ಕಣ್ಣಿಗೆ ಬಟ್ಟೆ ಕಟ್ಟಿ ಕುದುರೆ ವ್ಯಾಪಾರ

7
ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಮುಖಂಡ ನಾರಾಯಣಸ್ವಾಮಿ ಅಸಮಾಧಾನ

ಕಣ್ಣಿಗೆ ಬಟ್ಟೆ ಕಟ್ಟಿ ಕುದುರೆ ವ್ಯಾಪಾರ

Published:
Updated:

ಬಂಗಾರಪೇಟೆ: ಬಿಜೆಪಿ ವರಿಷ್ಠರ ನಿರ್ಧಾರ ಕಣ್ಣಿಗೆ ಬಟ್ಟೆ ಕಟ್ಟಿ ಕುದುರೆ ವ್ಯಾಪಾರ ನಡೆಸಿದಂತಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ ಎಂದು ಟಿಕೆಟ್ ಚಂಚಿತ ಎಂ.ನಾರಾಯಣಸ್ವಾಮಿ ಆರೋಪಿಸಿದರು.

ಪಟ್ಟಣದ ಸ್ವಗೃಹದಲ್ಲಿ ಮಂಗಳವಾರ ತಮ್ಮ ಮುಂದಿನ ನಿರ್ಣಯದ ಬಗ್ಗೆ ಚರ್ಚಿಸಲು ಕರೆದಿದ್ದ ಮುಖಂಡರ ಮತ್ತು ಬೆಂಬಲಿಗರ ಸಭೆ ಮುಗಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಬಿ.ಪಿ.ವೆಂಕಟಮುನಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ನನಗೆ ಬೇಸರವಿಲ್ಲ. ಆದರೆ ಬೆಜೆಪಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ. ರಾಜ್ಯ ಮತ್ತು ರಾಷ್ಟ್ರ ನಾಯಕರು ಸಮೀಕ್ಷೆ ನಡೆಸಿ, ಜನರ ಮನ್ನಣೆಯಂತೆ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಸಮೀಕ್ಷೆಗಳಲ್ಲಿ ಜನರು ನನಗೆ ಮನ್ನಣೆ ನೀಡಿದ್ದರು. ಆದರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದನ್ನು ಅವಲೋಕಿಸಿದರೆ ವರಿಷ್ಠರು ಯಾವ ಸಮೀಕ್ಷೆಯೂ ನಡೆಸಿಲ್ಲ. ಅವರು ಹೇಳಿದಂತೆ ನಡೆದುಕೊಂಡಿಲ್ಲ. ಈ ನಿರ್ಧಾರ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೆಂಕಟಮುನಿಯಪ್ಪ ಸಂಸತ್ ಚುನಾವಣೆ ಸಂದರ್ಭ ಪಕ್ಷಕ್ಕೆ ಸೇರಿದ ಕೂಡಲೇ ಅವರ ಮಗ ಮಹೇಶ್ ಅವರಿಗೆ ಎಪಿಎಂಸಿ ಅಧ್ಯಕ್ಷ ಸ್ಥಾನ ನೀಡಲಾಯಿತು. 9 ತಿಂಗಳು ನಂತರ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ನನ್ನ ಮಗನಿಗೆ ಟಿಕೆಟ್ ನೀಡದ ರಾಜ್ಯ ನಾಯಕರು ಅವರ ಮಗನಿಗೆ ನೀಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಆದಾದ ನಂತರ ವರ್ಷಕ್ಕೆ ವೆಂಕಟಮುನಿಯಪ್ಪ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡಿದರು. ಎರಡು ಬಾರಿ ಕೈಸುಟ್ಟುಕೊಂಡಿದ್ದೇನೆ. ಇದು ನನಗೆ ಅಂತಿಮ ಚುನಾವಣೆ. ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದೆ. ಇದ್ಯಾವುದನ್ನೂ ಪರಿಗಣಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರದ ಎಲ್ಲಾ ಹೋಬಳಿ ಮುಖಂಡರ ಜತೆ ಚರ್ಚಿಸಿ ಏ.19 ರಂದು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು  ಹೇಳಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಮಾರ್ಕಂಡೇಗೌಡ, ನಾಗೇಂದ್ರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry