ಭಾನುವಾರ, ಡಿಸೆಂಬರ್ 15, 2019
20 °C
ಆತಗೂರು ಹೋಬಳಿಯ ಕುಡಿಯುವ ನೀರಿನ ಸಮಸ್ಯೆಗೆ ಕೊನೆ ಇಲ್ಲ, ಕೊಕ್ಕರೆ ಸಾವಿಗೆ ಮಿತಿ ಇಲ್ಲ

ಮದ್ದೂರು: ಶಿಂಷಾ ನದಿ ನೀರು ಸದ್ಬಳಕೆಯಲ್ಲಿ ವೈಫಲ್ಯ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮದ್ದೂರು: ಶಿಂಷಾ ನದಿ ನೀರು ಸದ್ಬಳಕೆಯಲ್ಲಿ ವೈಫಲ್ಯ

ಮಂಡ್ಯ: ಮದ್ದೂರು ತಾಲ್ಲೂಕಿನ ಜೀವನದಿ ಶಿಂಷೆ. ಅಕ್ಕಪಕ್ಕದ ತಾಲ್ಲೂಕಿನ ಜನರು ಶಿಂಷೆಯ ನೀರು ಬಳಸಿಕೊಂಡಿದ್ದಾರೆ. ಆದರೆ ಮದ್ದೂರು ತಾಲ್ಲೂಕಿನ ಜನಪ್ರತಿನಿಧಿಗಳು ನದಿ ನೀರನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಸೋತಿದ್ದು ಜನರು ನೀರಿಗಾಗಿ ಹಾತೊರೆಯುವ ಪರಿಸ್ಥಿತಿ ಮಂದುವರಿದಿದೆ.

ಆತಗೂರು ಹೋಬಳಿಯ ಜನರು ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪರಿತಪಿಸುತ್ತಾರೆ. ಬೇಸಿಗೆಯಲ್ಲಂತೂ ಇಲ್ಲಿಯ ಜನರಿಗೆ ಟ್ಯಾಂಕರ್‌ ಮೂಲಕವೇ ನೀರು ಪೂರೈಸಬೇಕು. ಅಷ್ಟಕ್ಕೂ ಆತಗೂರು ಹೋಬಳಿಯ 30ಕ್ಕೂ ಹೆಚ್ಚು ಹಳ್ಳಿಗಳು ಶಿಂಷೆಯ ತಟದಲ್ಲೇ ಇವೆ. ಮಲ್ಲನಾಯಕನಹಳ್ಳಿ, ಕುಂದನಕುಪ್ಪೆ, ಅಡಗನಹಳ್ಳಿ, ಕೆಸ್ತೂರು, ಗೊಲ್ಲರದೊಡ್ಡಿ, ಮಲ್ಲನಕುಪ್ಪೆ ಮುಂತಾದ ಗ್ರಾಮಗಳು ನದಿಗೆ ಒಂದೆರಡು ಕಿ.ಮೀ ವ್ಯಾಪ್ತಿಯಲ್ಲಿವೆ. ಆದರೂ ಕುಡಿಯುವ ನೀರು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇಲ್ಲಿಯ ಜನರ ಸ್ಥಿತಿ ‘ಸಮುದ್ರದ ಜೊತೆ ನೆಂಟಸ್ಥನ, ಉಪ್ಪಿಗೆ ಬಡತನ’ ಎಂಬಂತಾಗಿದೆ.

ಇನ್ನು ಬನ್ನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ 32 ಹಳ್ಳಿಗಳಿಗೆ ಕುಡಿಯುವ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಾವರಿ ಯೋಜನೆಗೆ ಇನ್ನೂ ಮುಕ್ತಿ ದೊರೆತಿಲ್ಲ. ಹಲವು ವರ್ಷಗಳಿಂದ ಆ ಹಳ್ಳಿಗಳ ಜನರು ನೀರಿಗಾಗಿ ಕಾಯುತ್ತಿದ್ದಾರೆ. ಆದರೆ ಇನ್ನೂ ನೀರು ಪೂರೈಸಲು ಸಾಧ್ಯವಾಗಿಲ್ಲ. ಕಾಮಗಾರಿ ಶೇ 70ರಷ್ಟು ಕಾಮಗಾರಿ ಮುಗಿದಿದ್ದು ಮರಳು ಕೊರತೆ ಹಾಗೂ ಹಲವು ತಾಂತ್ರಿಕ ಸಮಸ್ಯೆಗಳಿಂದ ಯೋಜನೆ ಕುಂಟುತ್ತಾ ಸಾಗಿದೆ.

‘ನಮ್ಮ ಅಕ್ಕಪಕ್ಕದಲ್ಲೇ ಹರಿಯುವ ಶಿಂಷಾ ನದಿ ನೀರು ನಮಗೆ ಸರಿಯಾಗಿ ಸಿಗುತ್ತಿಲ್ಲ. ಆದರೆ ಚನ್ನಪಟ್ಟಣ ಹಾಗೂ ಮಳವಳ್ಳಿ ತಾಲ್ಲೂಕಿನ ಜನಪ್ರತಿನಿಧಿಗಳು ನಮ್ಮ ತಾಲ್ಲೂಕಿನ ಜೀವನದಿಯನ್ನು ಪರಿಣಾಮಕಾರಿಯಾಗಿ ಉಪಯೋಗ ಮಾಡಿಕೊಂಡಿದ್ದಾರೆ. ಇಗ್ಗಲೂರು ಜಲಾಶಯದಿಂದ ಜನ್ನಪಟ್ಟಣ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಆದರೆ ನಮ್ಮ ತಾಲ್ಲೂಕಿನ ಕೆರೆಗಳು ನೀರಿನಲ್ಲದೆ ಒಣಗುತ್ತಿವೆ’ ಎಂದು ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ಉಮಾಶಂಕರ್ ಹೇಳಿದರು.

ಪುನಶ್ಚೇತನ ಕಾಣದ ಏತ ನೀರಾವರಿ:

ಎಂ.ಎಸ್‌.ಕೃಷ್ಣ ಅವರು ಬಲು ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿದ್ದ ಹಲವು ಏತನೀರಾವರಿ ಘಟಕಗಳು ಇಂದು ವೈಫಲ್ಯ ಕಂಡಿವೆ. ಮದ್ದೂರು ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ ಅವುಗಳಲ್ಲಿ ಮಾಚಹಳ್ಳಿ, ನವಿಲೆ, ಬಾಣಂಜಿ ಪಂತ್‌ ಏತ ನೀರಾವರಿ ಘಟಕಗಳು ಮಾತ್ರ ಆಗಾಗ ಕಾರ್ಯ ನಿರ್ವಹಿಸುತ್ತಿವೆ. ತಾಂತ್ರಿಕ ಸಮಸ್ಯೆ ಎದುರಾದಾಗ ಅವೂ ಸ್ಥಗಿತಗೊಳ್ಳುತ್ತಿವೆ. ಉಳಿದ ಆಲೂರು, ಕೆ.ಕೋಡಿಹಳ್ಳಿ, ಕದಲೂರು, ಕಬ್ಬಾರೆ ಗ್ರಾಮಗಳ ಸಮೀಪ ನಿರ್ಮಾಣ ಮಾಡಲಾಗಿರುವ ಏತ ನೀರಾವರಿ ಘಟಕಗಳು ಹಳ್ಳ ಹಿಡಿದಿದ್ದು ನೀರು ನೆಚ್ಚಿಕೊಂಡಿದ್ದ ರೈತರು ನಿರಾಸೆ ಅನುಭವಿಸಿದ್ದಾರೆ ಎಂದು ರೈತರು ದೂರುತ್ತಾರೆ.

‘ಏತ ನೀರಾವರಿ ಯೋಜನೆ ಪುನಶ್ಚೇತನಕ್ಕೆ ಈ ಭಾಗದ ಯಾವ ಜನಪ್ರತಿನಿಧಿಯೂ ಪ್ರಮುಖ ಆದ್ಯತೆ ಕೊಡಲಿಲ್ಲ. ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿ ಯೋಜನೆ ಜಾರಿಗೊಳಿಸಿದರು. ಆದರೆ ಕೆಲವು ಘಟಕಗಳು ಒಂದು ಹನಿ ನೀರನ್ನೂ ಎತ್ತಲಿಲ್ಲ. ಹೀಗಾಗಿ ಸರ್ಕಾರದ ಹಣವೂ ಪೋಲಾಯಿತು. ರೈತರ ನಿರೀಕ್ಷೆಯೂ ಸುಳ್ಳಾಯಿತು’ ಎಂದು ಮದ್ದೂರಿನ ರಮೇಶ್‌ಕುಮಾರ್‌ ಹೇಳಿದರು.

ಒಳಚರಂಡಿ ಸಮಸ್ಯೆ:

ಮದ್ದೂರು ಪಟ್ಟಣದ ಒಳಚರಂಡಿ ನೀರನ್ನು ಶುದ್ಧೀಕರಿಸಲು ಎರಡು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಈ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಚರಂಡಿ ನೀರು ಶುದ್ಧೀ ಕರಣಗೊಳ್ಳದೆ ನದಿ ಸೇರುತ್ತಿದೆ. ಇದರಿಂದ ಜಲಚರಗಳ ಪ್ರಾಣಹಾನಿಯಾಗುತ್ತಿದ್ದು ನದಿ ತಟದ ಹಳ್ಳಿಗಳ ಜನರಿಗೆ ರೋಗ ಭೀತಿ ಎದುರಾಗಿದೆ. ನದಿ ತಟದಲ್ಲಿ ಇರುವ ವಿಶ್ವವಿಖ್ಯಾತ ಕೊಕ್ಕರೆಬೆಳ್ಳೂರಿನಲ್ಲಿ ಪಿಲಿಕಾನ್‌ಗಳು ಸಾಯಲು ಶುದ್ಧೀಕರಣಗೊಳ್ಳದ ಚರಂಡಿ ನೀರೇ ಕಾರಣ ಎಂದು ಜನರು ಆರೋಪಿಸುತ್ತಾರೆ.

‘ಕಳೆದ ಆರು ತಿಂಗಳಿಂದ ಈವರೆಗೆ 60ಕ್ಕೂ ಹೆಚ್ಚು ಪೆಲಿಕಾನ್‌ಗಳು ಸತ್ತಿವೆ. ಪ್ರಯೋಗಶಾಲೆಯಲ್ಲಿ ಜಂತು ಹುಳುಗಳಿಂದ ಕೊಕ್ಕರೆಗಳು ಸಾಯುತ್ತಿವೆ ಎಂದು ವರದಿ ಬಂದಿದೆ. ಇನ್ನೊಂದು ಸಮೀಕ್ಷೆಯ ಪ್ರಕಾರ ಮಾನವನ ಮಲದಿಂದ ಜಂತು ಹುಳುಗಳು ಉತ್ಪತ್ತಿಯಾಗುತ್ತಿವೆ. ಈ ಜಂತು ಹುಳುಗಳನ್ನು ತಿನ್ನುವ ಕೊಕ್ಕರೆ ಸಾಯುತ್ತಿವೆ. ಚರಂಡಿ ನೀರಿನಲ್ಲಿ ಅತೀ ಹೆಚ್ಚು ಮಾನವನ ಮಲ ಇರುವುದರಿಂದ ಕೊಕ್ಕರೆಗಳ ಪ್ರಾಣಕ್ಕೆ ಕುತ್ತು ತಂದಿದೆ’ ಎಂದು ಪಕ್ಷಿ ಪ್ರೇಮಿ ಹರಿಪ್ರಸಾದ್‌ ಹೇಳಿದರು.

ಪೇಟೆ ಬೀದಿ ಅಗಲೀಕರಣ ಮರೀಚಿಕೆ:

ಅಯ್ಯಪ್ಪ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಪೇಟೆ ಬೀದಿ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು. ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣದ ಎಲ್ಲಾ ಸಿದ್ಧತೆ, ಸ್ಥಳ ಗುರುತು ಮಾಡಿದ್ದರು. ಸ್ಥಳೀಯ ರಾಜಕಾರಣ ಅಯ್ಯಪ್ಪ ಅವರ ಅಭಿವೃದ್ಧಿ ಯೋಜನೆಯ ಕಾರ್ಯಗತಗೊಳಿಸಲು ಬಿಡಲಿಲ್ಲ. ಅವರು ತಕ್ಷಣ ವರ್ಗಾವಣೆಯಾದರು. ಅವರ ನಂತರ ಬಂದ ಯಾವ ಜಿಲ್ಲಾಧಿಕಾರಿಗಳೂ ಪೇಟೆ ಬೀದಿ ಅಗಲೀಕರಣ ಕೆಲಸಕ್ಕೆ ಕೈ ಹಾಕಲಿಲ್ಲ. ಪೇಟೆ ಬೀದಿಯಲ್ಲಿ ಪ್ರಭಾವಿಗಳು, ಮುಖಂಡರ ಅಂಗಡಿಗಳು, ಕಟ್ಟಡಗಳು ಇರುವ ಕಾರಣ ಅವರ ಪ್ರಭಾವ ಇಲ್ಲಿ ಕೆಲಸ ಮಾಡಿತು ಎಂದು ಸಾರ್ವಜನಿಕರು ಹೇಳುತ್ತಾರೆ.

ಖಾಸಗಿ ಬಸ್‌ ನಿಲ್ದಾಣದ ಅವಸ್ಥೆ:

ಮದ್ದೂರು ಪಟ್ಟಣದಲ್ಲಿ ಖಾಸಗಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಯಾವುದೇ ಬಸ್‌ ಬರುತ್ತಿಲ್ಲ. ಸ್ಥಳೀಯ ಆಡಳಿತ ಅಲ್ಲಿಗೆ ಬಸ್‌ಗಳು ಬರುವಂತೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಲ್ಲಿ ನಾಯಿಗಳು, ಹಂದಿಗಳು ವಾಸ ಮಾಡುತ್ತಿವೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಕುಡುಕರು, ಭಿಕ್ಷುಕರು ಹಗಲು ವೇಳೆಯಲ್ಲೂ ನಿದ್ದೆ ಮಾಡುತ್ತಾರೆ. ಆದರೆ ಬಸ್‌ಗಾಗಿ ಹಳ್ಳಿ ಜನರ ಪರದಾಟ ಮುಂದುವರಿದಿದ್ದು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿವರೆಗೆ ನಡೆದು ಹೋಗಿ ಬಸ್‌ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ:

ಕಳೆದ 10 ವರ್ಷಗಳಿಂದೀಚೆಗೆ ಮದ್ದೂರು ತಾಲ್ಲೂಕು ಶೈಕ್ಷಣಿಕ ತಾಲ್ಲೂಕಾಗಿ ರೂಪಾಂತರ ಹೊಂದಿದೆ. ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ ಸೇರಿ ವಿವಿಧ ಶೈಕ್ಷಣಿಕ ಸಂಸ್ಥೆಗಳು ತಲೆ ಎತ್ತಿವೆ. ‘ಮೊದಲು ಶಿಕ್ಷಣ ಪಡೆಯಲು ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ತೆರಳಬೇಕಾಗಿತ್ತು. ಈಗ ಎಲ್ಲಾ ಶಾಲಾ ಕಾಲೇಜುಗಳು ಮದ್ದೂರಿನಲ್ಲೇ ಇವೆ. ನಮ್ಮ ಮಕ್ಕಳು ಕಾಲೇಜಿಗೆ ದೂರದ ಊರುಗಳಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಹಲವು ವರ್ಷಗಳಿಂದ ಇಡೀ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದೆ. ಶೈಕ್ಷಣಿಕವಾಗಿ ನಮ್ಮ ತಾಲ್ಲೂಕು ಮುಂದಿದೆ’ ಎಂದು ಶಿಕ್ಷಕ ರಾಮಮೂರ್ತಿ ಹೇಳಿದರು.

ನೀರಾವರಿಗೆ ಮೊದಲ ಆದ್ಯತೆ

ಮದ್ದೂರು ತಾಲ್ಲೂಕಿನಲ್ಲಿ ಅಭಿವೃದ್ಧಿ ಪರ್ವವನ್ನೇ ಕಾಣಬಹುದು. ಎಡದಂಡೆ ನಾಲೆ ಆಧುನೀಕರಣ ಕಾಮಗಾರಿ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಏತ ನೀರಾವರಿ ಯೋಜನೆಗಳ ಪುನಶ್ಚೇತನವೂ ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ₹ 4.5 ಕೋಟಿ ವೆಚ್ಚ ಮಾಡಲಾಗಿದೆ. ತೊರೆಶೆಟ್ಟಿಹಳ್ಳಿ ಬಳಿ ಬ್ಯಾರೇಜ್‌ ನಿರ್ಮಾಣಕ್ಕೆ ₹ 4.5 ಕೋಟಿ, ಆತಗೂರು ಕೆರೆ ತುಂಬಿಸಲು ₹ 3.5 ಕೋಟಿ, ಕೆಸ್ತೂರು ಕೆರೆ ತುಂಬಿಸಲು ₹ 2.5 ಕೋಟಿ, ಅಂಕನಾಥಪುರ ಕೆರೆ ತುಂಬಿಸಲು ₹ 2.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ ತಾಲ್ಲೂಕನ್ನು ಇಡೀ ಜಿಲ್ಲೆಯಲ್ಲಿ ಒಂದು ಮಾದರಿ ಶೈಕ್ಷಣಿಕ ಕೇಂದ್ರವನ್ನಾಗಿ ನಿರ್ಮಿಸಲಾಗಿದೆ. ಇಲ್ಲಿಯ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ದೊರೆಯುತ್ತಿದೆ. ವಸತಿ ಶಾಲೆ ಸ್ಥಾಪನೆಯಲ್ಲೂ ನಮ್ಮ ತಾಲ್ಲೂಕು ಮುಂದಿದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ಕಳಪೆ ಗ್ರಾಮಿಣ ರಸ್ತೆಗಳು

ಗ್ರಾಮಿಣ ರಸ್ತೆಗಳ ನಿರ್ಮಾಣಕ್ಕೆ ಪ್ರಮುಖ ಆದ್ಯತೆ ಕೊಟ್ಟಿಲ್ಲ. ಅಲ್ಲದೆ ನಿರ್ಮಾಣಗೊಂಡಿರುವ ಗ್ರಾಮಿಣ ರಸ್ತೆಗಳು ಕಳಪೆಯಾಗಿವೆ. ರಸ್ತೆ ನಿರ್ಮಾಣ ಮಾಡಿದ ವಾರದಲ್ಲಿ ರಸ್ತೆಗಳು ಕಿತ್ತುಹೋಗಿವೆ. ಈ ಬಗ್ಗೆ ಗ್ರಾಮಿಣ ಜನರು ಎಲ್ಲೇ ಹೋದರೂ ದೂರುತ್ತಾರೆ. ಅಲ್ಲದೆ ಕಳೆದ ಐದು ವರ್ಷಗಳಿಂದ ಕೆರೆ ತುಂಬಿಸಿಲ್ಲ. ಚುನಾವಣೆ ಸಮಯದಲ್ಲಿ ಭೂಮಿ ಪೂಜೆ ಮಾಡಿದ್ದಾರೆ. ಐದು ವರ್ಷಗಳಿಂದ ಕೆರೆಗಳು ಹೂಳು ಎತ್ತಿಸಿಲ್ಲ. ಆದರೆ ಚುನಾವಣೆ ಬಂದಾಗ ಹೂಳು ಎತ್ತುವ ಬಗ್ಗೆ ಮಾತನಾಡುತ್ತಿದ್ದಾರೆ. ಕೆ.ಆರ್‌.ಎಸ್‌ ಜಲಾಶಯದಿಂದ ಕೊನೆಯ ಭಾಗದ ನಾಲೆಗಳಿಗೆ ನೀರು ಹರಿಸುವಲ್ಲಿ ಯಶಸ್ಸು ಕಂಡಿಲ್ಲ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ್‌ ಕುಮಾರ್ ಹೇಳಿದರು.

ಅಭಿವೃದ್ಧಿ ಕಾಣುತ್ತಿಲ್ಲ

ಶಾಸಕರು ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಕ್ಷೇತ್ರದ ಯಾವ ಮೂಲೆಯಲ್ಲೂ ಅಭಿವೃದ್ಧಿ ಕಾಣುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯೇ ಬಗೆಹರಿದಿಲ್ಲ. ಶಿಂಷಾ ನದಿ ನೀರು ಚನ್ನಪಟ್ಟಣಕ್ಕೆ ಹರಿದು ಹೋಗುತ್ತಿದೆ. ಆದರೆ ನಮ್ಮ ತಾಲ್ಲೂಕಿನ ಜನರಿಗೆ ನೀರು ಒದಗಿಸುವುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ – ಬಿ.ಎಂ. ಶ್ರೀಧರ, ಬಿದರಹಳ್ಳಿ

ಬಂಡವಾಳಶಾಹಿಗಳ ಹಿತ ಕಾಯುತ್ತಿದ್ದಾರೆ

ಚಾಂಷುಗರ್‌ ಕಾರ್ಖಾನೆಯಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ರೈತರ ಪಾಲಿಗೆ ಯಾವೊಬ್ಬ ಜನಪ್ರತಿನಿಧಿಯೂ ಇಲ್ಲವಾಗಿದ್ದಾರೆ. ಕಬ್ಬು ಬೆಳೆಗಾರರು ಕಾರ್ಖಾನೆಗೆ ಪೂರೈಸಿದ ಕಬ್ಬಿನ ಹಣವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳು ರೈತರ ಹಿತ ಕಾಯುವ ಬದಲು ಖಾಸಗಿ ಬಂಡವಾಳಶಾಹಿಗಳ ಹಿತ ಕಾಯುತ್ತಿದ್ದಾರೆ – ಮಣಿಗೆರೆ ಕಬ್ಬಾಳಯ್ಯ. ಯುವ ಮುಖಂಡರು

ತಾಲ್ಲೂಕು ಅಭಿವೃದ್ಧಿಯಾಗಿದೆ

ಶಾಸಕರ ಅಭಿವೃದ್ದಿ ಕಾರ್ಯಗಳು ಮೆಚ್ಚುವಂಥಹದ್ದು. ಶಿಕ್ಷಣ, ಕುಡಿಯುವ ನೀರು, ರಸ್ತೆ ಹೀಗೆ ಎಲ್ಲ ಕ್ಷೇತ್ರದಲ್ಲು ಅಭಿವೃದ್ಧಿ ಮಾಡಿದ್ದಾರೆ. ಮೊದಲು ಮದ್ದೂರು ತಾಲ್ಲೂಕಿನಲ್ಲಿ ಮೂಲಸೌಲಭ್ಯಗಳೂ ಇರಲಿಲ್ಲ. ಆದರೆ ಇತ್ತೀಚೆಗೆ ಅಂತಹ ಪರಿಸ್ಥಿತಿ ಇಲ್ಲ. ಮದ್ದೂರು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಿದ್ದಾರೆ. ಉತ್ತಮ ರಸ್ತೆ ನಿರ್ಮಿಸಿದ್ದಾರೆ – ಜಯಶೀಲಾ ಬೋರಯ್ಯ, ಚಾಮನಹಳ್ಳಿ.

ಪರಿಶಿಷ್ಟರ ಅಭಿವೃದ್ಧಿ ಇಲ್ಲ

ಪರಿಶಿಷ್ಟ ಜನಾಂಗದವರನ್ನು ಶಾಸಕರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕ್ಷೇತ್ರದಲ್ಲಿ ಪರಿಶಿಷ್ಟ ಜನಾಂಗದವರಿಗಾಗಿ ಏನೊಂದು ಅಭಿವೃದ್ದಿ ಕಾರ್ಯ ಮಾಡಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಯೋಜನೆ ಜಾರಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಮುದಾಯದ ಸ್ಥಿತಿ ಅಭಿವೃದ್ಧಿಯಾಗಿಲ್ಲ – ಕೆ.ಎಸ್. ರುದ್ರಯ್ಯ. ಕಾಡುಕೊತ್ತನಹಳ್ಳಿ.

ನೋವು ನಲಿವಿಗೆ ಸ್ಪಂದನೆ

ಸಾಮಾನ್ಯ ಜನರ ನೋವು ನಲಿವುಗಳಿಗೆ ಶಾಸಕ ಡಿ.ಸಿ. ತಮ್ಮಣ್ಣ ಅವರು ಸ್ಪಂದಿಸಿದ್ದಾರೆ. ಅಭಿವೃದ್ದಿ ವಿಷಯದಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಸದಾ ಜನರ ಕೈಗೆ ಸಿಗುತ್ತಾರೆ. ಜನರು ಯಾವುದೇ ಸಮಸ್ಯೆ ಕೊಂಡೊಯ್ದರು ಅದಕ್ಕೊಂದು ಸೂಕ್ತ ಪರಿಹಾರ ನೀಡುತ್ತಾರೆ – ಪೂರ್ಣಿಮಾ ರಾಜು, ಗೊರವನಹಳ್ಳಿ.

ನೀರೀಕ್ಷೆಗಳು ಹುಸಿಯಾಗಿವೆ

ಕ್ಷೇತ್ರ ನೀರಿಕ್ಷಿತ ಅಭಿವೃದ್ಧಿ ಕಂಡಿಲ್ಲ. ಗ್ರಾಮೀಣ ಭಾಗದ ಅಲ್ಪ ಸಂಖ್ಯಾತರ ಕಾಲೊನಿಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕ್ಷೇತ್ರದ ಜನ ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ಬಂದೊದಗಿದೆ – ಮೊಹಮ್ಮದ್‌ ಇಲಿಯಾಜ್‌. ಬೆಸಗರಹಳ್ಳಿ.

ಮಹಿಳೆಯರಿಗೆ ಸೌಲಭ್ಯ ಕಡಿತ

ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ರೂಪಿಸಿಕೊಳ್ಳಲು ನೀಡುತ್ತಿದ್ದ ಸಾಲ ಸೌಲಭ್ಯವನ್ನು ಕಡಿತ ಮಾಡಲಾಗಿದೆ – ಕೆ. ದೀಪಾ, ಮಹರ್ನವಮಿದೊಡ್ಡಿ.

ಪ್ರತಿಕ್ರಿಯಿಸಿ (+)