ಶನಿವಾರ, ಆಗಸ್ಟ್ 8, 2020
22 °C
ಮುಂದುವರಿದ ಆನೆ ದಾಳಿ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ, ಚುನಾವಣಾ ವಿಷಯವೇ ಆಗದ ಸಮಸ್ಯೆ

ಗಡಿಯಲ್ಲಿ ಆನೆ ದಾಳಿಗೆ ರೈತ ಗಡಗಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿಯಲ್ಲಿ ಆನೆ ದಾಳಿಗೆ ರೈತ ಗಡಗಡ

ಬಂಗಾರಪೇಟೆ: ಇಲ್ಲಿನ ಜನರು ಶ್ರಮಜೀವಿಗಳು. ಬಿಸಿಲು, ಮಳೆಗೆ ಮೈಯೊಡ್ಡಿ ವರ್ಷವಿಡೀ ದುಡಿಯುವವರು. ಆದರೆ ಪದೇ ಪದೇ ನುಸುಳುವ ಕಾಡಾನೆಗಳು ಬೆಳೆ ನಾಶಮಾಡುತ್ತಿವೆ. ರೈತರ ನಿದ್ದೆ ಕೆಡಿಸುತ್ತಿವೆ.

ಇದು ತಾಲ್ಲೂಕಿನ ಗಡಿ ಭಾಗದ ರೈತರ ಗೋಳು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಯೇ ಇಲ್ಲ. ವಿಪರ್ಯಾಸ ಅಂದರೆ ಇದು ಚುನಾವಣಾ ವಿಷಯ ಆಗಿಲ್ಲ. ಏಕೆಂದರೆ ಯಾವ ಪಕ್ಷವೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ತಾಲ್ಲೂಕಿನ 7,842 ಎಕರೆ ಪ್ರದೇಶದಲ್ಲಿ ಕಾಡು ಆವರಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಭೀತಿ ಇದೆ. ಕಾಡಾನೆಗಳು ಮಾತ್ರವಲ್ಲದೆ ಕಾಡಂದಿ, ಚಿರತೆ, ಕಾಡುನಾಯಿ, ಕರಡಿ ಮತ್ತಿತರ ಪ್ರಾಣಿಗಳ ಹಾವಳಿ ರೈತರನ್ನು ಕಂಗಾಲಾಗಿಸಿದೆ. ರಾತ್ರಿ ಆಹಾರಕ್ಕಾಗಿ ಹೊಂಚುಹಾಕುವ ಚಿರತೆಗಳು ಗ್ರಾಮಗಳಿಗೆ ನುಗ್ಗಿ ಕುರಿ– ಮೇಕೆಗಳನ್ನು ತಿನ್ನುತ್ತಿವೆ. ಹಾಗಾಗಿ ಯಾವ ಸಂದರ್ಭದಲ್ಲಿ ಯಾವ ಕಾಡು ಪ್ರಾಣಿ ಮೇಲೆ ಎರಗುವುದೋ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.

ನದಿ ನಾಲೆಗಳಿಲ್ಲದಿದ್ದರೂ ಕೊಳವೆ ಬಾವಿ ಕೊರೆದು ಸಿಗುವ ಅಲ್ಪ ಸ್ವಲ್ಪ ನೀರಲ್ಲೇ ಟೊಮೆಟೊ, ಆಲೂಗಡ್ಡೆ, ನೆಲಗಡಲೆ, ತೆಂಗು, ಬಾಳೆ ಬೆಳೆಯಲಾಗುತ್ತಿದೆ. 1500 ಅಡಿ ಆಳಕ್ಕೆ ಬಾವಿ ಕೊರೆದರೂ ನೀರು ಸಿಗುವ ಖಾತರಿ ಇಲ್ಲ. ನೀರು ಸಿಕ್ಕರೂ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಇಂತ ಸಂದಿಗ್ದ ಪರಿಸ್ಥಿತಿಯಲ್ಲಿ ವರ್ಷಕ್ಕೆ ಸರಾಸರಿ ಐದಾರು ಬಾರಿ ಕಾಡಾನೆಗಳು ದಾಳಿ ಮಾಡುತ್ತವೆ. ಬೆಳೆ ನಾಶ ಆಗುತ್ತದೆ. ಅಲ್ಲದೆ 5ಕ್ಕೂ ಹೆಚ್ಚು ಜನರು ಆನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಕಾಡಾನೆ ಹಾವಳಿಯಿಂದ ಕಾಂಡಂಚಿನ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಿ, ಆನೆ ದಾಳಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವಲ್ಲಿ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ ಎನ್ನುವುದು ಈ ಭಾಗದ ರೈತರ ಅಳಲು.

ಆನೆ ಪಥ: ತಮಿಳುನಾಡು ಮತ್ತು ಆಂಧ್ರಪ್ರದೇಶದ ಅರಣ್ಯಕ್ಕೆ ಹೊಂದಿಕೊಂಡಿರುವ ರಾಜ್ಯದ ಅರಣ್ಯ ಪ್ರದೇಶ ದಟ್ಟವಾಗಿದೆ. ವರ್ಷದಲ್ಲಿ ಹಲವು ಬಾರಿ ಆನೆಹಿಂಡು ಈ ಭಾಗದಲ್ಲಿ ಸಂಚರಿಸುತ್ತವೆ. ಗಡಿ ಭಾಗವಾದ ಮಲಗಲಕ್ಕಿ, ತಮಟಮಾನಹಳ್ಳಿ ಮೂಲಕ ಯರಗೋಳು, ಚಾಮನಹಳ್ಳಿ, ತೊಪ್ಪನಹಳ್ಳಿ, ಕಳವಂಚಿ, ಕೆಜಿಎಫ್ ಕ್ಯಾಸಂಬಳ್ಳಿ ಮೂಲಕ ಆಂಧ್ರಪ್ರದೇಶದ ವಿಕೋಟೆ ಅರಣ್ಯಕ್ಕೆ ಸಂಚರಿಸುತ್ತವೆ. ಅರಣ್ಯ ಇಲಾಖೆ ಕೂಡ ಈ ಮಾರ್ಗವನ್ನು ಆನೆಪಥ ಎಂದು ಗುರುತಿಸಿದೆ.

ಕಂದಕ: ಐಎಎಸ್ ಅಧಿಕಾರಿ ಡಿ.ಕೆ.ರವಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ ಆನೆ ದಾಳಿ ತಡೆಯಲು ಯೋಜನೆ ರೂಪಿಸಿದ್ದರು. ಅರಣ್ಯದ ಅಂಚಿನಲ್ಲಿ ಸುತ್ತ ದೊಡ್ಡ ಕಂದಕ ತೋಡಿ ಆನೆಗಳು ಕಾಡಿನಿಂದ ಹೊರಗೆ ಬರದಂತೆ ತಡೆಯಲು ಯತ್ನಿಸಿದ್ದರು.

ಕಾಳಮ್ಮ ಗುಡಿಯಿಂದ ಕದರಿನತ್ತಂ ಸೇರಿದಂತೆ 17 ಕಿಲೋ ಮೀಟರ್ ಕಂದಕವನ್ನು ಅರಣ್ಯ ಇಲಾಖೆ ಮೂಲಕ ತೋಡಿಸಿದ್ದರು. ಡಿ.ಕೆ.ರವಿ ಬೆಂಗಳೂರಿಗೆ ವರ್ಗವಾದ ನಂತರ ಆ ಕೆಲಸ ನನೆಗುದಿಗೆ ಬಿದ್ದಿತು. ತೋಡಿರುವ ಕಂದಕ ಕೂಡ ಅಲ್ಲಲ್ಲಿ ಮುಚ್ಚಿದೆ.

ಕಂದಕ ತೋಡಲು ಬಂಡೆ ಕಲ್ಲುಗಳು ಅಡ್ಡಿಯಾಗಿ, ನಿಗದಿ ಪಡಿಸಿದ ವೆಚ್ಚಕ್ಕಿಂತ ಹೆಚ್ಚಾಯಿತು. ಈ ಬಗ್ಗೆ ಸರ್ಕಾರಕ್ಕೆ ಪರಿಷ್ಕರಣೆ ವೆಚ್ಚ ಸಲ್ಲಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆ ಕೆಲಸ ಹಾಗೇ ಉಳಿದಿದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.

‘600 ರೈತರಿಗೆ ಅರಣ್ಯ ಇಲಾಖೆ ಬೆಳೆ ನಷ್ಟ ಪರಿಹಾರ ಒದಗಿಸಿದೆ. ಪ್ರಾಣಿಗಳು ಹಾಗೂ ಜನರ ರಕ್ಷಣೆ ಇಲಾಖೆಯ ಹೊಣೆ. ಹಲ ಗ್ರಾಮಗಳು ಕಾಡಿನಲ್ಲಿಯೇ ಇವೆ. ಇದು ‌‌ಇಲಾಖೆಗೆ ಸಮಸ್ಯೆಯಾಗಿದೆ’ ಎನ್ನುತ್ತಾರೆ  ವಲಯ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್.

ವನ್ಯಜೀವಿ ಧಾಮ: ತಾಲ್ಲೂಕಿನ ಅರಣ್ಯ ಪ್ರದೇಶವನ್ನು ವನ್ಯಜೀವಿ ಧಾಮ ಎಂದು ಘೋಷಿಸಬೇಕು ಎನ್ನುವುದು ಈ ಭಾಗದ ರೈತರ ಆಗ್ರಹ. ಈ ಬಗ್ಗೆ ರೈತರು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಅಧ್ಯಯನ ನಡೆಸಿದ ಪರಿಣಿತರ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ಕಾಡಂಚಿನ ವ್ಯಾಪ್ತಿಯ ಪಂಚಾಯಿತಿ ಅಧಿಕಾರಿ, ಗ್ರಾಮಸ್ಥರಿಂದ ನಿರಾಕ್ಷೇಪಣಾ ಪತ್ರ ಪಡೆದು, ವನ್ಯಜೀವಿ ಧಾಮ ಎಂದು ಘೋಷಿಸಲು ಸರ್ಕಾರಕ್ಕೆ ಪೂರ್ಣ ಪ್ರಮಾಣದ ಪ್ರಸ್ತಾವ ಸಲ್ಲಿಸಲಾಗಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕೂಡ ಶಿಫಾರಸು ಮಾಡಿದ್ದಾರೆ ಎನ್ನುವುದು ಅರಣ್ಯ ಅಧಿಕಾರಿಗಳ ನುಡಿ.

ವನ್ಯ ಜೀವಿಧಾಮ ಎಂದು ಘೋಷಣೆಯಾದರೆ ಇಲ್ಲಿನ ಅರಣ್ಯ ಪ್ರದೇಶ ಕೇಂದ್ರ ಸರ್ಕಾರದ ವ್ಯಾಪ್ತಿಯ ವನ್ಯ ಜೀವಿಧಾಮ ವಿಭಾಗಕ್ಕೆ ಸೇರ

ಲಿದೆ. ಅರಣ್ಯ ಸುತ್ತ ಬೇಲಿ ಅಳವಡಿಸಿ ಜನರು, ಕಾಡುಪ್ರಾಣಿಗಳಿಗೆರಕ್ಷಣೆ ಒದಗಿಸಲಾಗುತ್ತದೆ. ಅಲ್ಲದೆ ಕಾಡಿನೊಳಗೆ ಆನೆ ಮತ್ತು ಇತರ ಪ್ರಾಣಿಗಳಿಗೆ ಅಗತ್ಯ ಆಹಾರ ಮತ್ತು ನೀರು ಪೂರೈಸುವ ವ್ಯವಸ್ಥೆಯಾಗಲಿದೆ. ಕಾಡಂಚಿನ ಜನ ಹಾಗೂ ಸಾಕು ಪ್ರಾಣಿಗಳು ಕಾಡಿನೊಳಕ್ಕೆ ಹೋಗುವಂತಿಲ್ಲ. ಹಾಗೆಯೇ ಕಾಡು ಪ್ರಾಣಿಗಳು ಕಾಡಿನಿಂದ ಹೊರಗೆ ಬರದಂತೆ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಸಿಗಲಿದೆ.

₹ 2 ಕೋಟಿಗೆ ಪ್ರಸ್ತಾವ

ಬಂಗಾರಪೇಟೆ ತಾಲ್ಲೂಕಿನ ಅರಣ್ಯ ಪ್ರದೇಶದ ಬಹುತೇಕ ಕಡೆ ಕಂದಕ ತೋಡಲಾಗಿದೆ. ಉಳಿದ ಕಾಮಗಾರಿ ಮುಂದುವರೆಸಲು ₹ 2 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಂಗಾರಪೇಟೆ ಅರಣ್ಯದ ವ್ಯಾಪ್ತಿಯಲ್ಲಿ ಆನೆಗಳು ಗಡಿಯೊಳಕ್ಕೆ ನುಸುಳುವುದು ತೀರಾ ಕಡಿಮೆ. ಕಾಡಾನೆಗಳು ಇತ್ತ ಬಂದಾಗಲೆಲ್ಲಾ ಪರಿಣಿತರನ್ನು ಕರೆಯಿಸಿ, ಅರಣ್ಯಕ್ಕೆ ಹಿಮ್ಮೆಟ್ಟಿಸಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ.

ನನ್ನ ಅವಧಿಯಲ್ಲಿ ಆನೆದಾಳಿಯಿಂದ ನಷ್ಟ ಉಂಟಾದ ರೈತರಿಗೆ ಕನಿಷ್ಠ ₹ 25 ಸಾವಿರದಿಂದ ₹ 5 ಲಕ್ಷದವರೆಗೆ ಪರಿಹಾರ ಕೊಡಿಸಲಾಯಿತು. ಕಳೆದ ವರ್ಷದ ಆನೆ ದಾಳಿಯಿಂದಾದ ನಷ್ಟಕ್ಕೆ ಇದುವರೆಗೂ ಪರಿಹಾರ ನೀಡಿಲ್ಲ. ಈ ಭಾಗದ ಅರಣ್ಯವನ್ನು ವನ್ಯಜೀವಿಧಾಮ ಎಂದು ಘೋಷಿಸಿ, ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಯಿತು. ನಂತರ ಅಧಿಕಾರಕ್ಕೆ ಬಂದ ಹಾಲಿ ಶಾಸಕರು ಈ ಬಗ್ಗೆ ಕಾಳಜಿ ವಹಿಸಬೇಕಾಗಿದೆ - ಎಂ.ನಾರಾಯಣಸ್ವಾಮಿ ಬಿಜೆಪಿ ಮುಖಂಡ

ಕ್ಷೇತ್ರದಲ್ಲಿನ ರೈತರ ಸಂಕಷ್ಟದ ಅರಿವು ನಮಗಿದೆ. ಆನೆ ದಾಳಿಯಿಂದ ಬೆಳೆ ಹಾನಿ ಮತ್ತು ಪ್ರಾಣ ಹಾನಿಯಾಗುತ್ತಿರುವ ಬಗ್ಗೆ ಈಗಾಗಲೆ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಅಧಿಕಾರಕ್ಕೆ ಬಂದ ಕೂಡಲೆ ಕಾಡಾನೆ ಹಾವಳಿಗೆ ಶಾಶ್ವತ ಕ್ರಮ ಕೈಗೊಳ್ಳುವ ಬಗ್ಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ – ಹರಟಿ ಬಾಬು, ಯುವ ಜನತಾದಳದ ಜಿಲ್ಲಾ ಘಟಕ ಅಧ್ಯಕ್ಷ.

**

ಆನೆದಾಳಿಯಿಂದ ನಷ್ಟ ಉಂಟಾಗಿದೆ. ಪರಿಹಾರ ನೀಡುವಲ್ಲಿ ಅರಣ್ಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಿನ ಸುತ್ತ ಕಂದಕ ತೋಡುವ ಕೆಲಸ ನನೆಗುದಿಗೆ ಬಿದ್ದಿದೆ - ಟಿ.ಎನ್.ರಾಮೇಗೌಡ, ರೈತ ಸಂಘದ ಜಿಲ್ಲಾ ಅಧ್ಯಕ್ಷ.

**

ಆನೆ ದಾಳಿಯಿಂದ ಒಂದು ಲಕ್ಷ ನಷ್ಟವಾದರೆ ಅರಣ್ಯ ಇಲಾಖೆ ಐದಾರು ಸಾವಿರ ನೀಡುತ್ತಿದೆ. ನಷ್ಟಕ್ಕೆ ಒಳಗಾದ ಬೆಳೆಯ ಖರ್ಚುನ್ನು ಕೂಡ ಅರಣ್ಯ ಇಲಾಖೆ ನೀಡುತ್ತಿಲ್ಲ - ನಾರಾಯಣಗೌಡ, ರೈತ, ಮೂತನೂರು. 

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.