7

ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

Published:
Updated:
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

ಹ ಗ್ಗದ ಮಂಚದ ಮೇಲೆ ರಾಜರ ಕಾಲದ ವೈಭವವನ್ನು ನೆನಪಿಸುವ ಪೋಷಾಕುಗಳು, ಮಂಚದ ಮಧ್ಯದಲ್ಲಿನ ಮಣೆಯನ್ನು ಶೃಂಗರಿಸಿರುವ ಪಂಜಾಬಿ ಸಾಂಪ್ರದಾಯಿಕ ಶೈಲಿಯ ಸಾಂಬಾರ ಈರುಳ್ಳಿ ಉಪ್ಪಿನಕಾಯಿ, ಮಾವಿನಕಾಯಿ ಚಟ್ನಿ, ಬೆಲ್ಲ, ದನಿಯಾ. ಪಕ್ಕದಲ್ಲಿಯೇ ಎಳನೀರು, ಮಣ್ಣಿನ ಮಡಿಕೆ, ನೀರಿನ ಮಗ್ಗುಗಳು ಕೃತಕವೆನಿಸಿದರೂ, ಸ್ಟಾರ್‌ ಹೋಟೆಲ್‌ ಒಳಗೊಂದು ಪಂಜಾಬಿ ಗ್ರಾಮ ಸೃಷ್ಟಿಯಾದಂತೆ ಇತ್ತು.

ಪಂಜಾಬಿನ ಸಾಂಪ್ರದಾಯಿಕ ಸುಗ್ಗಿ ಹಬ್ಬ ‌‘ಬೈಸಾಖಿ’ಯನ್ನು ಹೆಬ್ಬಾಳದ ಹೋವರ್ಡ್‌ ಜಾನ್ಸನ್ ಹೋಟೆಲ್‌ ‘ಈಟ್‌ ಓಕೆ ಪ್ಲೀಸ್‌’ ಆಹಾರ ಮೇಳವಾಗಿ ಆಚರಿಸುತ್ತಿದೆ. ಈ ಮೇಳ 20ರವರೆಗೆ ನಡೆಯಲಿದೆ.

ಪಂಜಾಬಿ ಆಹಾರವೆಂದರೆ ಅಲ್ಲಿ ತುಪ್ಪದ ಘಮ ತುಸು ಜಾಸ್ತಿಯೇ. ಜೊತೆಗೆ ಸಾಸಿವೆ ಎಣ್ಣೆಯ ಸ್ವಾದವೂ ಬೆರೆತರೆ? ನಾಲಿಗೆಯ ರುಚಿಮೊಗ್ಗುಗಳು ಅನಾಯಾಸವಾಗಿ ಅರಳುತ್ತವೆ. ಎಳನೀರಿನೊಂದಿಗೆ ಆರಂಭವಾಗುವ ಊಟ ಐಸ್‌ಕ್ರಿಂನೊಂದಿಗೆ ಮುಗಿಯುತ್ತದೆ. ಹೊಸ ಸ್ವಾದ ಸವಿದ ಸುಖ ನಾಲಿಗೆ ಮತ್ತು ಮನಸ್ಸನ್ನು ಆವರಿಸಿರುತ್ತದೆ.

ಪನ್ನೀರ್ ಸಾಗವಾಲ

ಎಳನೀರು ಕುಡಿದು ಆಸೀನರಾಗುತ್ತಿದ್ದಂತೆ ನಗುಮೊಗದ ಬೇರರ್‌ಗಳು ತಂದಿಟ್ಟ ಪೇರಳೆ ಹಣ್ಣಿನ ಲಸ್ಸಿ ಬಾಯಿಗಿಟ್ಟೆ. ಹುಳಿ ಮಿಶ್ರಿತ ಸಿಹಿಯ ಅನುಭವವಾಯಿತು. ಮಧ್ಯದಲ್ಲಿ ಸಿಗುವ ಸೀಬೆಹಣ್ಣಿನ ಬೀಜಗಳು ರುಚಿಯನ್ನು ಹೆಚ್ಚಿಸುತ್ತಿತ್ತು. ಲಸ್ಸಿ ಕುಡಿಯುವ ಮುನ್ನವೇ ಚನ್ನಾ ಮಸಾಲದೊಂದಿಗೆ ತಯಾರಾಗಿ ಬಂದ ಪಾವ್‌ನ್ನು ಕೊತ್ತಂಬರಿ ಸೊಪ್ಪು ಜಾಸ್ತಿಯಾಗಿಯೇ ಅಲಂಕರಿಸಿತ್ತು. ಉಪ್ಪು, ಖಾರದ ಹದಮಿಳಿತದೊಂದಿಗೆ ಮೃದುವಾಗಿದ್ದ ಪನ್ನೀರು, ಸ್ಪಲ್ಪವೇ ಹುರಿದ ಈರುಳ್ಳಿ ಹಾಗೂ ಕ್ಯಾಪ್ಸಿಕಂ ಟಿಕ್ಕಾವನ್ನು ಪುದಿನಾ ರಾಯತದಲ್ಲಿ ಮುಳುಗಿಸಿ ಬಾಯಿಗಿಟ್ಟರೆ ಬೇರೊಂದು ಸ್ವಾದದ ಅನುಭವವಾಗುತ್ತಿತ್ತು.

ಗೋದಿಯ ಗರಿಗರಿ ತಂದೂರಿ ರೋಟಿಯೊಂದಿಗೆ ಬಿಸಿಬಿಸಿಯಾಗಿದ್ದ ‘ಪನ್ನೀರ್ ಸಾಗವಾಲ’ದಲ್ಲಿ ಪಾಲಕ್ ಸೊಪ್ಪಿನೊಂದಿಗೆ ಬೆಣ್ಣೆಯ ಸ್ವಾದ ಮಿಳಿತವಾಗಿತ್ತು. ಬಿಳಿ ಬಣ್ಣದ ಬೌಲ್‌ನಲ್ಲಿ ತುಂಬಿ ತಂದ ‘ದನಿಯಾ ಮಿರ್ಚಿ ಡಾ ಕುಕ್ಕಡ್‌’ ಚಿಕನ್ ಡ್ರಮ್‌ಸ್ಟಿಕ್‌ನಲ್ಲಿ ದನಿಯಾದ ಘಮವಿತ್ತು. ಮೃದುವಾಗಿದ್ದ ಚಿಕನ್‌ಗೆ ತುಪ್ಪದ ಅಲಂಕಾರ.

‘ಪನ್ನೀರ್ ಸಾಗವಾಲ’

‘ದಿಂಗ್ರಿ ಕೋರ್ಮಾ’ ಅಣಬೆಯ ವಿಶಿಷ್ಟ ಖಾದ್ಯ. ಎಣ್ಣೆಯಲ್ಲಿ ಕರಿದ ಅಣಬೆಗೆ ಮೊಸರು ಮತ್ತು ಗೋಡಂಬಿ ಪೇಸ್ಟ್‌ ಸೇರಿಸಿದ್ದರು. ಮೊಸರಿನ ಹುಳಿ, ಗೋಡಂಬಿಯ ಸಿಹಿ, ಜೊತೆಗೆ ಪಂಜಾಬಿ ಸಾಂಪ್ರದಾಯಿಕ ಮಸಾಲೆಗಳ ಮಿಶ್ರಣ ಮಿಳಿತವಾಗಿತ್ತು. ಬಹಳ ಅಪರೂಪದ ಕಾಂಬಿನೇಷನ್‌ ಎನ್ನುವ ಅಲೂಗಡ್ಡೆ ಮತ್ತು ಬೆಂಡೆಕಾಯಿ ಮಿಶ್ರಣ ಹೊಸಬಗೆಯ ರುಚಿ ಎನಿಸಿತ್ತು. ಅಲೂಗಡ್ಡೆಯನ್ನು ಎಣ್ಣೆಯಲ್ಲಿ ಶ್ಯಾಲೋ ಫ್ರೈ ಮಾಡಿ, ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿದು ಒಣಮೆಣಸಿನ ಪುಡಿ, ಉಪ್ಪು ಬೆರೆಸಲಾಗಿತ್ತು.

‘ದಿಂಗ್ರಿ ಕೋರ್ಮಾ’

ತಂದೂರಿ ಗುಚ್ಚಿ, ದಾಲ್‌ ಅಮೃತ್‌ಚರಿ, ಖರೋದೆ ಕಾ ಶೋರ್ಬಾ, ಸರ್ಸೋನ್‌ ದಾ ಸಾಗ್‌, ಬಹುರಂಗಿ ಬಿರಿಯಾನಿ, ರಾರ್‌ ಹ್ಯಾ ಮೀಟ್‌ ಸೇರಿದಂತೆ ವಿಭಿನ್ನ ಹೆಸರಿನ ವಿವಿಧ ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳು ಮೇಳದಲ್ಲಿವೆ.ಕ್ಯಾರೇಟ್‌ ಪಡ್ಡಿಂಗ್‌, ಬ್ರೌನಿ, ಗೋಲಿ ಜಾಮೂನ್‌, ರಸಮಲೈ ಸೇರಿದಂತೆ ಹಾಲು, ತುಪ್ಪಗಳಿಂದ ತಯಾರಾದ ಬಗೆಬೆಗೆ ಸಿಹಿಖಾದ್ಯಗಳು, ಐಸ್‌ಕ್ರೀಂಗಳಿವೆ. ಬಗೆಬಗೆಯ ಸೂಪ್‌ಗಳು, ಹಣ್ಣುಗಳಿಗೂ ಕೊರತೆಯಿಲ್ಲ. ಕ್ಯಾರೆಟ್‌ ಪಡ್ಡಿಂಗ್ ಅಂತೂ ಕ್ಯಾರೆಟ್‌ ಬಳಸಿದ್ದಾರೆ ಎಂಬ ಯಾವ ಕುರುಹುಗಳಿಲ್ಲದಂತ ಅದ್ಬುತ ರುಚಿಯ ಆಗರದಂತಿತ್ತು. ಮನೆಯಲ್ಲಿ ತಯಾರಾದ ಗಿಣ್ಣದ ರುಚಿಯನ್ನು ನಾಚಿಸುವಷ್ಟು ಮೃದುವಾಗಿದ್ದ ಪಡ್ಡಿಂಗ್‌ ಎಷ್ಟು ತಿಂದರೂ ಸಾಕು ಎನಿಸುತ್ತಿರಲಿಲ್ಲ.

ಧನಿಯಾ ಮಿರ್ಚಿ ದಾ ಕುಕ್ಕಡ್‌

ಗೋಲಿ ಜಾಮೂನ್‌, ನೋಡಲು ಜಾಮೂನಿನದೇ ಬಣ್ಣ, ಆಕಾರವಿದ್ದರೂ ಭಿನ್ನ ರುಚಿಯಿತ್ತು. ಬಾಯಿಗಿಡುತ್ತಿದ್ದಂತೆ ಕರಗಿ ಲಾಲಾರಸದೊಂದಿಗೆ ನೀರಾಗುತ್ತಿದ್ದ ಪುಟ್ಟ, ಪುಟ್ಟ ಗೋಲಿ ಜಾಮೂನ್‌ಗಳನ್ನು ಎಷ್ಟು ತಿನ್ನುತ್ತಿದ್ದೇವೆ ಎಂಬುದನ್ನು ಲೆಕ್ಕವಿಡುವುದೇ ಅಸಾಧ್ಯ. ಇಂಗ್ಲಿಷ್‌ ಸಂಗೀತದ ಗುನುಗುವಿಕೆಯ ನಡುವೆಯೂ ಪಂಜಾಬಿ ಆಹಾರದ ಸ್ವಾದ ಸಾಂಪ್ರದಾಯಿಕ ಆಹಾರ ಸವಿದ ತೃಪ್ತಿ ನೀಡುತ್ತಿತ್ತು.

ಪಂಜಾಬಿ ಆಹಾರ ಮೇಳ

ಹೋಟೆಲ್‌– ಹೋವರ್ಡ್‌ ಜಾನ್ಸನ್‌, ಥಣಿಸಂದ್ರ ಮುಖ್ಯರಸ್ತೆ, ನಾಗವಾರ ಜಂಕ್ಷನ್‌, ಹೆಬ್ಬಾಳ

ಸಮಯ–ಮಧ್ಯಾಹ್ನ 12 ರಿಂದ 3, ಸಂಜೆ 7.30 ರಿಂದ 10

ಖಾದ್ಯ– ಧನಿಯಾ ಮಿರ್ಚಿ ದಾ ಕುಕ್ಕಡ್‌, ತಂದೂರಿ ಗುಚ್ಚಿ

ಒಬ್ಬರಿಗೆ– ₹450

ಕಾಯ್ದಿರಿಸಲು– ಮೊ 70228 95036

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry