ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬಸವೋತ್ಸವ; ಬಸವ ಜಯಂತಿ ಮರೀಚಿಕೆ

ಬಸವ ಭಕ್ತರ ಬೇಡಿಕೆಗೆ ಸ್ಪಂದಿಸದ ಆಡಳಿತಾರೂಢ ಸರ್ಕಾರಗಳು; ಬಸವ ಜನ್ಮಭೂಮಿಯಲ್ಲಿ ಬೇಸರ
Last Updated 18 ಏಪ್ರಿಲ್ 2018, 11:40 IST
ಅಕ್ಷರ ಗಾತ್ರ

ವಿಜಯಪುರ: ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ರಾಷ್ಟ್ರೀಯ ಬಸವೋತ್ಸವ, ರಾಜ್ಯ ಮಟ್ಟದ ಬಸವ ಜಯಂತಿ ಆಚರಿಸಬೇಕು ಎಂಬ ಬಸವ ಭಕ್ತ ಸಮೂಹದ ಬೇಡಿಕೆ ಇಂದಿಗೂ ಈಡೇರಿಲ್ಲ. ಪ್ರಬಲ ಹಕ್ಕೊತ್ತಾಯದ ಕೂಗು ಅರಣ್ಯರೋದನವಾಗಿದೆ.

ಯಾವೊಂದು ಸರ್ಕಾರಗಳು ಇದುವರೆಗೂ ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸದಿರುವುದು ಬಸವ ಅನುಯಾಯಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕೊನೆ ಪಕ್ಷ ಜಿಲ್ಲಾ ಮಟ್ಟದ ಬಸವ ಜಯಂತಿಯೂ ಬಾಗೇವಾಡಿಯಲ್ಲಿ ನಡೆಯದಿರುವುದು ಬಸವ ಭಕ್ತರ ಬೇಸರ ಹೆಚ್ಚಿಸಿದೆ.

ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ನಿಟ್ಟಿನ ಯತ್ನ ನಡೆದರೂ; ಒಮ್ಮೆಯೂ ರಾಜ್ಯ ಮಟ್ಟದ ಬಸವ ಜಯಂತಿ ಬಸವನಬಾಗೇವಾಡಿಯಲ್ಲಿ ಆಚರಣೆ ಗೊಳ್ಳಲಿಲ್ಲ. ಲೀಲಾದೇವಿ ಆರ್‌.ಪ್ರಸಾದ್ ಸಚಿವರಾಗಿದ್ದ ಅವಧಿಯಲ್ಲಿ ಶರಣರ ಜಯಂತಿಯನ್ನು ಅವರವರ ಜನ್ಮಸ್ಥಳದಲ್ಲೇ ಆಚರಿಸಬೇಕು ಎಂಬ ಪ್ರಸ್ತಾಪವಿದ್ದರೂ, ಅನುಷ್ಠಾನ ಗೊಳ್ಳಲಿಲ್ಲ. ಇದರ ಪರಿಣಾಮ ಬಸವ ಅನುಯಾಯಿಗಳು ದಶಕದಿಂದ ಸಲ್ಲಿಸು ತ್ತಿರುವ ಬೇಡಿಕೆಗೆ ಇಂದಿಗೂ ಮನ್ನಣೆ ಸಿಗುತ್ತಿಲ್ಲ.

‘ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಗಾಗ್ಗೆ ರಾಜ್ಯ ಮಟ್ಟದ ವಚನ ಸಂಗೀತೋತ್ಸವ ಆಯೋಜಿಸುವುದನ್ನು ಹೊರತು ಪಡಿಸಿದರೆ ಇನ್ನಿತರ ಯಾವುದೇ ಚಟುವಟಿಕೆ ಬಸವ ಜನ್ಮಭೂಮಿಯಲ್ಲಿ ಆಯೋಜನೆಗೊಳ್ಳಲ್ಲ. ಜಿಲ್ಲಾ ಮಟ್ಟದ ಬಸವ ಜಯಂತಿ ಸಹ ವಿಜಯಪುರ ನಗರದಲ್ಲೇ ನಡೆಯುತ್ತದೆ. ತಾಲ್ಲೂಕು ಆಡಳಿತ, ಬಸವೇಶ್ವರ ದೇಗುಲ ಸಮಿತಿ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಸವನ ಬಾಗೇವಾಡಿಯಲ್ಲಿ ಜಯಂತಿ ಆಚರಿಸುತ್ತವೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬೇಡಿಕೆ: ‘ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಹಾಕುವುದು ಕಡ್ಡಾಯ ಎಂದು ಹಿಂದಿನ ಬಸವ ಜಯಂತಿ ಆಚರಣೆ ಸಂದರ್ಭದಲ್ಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕೆಲ ದಿನಗಳ ಹಿಂದಷ್ಟೇ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದು ಸ್ವಾಗತಾರ್ಹ. ಸಂತಸದಾಯಕ ಬೆಳವಣಿಗೆ. ಇದರ ಜತೆಗೆ ವಚನಗಳನ್ನು ವಿವಿಧ ಭಾಷೆಯಲ್ಲಿ ಪ್ರಕಟಿಸುವ ಮೂಲಕ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ’ ಎಂದು  ವಿವಿಧ ಸಂಘಟನೆಯ ಪದಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ.

ಇದೇ ರೀತಿ ಬಸವೇಶ್ವರರು ಜನ್ಮ ತಾಳಿದ ಬಸವನಬಾಗೇವಾಡಿಯಲ್ಲಿಯೇ ರಾಷ್ಟ್ರೀಯ ಬಸವೋತ್ಸವ, ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆ ಬಸವ ಅಭಿಮಾನಿಗಳದ್ದು.

‘ವಚನ ಸಾಹಿತ್ಯ ಕುರಿತ ಚಿಂತನ ಗೋಷ್ಠಿ ನಡೆಯಬೇಕು. ಬಸವಣ್ಣನವರ ಜೀವನ ಸಂದೇಶ ಕುರಿತಾದ ನಾಟಕ ಪ್ರದರ್ಶನಗೊಳ್ಳಬೇಕು. ವಚನ ಸಾಹಿತ್ಯ, ಶರಣರ ಜೀವನ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ಕಲಾವಿದರು ಸೇರಿದಂತೆ, ರಾಷ್ಟ್ರೀಯ–ಅಂತರರಾಷ್ಟ್ರೀಯ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು’ ಎಂದು ಮುರಗೇಶ ಸಂಗಮ ಆಗ್ರಹಿಸುತ್ತಾರೆ.

ಬಸವನಬಾಗೇವಾಡಿಯಲ್ಲಿ ಮೂಲ ನಂದೀಶ್ವರ (ಬಸವೇಶ್ವರ) ದೇವಸ್ಥಾನದ ಜೀರ್ಣೋದ್ಧಾರ, ಬಸವಣ್ಣ ಜನಿಸಿದ ಸ್ಥಳದಲ್ಲಿ ಭವ್ಯವಾದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರಿ ನಿವಾಸ ನಿರ್ಮಾಣವಾಗಿದೆ.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಸವನಬಾಗೇವಾಡಿಗೆ ಬರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದರೆ ರಾಷ್ಟ್ರೀಯ ಬಸವೋತ್ಸವ, ಬಸವ ಜಯಂತಿಯನ್ನು ಬಸವನಬಾಗೇವಾಡಿಯಲ್ಲಿ ಆಚರಿಸುವ ಮೂಲಕ ಬಸವಣ್ಣ ಹುಟ್ಟಿದ ಸ್ಥಳದ ಮಹತ್ವ ಸಾರುವುದರೊಂದಿಗೆ ಕ್ರಾಂತಿ ಮಾಡಿದ ಬಸವ ಕಲ್ಯಾಣ, ಐಕ್ಯ ಸ್ಥಳವಾದ ಕೂಡಲಸಂಗಮಗಳ ಮಹತ್ವವನ್ನು ತಿಳಿಸುವಂತಹ ಕೆಲಸ ನಡೆಯಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಹಿಂದೆ ಬಸವ ಜಯಂತಿ ದಿನವೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಾದರೂ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಬಸವ ಜಯಂತಿಯನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಆಚರಿಸಬಲ್ಲರು ಎಂಬ ನಿರೀಕ್ಷೆಯೂ ಇದೀಗ ಹುಸಿಯಾಗಿದೆ. ರಾಜ್ಯದಲ್ಲಿ ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರವಾದರೂ ಬಸವ ಭಕ್ತರ ಬೇಡಿಕೆ ಈಡೇರಿಸಲಿ ಎಂಬುದು ಎಲ್ಲರ ಆಶಯವಾಗಿದೆ.

ಹೋರಾಟದ ಹಾದಿ...

ಬಸವೇಶ್ವರ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿಯಾಗಿದ್ದ ಸಾಹಿತಿ ದಿ.ಬಾಳನಗೌಡ ಪಾಟೀಲ, ಇನ್ನಿತರೆ ಧರ್ಮದರ್ಶಿಗಳು ಸೇರಿದಂತೆ ರಾಷ್ಟ್ರೀಯ ಬಸವ ಸೈನ್ಯ, ನಂದಿ ಸಾಹಿತ್ಯ ವೇದಿಕೆ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾಜ್ಯ ಸರ್ಕಾರ ಪ್ರತಿ ವರ್ಷವೂ ರಾಷ್ಟ್ರೀಯ ಬಸವೋತ್ಸವ ಆಚರಿಸಬೇಕು ಎಂಬ ಹಕ್ಕೊತ್ತಾಯ ಸಲ್ಲಿಸಿದ್ದರು.

2000ನೇ ವರ್ಷದಲ್ಲಿ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷರಾಗಿದ್ದ ವಕೀಲ ದಿ.ಎಂ.ಎಂ.ಪಟ್ಟಣಶೆಟ್ಟಿ ಟ್ರಸ್ಟ್‌ ವತಿಯಿಂದಲೇ ರಾಷ್ಟ್ರೀಯ ಬಸವೋತ್ಸವ ಆಚರಿಸಿದರು. ಆ ವರ್ಷ ಮಾತ್ರ ಅದ್ಧೂರಿ ಕಾರ್ಯಕ್ರಮ ಆಯೋಜನೆಯಾಯಿತು. ನಂತರದಲ್ಲಿ ಹೆಸರಿಗೆ ಮಾತ್ರ ‘ರಾಷ್ಟ್ರೀಯ ಬಸವೋತ್ಸವ’ ಎಂಬಂತಾಗಿದೆ ಎಂದು ಕಲಾವಿದ ಕೆ.ಗಂಗಾಧರ ತಿಳಿಸಿದರು.

ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣ, ಐಕ್ಯಸ್ಥಳ ಕೂಡಲಸಂಗಮದ ಅಭಿವೃದ್ಧಿಗೆ ಆದ್ಯತೆ ನೀಡಿದಷ್ಟು ಬಸವಣ್ಣನವರ ಜನ್ಮಸ್ಥಳಕ್ಕೆ ನೀಡಿಲ್ಲ ಎಂಬ ಅಸಮಾಧಾನ ಬಸವ ಭಕ್ತರದ್ದು.

ಪ್ರವಾಸಿಗರ ಆಕರ್ಷಣೆಯ ತಾಣವಾಗಲಿ

ನಿವೃತ್ತ ಐಎಎಸ್‌ ಅಧಿಕಾರಿ ಡಾ.ಎಸ್‌.ಎಂ.ಜಾಮದಾರ ಇಚ್ಚಾಶಕ್ತಿಯಿಂದ ಪಟ್ಟಣದಲ್ಲಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ಬಸವಜನ್ಮ ಸ್ಮಾರಕ, ₹ 5 ಕೋಟಿ ವೆಚ್ಚದಲ್ಲಿ ಮೂಲ ನಂದೀಶ್ವರ ದೇವಸ್ಥಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರಗೊಳಿಸಲಾಗಿದೆ. ನಂತರದಲ್ಲಿ ಪ್ರವಾಸಿಗರಿಗಾಗಿ ಒಂದು ಯಾತ್ರಿ ನಿವಾಸ ನಿರ್ಮಾಣ ಮಾಡಿರುವುದನ್ನು ಬಿಟ್ಟರೇ, ಬಸವ ಜನ್ಮಭೂಮಿಗೆ ಅಷ್ಟಾಗಿ ಆದ್ಯತೆ ಸಿಕ್ಕಿಲ್ಲ.

ಬಸವ ಜನ್ಮ ಸ್ಥಳವನ್ನು ಪ್ರವಾಸಿಗರ ಆಕರ್ಷಣೆಯ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾದ ಅಗತ್ಯತೆ ಇದೆ. ಬಸವ ಜನ್ಮ ಸ್ಮಾರಕದ ಸಮೀಪದಲ್ಲಿಯೇ ಬಸವಣ್ಣನವರ ಪರಿಪೂರ್ಣ ಜೀವನ ಸಂದೇಶ ತಿಳಿಸುವಂತಹ ಕಲಾ ಗ್ಯಾಲರಿ ನಿರ್ಮಾಣವಾಗಬೇಕಿದೆ ಎನ್ನುತ್ತಾರೆ ಬಸವಾಭಿಮಾನಿ ಮುರಗೇಶ ಸಂಗಮ.

ಸಂಶೋಧಕ ದಿ.ಎಂ.ಎಂ.ಕಲಬುರ್ಗಿ ಸೇರಿದಂತೆ ಇತರ ಸಂಶೋಧಕರ ಮಾರ್ಗದರ್ಶನದಲ್ಲಿ 1999ರಲ್ಲಿ ಮೂಲ ನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವಣ್ಣನವರ ಜೀವನ ಸಂದೇಶಗಳನ್ನು ಸಾರುವ ಕಲಾಕೃತಿಗಳ ನಿರಂತರ ಪ್ರದರ್ಶನದ ವ್ಯವಸ್ಥೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು.

ಕಲಾವಿದ ಕೆ.ಗಂಗಾಧರ ಮೂರು ವರ್ಷ ಶ್ರಮಿಸಿ 36 ಕಲಾಕೃತಿಗಳನ್ನು ರಚಿಸಿದ್ದರು. ಇವುಗಳನ್ನು ಕೇಂದ್ರ ಸರ್ಕಾರ ನವದೆಹಲಿಯ ಸಂಸತ್‌ ಭವನದಲ್ಲಿ ಪ್ರದರ್ಶಿಸಿತ್ತು. ಇಂತಹ ಅಮೂಲ್ಯ ಕಲಾಕೃತಿಗಳು ದೇವಸ್ಥಾನದ ಆವರಣದಲ್ಲಿ ಕಾಣುತ್ತಿಲ್ಲ. ಅವುಗಳನ್ನು ಬಸವಜನ್ಮ ಸ್ಮಾರಕದ ಸಭಾಭವನದಲ್ಲಿ ಪ್ರದರ್ಶಿಸಬೇಕು ಎಂಬ ಅಭಿಪ್ರಾಯ ಬಸವ ಭಕ್ತರದ್ದು.

**

ರಾಜ್ಯ ಸರ್ಕಾರ ಬಸವ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಪ್ರತಿ ವರ್ಷ ಬಸವೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಬಸವ ಭಕ್ತರ ಬೇಡಿಕೆ ಈಡೇರಿಸಬೇಕಿದೆ – ಸಿದ್ದಲಿಂಗ ಸ್ವಾಮೀಜಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT