೊಂಡಂತೆ 50ಕ್ಕೂ ಹೆಚ್ಚು ಹಿರಿಯ ಮುಖಂಡರ ಮನೆಗೆ ಭೇಟಿ ನೀಡಿದ್ದೇನೆ. ಚುನಾವಣೆ ಕುರಿತಂತೆ ಮಾತುಕತೆ ನಡೆಸಲಾಗಿದೆ’ ಎಂದರು.

ಸಣ್ಣಪುಟ್ಟ ಅಸಮಾಧಾನ ಸಾಮಾನ್ಯ: ‘ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನವಿರುವುದು ಸಾಮಾನ್ಯ ಸಂಗತಿಯಾಗಿದೆ. ಮಾತುಕತೆಯ ನಂತರ ಅವನ್ನೆಲ್ಲ ಸರಿಪಡಿಸಿ ಒಂದೇ ಮನೆಯವರಂತೆ ಕೆಲಸ ಮಾಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಕುಮಟಾ–ಹೊನ್ನಾವರ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎನ್ನುವುದು ಮಾತುಕತೆಯ ಸಂದರ್ಭದಲ್ಲಿ ಚರ್ಚೆಗೆ ಬಂದ ಮುಖ್ಯ ವಿಷಯ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ನಾಗೇಶ ನಾಯ್ಕ ಕಲಭಾಗ ಮಾತನಾಡಿ, ‘25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ನನಗೆ ಮಾಜಿ ಶಾಸಕ ದಿವಂಗತ ಮೋಹನ ಶೆಟ್ಟಿ ಅವರು ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು. ಅವರ ನಿಧನಾನಂತರ ಪಕ್ಷದ ಕೆಲವು ಮುಖಂಡರ ನಡುವೆ ನಿರ್ಮಾಣವಾಗಿದ್ದ ಅಂತರವನ್ನು ನಿವಾರಿಸುವ ಕೆಲಸ ಈ ಮೊದಲೇ ಆಗಬೇಕಿತ್ತು. ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಿದ್ದು ಸರಿಯಲ್ಲ ಎನ್ನುವ ವಿಚಾರವನ್ನು ಶಾರದಾ ಶೆಟ್ಟಿ ನಮ್ಮ ಮನೆಗೆ ಬಂದಾಗ ಅವರ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ಸ್ವತಂತ್ರ ಸ್ಪರ್ಧೆಯ ಇಂಗಿತ

ಸದ್ಯ ಯಾವುದೇ ರಾಜಕೀಯ ಪಕ್ಷದಲ್ಲು ಗುರುತಿಸಿಕೊಳ್ಳದ, ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ ಅವರು ಕುಮಟಾ ಕ್ಷೇತ್ರದಿಂದ ವಿಧಾನಸಭೆಗೆ ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಅತ್ಯಂತ ಆಪ್ತರಾಗಿರುವ ಅವರು, 15 ವರ್ಷಗಳಿಂದ ಗ್ರಾಮ ಪಂಚಾಯ್ತಿ ಸದಸ್ಯರಾಗಿ, ಅಧ್ಯಕ್ಷರಾಗಿ ಅನುಭವ ಹೊಂದಿದ್ದಾರೆ.

‘ಶಾಂತವಾಗಿದ್ದ ಕುಮಟಾದಲ್ಲಿ ನಾಲ್ಕಾರು ತಿಂಗಳ ಹಿಂದೆ ಏನು ನಡೆದಿದೆ ಎನ್ನುವುದು ಜನತೆಗೆ ಗೊತ್ತಿದೆ. ದೊಡ್ಡ ಉದ್ಯಮಿಗಳೆಲ್ಲ ಪ್ರಮುಖ ರಾಜಕೀಯ ಪಕ್ಷದಿಂದ ಟಿಕೆಟ್ ಪಡೆದು ಕುಮಟಾ ವಿಧಾನಸಭೆಗೆ ಸ್ಪರ್ಧಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಸರಿಯಾಗಿ ಆಗಿಲ್ಲ ಎನ್ನುವ ಕಾರಣಕ್ಕೆ ಕಳೆದ ಸಲವೇ ಸುಧಾ ಗೌಡ ಅಂಥವರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್‌ನ ಸಾಮಾನ್ಯ ಮುಖಂಡರು ಬೆಂಗಳೂರಿಗೆ ಹೋದರೆ ಆರ್.ವಿ.ದೇಶಪಾಂಡೆ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಬೆಳವಣಿಗೆ ನೋಡಿ ನನ್ನ ಹಲವಾರು ಸ್ನೇಹಿತರು ಕುಮಟಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ನನ್ನದೇ ಕಾರ್ಯಪಡೆ ಇರುವುದರಿಂದ ನನಗೂ ಆ ಬಗ್ಗೆ ಹೆಚ್ಚಿನ ಒಲವಿದೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry