ಸೋಮವಾರ, ಡಿಸೆಂಬರ್ 16, 2019
17 °C

ಪತ್ರಕರ್ತೆಯ ಕೆನ್ನೆಗೆ ತಟ್ಟಿ; ಬಳಿಕ ಕ್ಷಮೆಯಾಚಿಸಿದ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪತ್ರಕರ್ತೆಯ ಕೆನ್ನೆಗೆ ತಟ್ಟಿ; ಬಳಿಕ ಕ್ಷಮೆಯಾಚಿಸಿದ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌

ಚೆನ್ನೈ: ಪತ್ರಿಕಾಗೋಷ್ಠಿಯೊಂದರಲ್ಲಿ ಪತ್ರಕರ್ತೆಯ ಗಲ್ಲ ತಟ್ಟಿದ್ದ ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರು ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಅವರು ಮಂಗಳವಾರ ಕೆನ್ನೆ ತಟ್ಟಿದ ವಿಷಯ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ತಮ್ಮ ಕೆನ್ನೆ ತಟ್ಟಿದ ಚಿತ್ರವನ್ನು ದಿ ವೀಕ್‌ ಮಾಧ್ಯಮದ ವಿಶೇಷ ವರದಿಗಾರ್ತಿ ಲಕ್ಷ್ಮಿ ಸುಬ್ರಮಣಿಯನ್‌ ಟ್ವಿಟರ್‌ನಲ್ಲಿ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ರಾಜಭವನದ ಲೆಟರ್‌ಹೆಡ್‌ನಲ್ಲಿಯೇ ರಾಜ್ಯಪಾಲರು ಕ್ಷಮೆಯಾಚಿಸಿದ್ದಾರೆ.

‘ನಿಮ್ಮನ್ನು ನನ್ನ ಮೊಮ್ಮಗಳು ಎಂದು ಭಾವಿಸಿ ಗಲ್ಲ ತಟ್ಟಿದೆ. ಪತ್ರಕರ್ತೆಯಾಗಿರುವ ನಿಮ್ಮ ವೃತ್ತಿಪರತೆಗೆ ಮೆಚ್ಚುಗೆ ಸೂಚಿಸಲು ಪ್ರೀತಿಪೂರ್ವಕವಾಗಿ ಹಾಗೆ ಮಾಡಿದೆ. ನಾನೂ ಸಹ ಪತ್ರಿಕಾರಂಗದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದೇನೆ’ ಎಂದು ಕ್ಷಮಾಪಣಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕ್ಷಮಾಪಣಾ ಪತ್ರವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಲಕ್ಷ್ಮಿ ಅವರು, ‘ಕ್ಷಮಾಪಣೆಯನ್ನು ಸ್ವೀಕರಿಸುತ್ತೇನೆ. ಆದರೆ ನಾನು ಕೇಳಿದ ಪ್ರಶ್ನೆಗೆ ನೀವು ತೋರಿದ ರೀತಿಗೆ ಅಸಾಮಾಧನವಿದೆ’ ಎಂಬುದನ್ನು ಬರೆದುಕೊಂಡಿದ್ದಾರೆ.

ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಲೈಂಗಿಕ ಸಹಕಾರ ನೀಡಲು ವಿದ್ಯಾರ್ಥಿನಿಯರನ್ನು ಒತ್ತಾಯಿಸಿ ವಿರುಧುನಗರದ ಪ್ರಾಧ್ಯಾಪಕಿಯೊಬ್ಬರು ಬಂಧಿತರಾಗಿದ್ದಾರೆ. ಆ ಪ್ರಾಧ್ಯಾಪಕಿ ರಾಜ್ಯಪಾಲರಿಗೆ ಹತ್ತಿರದವರು ಎಂಬ ಆರೋಪ ಕೇಳಿ ಬಂದಿತ್ತು. ಆ ಕುರಿತು ರಾಜ್ಯಪಾಲರಿಂದ ಪ್ರತಿಕ್ರಿಯೆ ಪಡೆಯಲು ಲಕ್ಷ್ಮಿ ಅವರು ಪ್ರಶ್ನೆಯೊಂದನ್ನು ಕೇಳಿದ್ದರು.‘ಆರೋಪಗಳು ಆಧಾರರಹಿತ’ ಎಂದು ರಾಜ್ಯಪಾಲರು ಉತ್ತರಿಸಿದ್ದರು. ಪತ್ರಿಕಾಗೋಷ್ಠಿ ಮುಗಿಸುವ ಸಂದರ್ಭದಲ್ಲಿ ಬನ್ವರಿಲಾಲ್‌ ಅವರು ಲಕ್ಷ್ಮಿ ಅವರ ಕೆನ್ನೆಗೆ ತಟ್ಟಿದ್ದರು.

ಪ್ರತಿಕ್ರಿಯಿಸಿ (+)