ಬಬಲೇಶ್ವರದಲ್ಲೂ ಪ್ರಚಾರ; ಯತ್ನಾಳ

7
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ ಆರಂಭ

ಬಬಲೇಶ್ವರದಲ್ಲೂ ಪ್ರಚಾರ; ಯತ್ನಾಳ

Published:
Updated:

ವಿಜಯಪುರ: ‘ಪಕ್ಷದ ವರಿಷ್ಠರು ಸೂಚಿಸಿದರೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ಜತೆಗೆ, ಅಲ್ಲಿನ ಅಭ್ಯರ್ಥಿಯನ್ನು ಬಸವನ ಬಾಗೇವಾಡಿಗೂ ಪ್ರಚಾರಕ್ಕೆ ಕರೆದೊಯ್ಯುತ್ತೇನೆ’ ಎಂದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿಯ ಗುರುಕುಲ ರಸ್ತೆಯಲ್ಲಿ ಮಂಗಳವಾರ ಚುನಾವಣಾ ಕಚೇರಿ ಆರಂಭಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಭಾಗದಲ್ಲಿ ಹೈಕಮಾಂಡ್‌ ಸೂಚಿಸಿದ ವಿಧಾನಸಭಾ ಕ್ಷೇತ್ರಗಳಲ್ಲಿ 10 ದಿನ ಪ್ರಚಾರ ಕೈಗೊಳ್ಳಲಿದ್ದು, ನಗರ ಕ್ಷೇತ್ರದಲ್ಲಿ ಮೂರ್ನಾಲ್ಕು ದಿನ ಮಾತ್ರ ಮತ ಯಾಚಿಸುತ್ತೇನೆ’ ಎಂದರು.

‘ಮೋದಿ ಮತ್ತು ರಾಷ್ಟ್ರೀಯ ನಾಯಕರು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು, ಪ್ರಥಮ ಪಟ್ಟಿಯಲ್ಲಿಯೇ ಹೆಸರು ಪ್ರಕಟಿಸಿದ್ದಾರೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವ್ಯಕ್ತಿ ಆಧಾರಿತ ಚುನಾವಣೆ ಎದುರಿಸದೆ, ಪಕ್ಷ ಮತ್ತು ರಾಜ್ಯದ ಅಭಿವೃದ್ಧಿ ಮೇಲೆ ಮತ ಯಾಚಿಸುತ್ತೇನೆ’ ಎಂದು ಹೇಳಿದರು.

‘ಕೆಲವರ ಹೆಸರು ಮನಸ್ಸಿನಲ್ಲಿರುತ್ತವೆ. ಇನ್ನೂ ಕೆಲವರ ಹೆಸರು ಆತ್ಮದಲ್ಲಿರುತ್ತವೆ. ಬ್ಯಾನರ್ ಸಿದ್ಧಪಡಿಸುವ ಧಾವಂತದಲ್ಲಿ ಅಥವಾ ಜಾಗ ಇಲ್ಲದಕ್ಕೋ ಕಾರ್ಯಕರ್ತರು ಕೆಲವೊಬ್ಬರ ಫೋಟೋಗಳನ್ನು ಬಿಟ್ಟಿರಬಹುದು’ ಎಂದು ಚುನಾವಣಾ ಕಾರ್ಯಾಲಯದ ಬ್ಯಾನರ್‌ನಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಫೋಟೋ ಇಲ್ಲದಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

20ರಂದು ನಾಮಪತ್ರ ಸಲ್ಲಿಕೆ

‘ಏ. 20ರ ಶುಕ್ರವಾರ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುವೆ. ಮೂರನೇ ವ್ಯಕ್ತಿಗೆ ಅವಕಾಶವೇ ಇಲ್ಲ. ಈ ಬಾರಿಯ ಗೆಲುವು ನನ್ನದೇ’ ಎಂದು ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಶಿಸ್ತಿನ ಸಿಪಾಯಿಗಳು ನನ್ನ ಪರ ಕೆಲಸ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಕೇಸರಿ ಬಾವುಟ ಹಾರಾಡಲಿದೆ. ಬಿಜೆಪಿ ಜಯ ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ನಾರಾಯಣ ಸಾ ಭಾಂಡಗೆ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ರಾಹುಲ ಜಾಧವ, ಉಮೇಶ ವಂದಾಲ, ಪ್ರೇಮಾನಂದ ಬಿರಾದಾರ, ಗೂಳಪ್ಪ ಶಟಗಾರ, ಪರಶುರಾಮ ರಜಪೂತ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಡಾ.ಸುರೇಶ ಬಿರಾದಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿವೇಕಾನಂದ ಡಬ್ಬಿ, ರವಿಕಾಂತ ಬಗಲಿ, ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಉಪಸ್ಥಿತರಿದ್ದರು.

**

ಪಕ್ಷದೊಳಗಿನ ವೈಮನಸ್ಸನ್ನು ರಾಜ್ಯ ನಾಯಕರೇ ದೂರ ಮಾಡುತ್ತಾರೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರೊಂದಿಗೂ ವರಿಷ್ಠರೇ ಮಾತನಾಡಲಿದ್ದಾರೆ – ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಅಭ್ಯರ್ಥಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry