ಕಳವಾಗಿದ್ದ ದೈವದ ಮೊಗ ಬಾವಿಯಲ್ಲಿ ಪತ್ತೆ

7

ಕಳವಾಗಿದ್ದ ದೈವದ ಮೊಗ ಬಾವಿಯಲ್ಲಿ ಪತ್ತೆ

Published:
Updated:

ಬಜ್ಪೆ: ನಾಲ್ಕು ವರ್ಷಗಳ ಹಿಂದೆ ಪೆರ್ಮುದೆಯ ಗರ್ಭಗುಡಿಯಿಂದ ಕಳವಿಗೀಡಾಗಿದ್ದ  ದೈವದ ಮೊಗ ಪೆರ್ಮುದೆಯ ರಾಯಲ್ ಗಾರ್ಡನ್ ಬಸ್‍ ನಿಲ್ದಾಣ ಬಳಿಯ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

ಪೆರ್ಮುದೆ ಭಟ್ರಕೆರೆಯ ಯಾದವ ಕೋಟ್ಯಾನ್ ಎಂಬವರ ಮನೆಯ ಅಣ್ಣಪ್ಪ ದೈವದ ಗುಡಿಯಿಂದ  ಕಳ್ಳರ ತಂಡ ಚಿನ್ನ, ಬೆಳ್ಳಿ ವಜ್ರ ಖಚಿತ ಮೊಗವನ್ನು ಕಳವು ಮಾಡಿತ್ತು. ಮನೆಯ ಅಂಗಳದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ಕಳ್ಳರ ಕೈಚಳಕ ಅದರಲ್ಲಿ ದಾಖಲಾಗಿತ್ತು. ಆದರೆ ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕಳ್ಳರ ಸ್ಪಷ್ಟ ಚಿತ್ರಣ ಗೋಚರವಾಗಿರಲಿಲ್ಲ.  ಬಜ್ಪೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಮಂಗಳವಾರ ಬಾವಿಯಲ್ಲಿ ತುಂಬಿದ್ದ ಕೆಸರು ತೆಗೆಯುತ್ತಿದ್ದ ವೇಳೆ ಈ ಪಂಚಲೋಹದ ಮೊಗ ಪತ್ತೆಯಾಗಿದೆ.

ಬಜ್ಪೆ ಪೊಲೀಸರು ಯಾದವ ಕೋಟ್ಯಾನ್ ಅವರ ದೈವದ ಗುಡಿಯಿಂದ ಕಳವಾಗಿದ್ದ ದೈವದ ಮೊಗ ಎಂದು ತಿಳಿಸಿದ್ದಾರೆ.

ಮೊಗಕ್ಕೆ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಕಣ್ಣು, ಚಿನ್ನದ ಸತ್ತಿಗೆ ಮತ್ತು ಬೆಳ್ಳಿಯ ಪ್ರಭಾವಳಿಯನ್ನು ತೆಗೆದು ಐದು ಕೆ.ಜಿ ಭಾರದ ಪಂಚಲೋಹದ ಮೊಗವನ್ನು ಬಾವಿಗೆ ಎಸೆದಿದ್ದಾರೆ. ಮೊಗವನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಇದನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry