‘ಅಂಕ ಗಳಿಕೆ ವಿದ್ಯಾರ್ಥಿಗಳ ಮುಖ್ಯ ಗುರಿಯಲ್ಲ’

7
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಬಿ.ಎಸ್‌.ಮಂಜುನಾಥ ಸ್ವಾಮಿ ಅಭಿಮತ

‘ಅಂಕ ಗಳಿಕೆ ವಿದ್ಯಾರ್ಥಿಗಳ ಮುಖ್ಯ ಗುರಿಯಲ್ಲ’

Published:
Updated:

ಯಾದಗಿರಿ:‘ವಿದ್ಯಾರ್ಥಿಗಳು ನಿಷ್ಠೆಯಿಂದ ಅಧ್ಯಯನ ಮಾಡುವುದರ ಜತೆಗೆ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಬಿ.ಎಸ್‌.ಮಂಜುನಾಥ ಸ್ವಾಮಿ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಎಲ್ಲ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ರಂಗಗಳಲ್ಲಿಯೂ ತೀವ್ರವಾದ ಪೈಪೋಟಿ ಇದೆ. ಅದಕ್ಕೆ ತಕ್ಕಂತೆ ಸಿದ್ಧರಾಗಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ಬಹಳ ಶ್ರಮ ವಹಿಸಿ ಇಟ್ಟುಕೊಂಡ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗಬೇಕು. ಅಂಕ ಗಳಿಕೆ ಒಂದೇ ವಿದ್ಯಾರ್ಥಿಗಳ ಮುಖ್ಯ ಗುರಿಯಲ್ಲ. ಉತ್ತಮ ಚಾರಿತ್ರ್ಯವಂತರಾಗಬೇಕು’ ಎಂದರು.

ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಅನಸೂಯಾ ಪಾಟೀಲ್ ಮಾತನಾಡಿ,‘ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನವನ್ನು ಹೆಚ್ಚು ಮಾಡಬೇಕು. ಸಾಹಿತ್ಯದ ಓದಿನಿಂದ ಮನಸ್ಸು ಅರಳುವುದರ ಜತೆಗೆ ಒಳ್ಳೆಯ ವಿಚಾರಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಒಳ್ಳೆಯ ನಡೆ ನುಡಿಯನ್ನು ರೂಢಿಸಿಕೊಂಡು ಸಂಸ್ಕಾರವಂತರಾಗಬೇಕು. ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕರಾಗಿ ಬೆಳೆದಾಗ ಮಾತ್ರ ಶಿಕ್ಷಣ ಪಡೆದುದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ, ‘ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಮೂಲ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರದಿಂದ ಅನೇಕ ಶೈಕ್ಷಣಿಕ ಸವಲತ್ತುಗಳು ಕೂಡ ಲಭ್ಯವಾಗುತ್ತಿವೆ. ಅವೆಲ್ಲವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣವನ್ನು ಪಡೆದು ದೇಶದ ಭವಿಷ್ಯಕ್ಕೆ ತಮ್ಮ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಅಶೋಕ ವಾಟ್ಕರ್, ಬಿ.ಆರ್.ಕೇತನಕರ್, ಡಾ.ಬುದ್ಧಪ್ಪ ಸಿಂಗೆ, ಚನ್ನಬಸ್ಸಪ್ಪ ಓಡ್ಕರ್, ಪ್ರಹ್ಲಾದ್ ಜೋಶಿ, ಉಮೇಶ, ಜಟ್ಟೆಪ್ಪ, ಪಂಪಾಪತಿ ಪಾಟೀಲ್, ಡಾ.ದೇವೀಂದ್ರಪ್ಪ ಹಳಿಮನಿ, ಶರಣಬಸ್ಸಪ್ ರಾಯಕೋಟಿ, ಶಹನಾಜ್ ಬೇಗಂ ಇದ್ದರು.

ಸಾಂಸ್ಕೃತಿಕ ಸಲಹೆಗಾರ ರಾಘವೇಂದ್ರ ಬಂಡಿಮನಿ ಸ್ವಾಗತಿಸಿದರು. ಕ್ರೀಡಾ ಸಲಹೆಗಾರ ಡಾ.ಅಶೋಕರಡ್ಡಿ ಪಾಟೀಲ್ ವಂದಿಸಿದರು.

**

ವಿದ್ಯಾರ್ಥಿ ಬದುಕಿನ ಹಂತ ಪ್ರತಿಯೊಬ್ಬರ ಬದುಕಿನಲ್ಲೂ ಸ್ಮರಣೀಯವಾದುದು. ಈ ಹಂತದಲ್ಲಿ ಸ್ಥಿತಪ್ರಜ್ಞರಾದರೆ ಭವಿಷ್ಯ ಉಜ್ವಲವಾಗಲಿದೆ – ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry