ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿದ ಟಿಕೆಟ್: ಎಚ್‌ಆರ್‌ಸಿ ಬೆಂಬಲಿಗರ ಪ್ರತಿಭಟನೆ

Last Updated 18 ಏಪ್ರಿಲ್ 2018, 9:43 IST
ಅಕ್ಷರ ಗಾತ್ರ

ಗಂಗಾವತಿ: ಉದ್ಯಮಿ ಎಚ್.ಆರ್. ಚನ್ನಕೇಶವ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಂಗಳವಾರ ಅವರ ಅಭಿಮಾನಿಗಳು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿದರು.

ಮುಖಂಡರಾದ ರಾಘು ಹಾಗೂ ಕಚೇರಿಯ ಸಹಾಯಕ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಧರಣಿಕಾರರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ಹಿರಿಯ ಮುಖಂಡ ಮಾರ್ಕಂಡಯ್ಯ,  ಕ್ಷೇತ್ರದಲ್ಲಿ ಮನೆಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಚನ್ನಕೇಶವ ಪ್ರಚಾರ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಿದ್ದಾರೆ.

ಒಂದು ವರ್ಷದ ಹಿಂದೆ ಪಕ್ಷದ ಹಿರಿಯ ಮುಖಂಡರು ಟಿಕೆಟ್ ನೀಡುವ ಭರವಸೆ ಹಿನ್ನೆಲೆ ಚನ್ನಕೇಶವ ಅವರು ಸಕ್ರಿಯರಾಗಿ ಕ್ಷೇತ್ರದ ಪ್ರತಿ ಮತದಾರರ ಮನೆಗೆ ಹೋಗಿ ಪ್ರಚಾರ ಮಾಡಿದ್ದರು. ಆದರೆ ಪಕ್ಷ ದ್ರೋಹ ಬಗೆದಿದೆ ಎಂದು ಆರೋಪಿಸಿದರು.

ಮುಖಂಡ ಶ್ರೀನಿವಾಸ ಮಾತನಾಡಿ, ಬಿಜೆಪಿಯ ಟಿಕೆಟ್ ಹಂಚಿಕೆಯಲ್ಲಿ ಜಾತಿ, ಹಣದ ಲೆಕ್ಕಾಚಾರ ಅಡಗಿದೆ. ಆದರೆ ಪಕ್ಷದ ಸಂಘಟನೆ, ಕಾರ್ಯಕರ್ತರ ಮಾತಿಗೆ ಮನ್ನಣೆ ಸಿಕ್ಕುತ್ತಿಲ್ಲ. ಹೀಗಾಗಿ ಹಿಂದುಳಿದ ವರ್ಗದ ನಾಯಕರನ್ನು ಪಕ್ಷದಲ್ಲಿ ತುಳಿಯಲಾಗುತ್ತಿದೆ ಎಂದು ಆರೋಪಿಸಿದರು.

ಸಧ್ಯಕ್ಕೆ ಚನ್ನಕೇಶವ ಊರಲ್ಲಿ ಇಲ್ಲ. ಎರಡು ದಿನದಲ್ಲಿ ತಮ್ಮ ನಾಯಕನ ನೇತೃತ್ವದಲ್ಲಿ ಬೆಂಬಲಿಗರ ಹಾಗೂ ಪಕ್ಷದ ಕಾರ್ಯಕರ್ತರ ಸಭೆ ಕರೆದು ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುವುದು ಬಗ್ಗೆ ತೀರ್ಮಾನ ಕೈಗೊಳ್ಳಿದ್ದೇವೆ ಎಂದರು.

ಪ್ರತಿಭಟನೆ ನಡೆಯುತ್ತಿರುವ ಮಾಹಿತಿ ತಿಳಿದು ಪಕ್ಷದ ಕೆಲ ಮುಖಂಡರಾದ ಸಂತೋಷ್ ಕೇಲೋಜಿ, ಪಂಪಾಪತಿ ಸಿಂಗನಾಳ, ಸೋಮಶೇಖರಗೌಡ ಸ್ಥಳಕ್ಕೆ ಆಗಮಿಸಿ ಧರಣಿಕಾರರನ್ನು ಸಮಾಧಾನ ಪಡಿಸಿ ಬೀದಿ ಬದಿಯಲ್ಲಿ ಹೋರಾಟ ಬಿಡಿ. ಕುಳಿತು ಚರ್ಚಿಸುವ ಎಂದು ಸಮಾಧಾನ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT