ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ತಿಂಡಿ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಓಡುಪಾಳೆ

ಓಡುಪಾಳೆಯು ‘ಆಪಂ’ನಂತೆಯೇ ಇರುತ್ತದೆ. ಆದರೆ ಆಪಂನಷ್ಟು ಮೃದುವಾಗಿರುವುದಿಲ್ಲ. ಇದನ್ನು ಸೌದೆ ಒಲೆಯ ಮೇಲೆ ಮಣ್ಣಿನ ಕಾವಲಿಯಲ್ಲಿ (ಓಡು ಎಂದೇ ಜನಪ್ರಿಯ) ಮಾಡುತ್ತಿದ್ದರು. ಓಡುಪಾಲೆ ಬೇಯುವಾಗ ಮನೆಯೆಲ್ಲಾ ಅದರ ಘಮ ತುಂಬುತ್ತಿತ್ತು. ರುಚಿಯೂ ಅದ್ಭುತ. ಆದರೆ ಈಗ ಮಣ್ಣಿನ ಕಾವಲಿಯಾಗಲಿ, ಸೌದೆ ಒಲೆಯಾಗಲಿ ಇಲ್ಲ. ಆದರೆ ನಗರದಲ್ಲಿ ಸಿಗುವ ಕಡಾಯಿ, ರೊಟ್ಟಿ ತವಾದಲ್ಲಿಯೂ ಇದನ್ನು ಮಾಡಬಹುದು.

ಬೇಕಾಗುವ ವಸ್ತುಗಳು: ಒಂದೂವರೆ ಕಪ್ ಬೆಳ್ತಿಗೆ ಅಕ್ಕಿ, ಮುಕ್ಕಾಲು ಕಪ್ ಕುಚ್ಚಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ತುಪ್ಪ.

ವಿಧಾನ: ಅಕ್ಕಿಯನ್ನು ನೆನೆಹಾಕಿ ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿ, ಉಪ್ಪು ಹಾಕಿ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಇರಲಿ. ಒಲೆಯ ಮೇಲೆ ಮಣ್ಣಿನ ಕಾವಲಿ ಅಥವಾ ಓಡು ಇಟ್ಟು ಎಣ್ಣೆ ಹಚ್ಚಿ. ಬಿಸಿಯಾದಾಗ ಒಂದು ಸೌಟು ಹಿಟ್ಟನ್ನು ಹುಯ್ದು ಮುಚ್ಚಿಡಿ. ಬೆಂದ ನಂತರ ತೆಗೆದು ತೆಂಗಿನ ಚಟ್ನಿಯೊಂದಿಗೆ ತಿನ್ನಿ. ಇದನ್ನು ಸಣ್ಣ ಉರಿಯಲ್ಲಿ ಬೇಯಿಸಬೇಕು. ತೆಂಗಿನ ಹಾಲಿಗೆ ಬೆಲ್ಲ ಹಾಕಿ ಕರಗಿಸಿ ಬಿಸಿ ಓಡುಪೋಳೆಯನ್ನು ಹಾಕಿ. ಅರ್ಧ ಗಂಟೆಯ ನಂತರ ತಿಂದರೆ ತುಂಬ ರುಚಿಯಾಗಿರುತ್ತದೆ.

ಓಡುಪಾಳೆ

**

ಬಾಣಲೆ ದೋಸೆ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಕುಚ್ಚಲಕ್ಕಿ, 1 ಕಪ್ ತೆಂಗಿನ ತುರಿ, 2 ಈರುಳ್ಳಿ, 2 ಹಸಿಮೆಣಸು, 1 ತುಂಡು ಹಸಿ ಶುಂಠಿ, 1 ಕಂತೆ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಕಪ್‌ ತುಪ್ಪ.

ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 1ರಿಂದ 2 ಗಂಟೆ ನೆನೆಸಿ ನಂತರ ತೆಂಗಿನ ತುರಿ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಹಸಿಮೆಣಸು, ಶುಂಠಿ, ಕರಿಬೇವು, ಈರುಳ್ಳಿ ಹೆಚ್ಚಿ ಹಾಕಿ ಸ್ವಲ್ಪ ತಿರುವಿ, ಇಡ್ಲಿ ಹಿಟ್ಟಿನ ಹದಕ್ಕೆ ದಪ್ಪ ಮಾಡಿ ತೆಗೆಯಿರಿ. ನಂತರ ಬಾಣಲೆ ಇಟ್ಟು ತುಪ್ಪ ಹಚ್ಚಿ ಕಾದ ಬಾಣಲೆಗೆ 1 ಸೌಟು ಹಿಟ್ಟು ಹಾಕಿ ಮುಚ್ಚಿಟ್ಟು ಬೆಂದ ನಂತರ 1 ಚಮಚ ತುಪ್ಪ ಹಾಕಿ ಮಗುಚಿ ಹಾಕಿ ಸ್ವಲ್ಪ ಹೊತ್ತಿನಲ್ಲಿ ತೆಗೆಯಿರಿ. ಬಿಸಿಯಿರುವಾಗಲೇ ತಿಂದರೆ ಬಹಳ ರುಚಿ.

ಬಾಣಲೆ ದೋಸೆ

**

ಮಜ್ಜಿಗೆ ದೋಸೆ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಕುಚ್ಚಲಕ್ಕಿ, 1 ಹಿಡಿ ಉದ್ದಿನಬೇಳೆ, ಸಣ್ಣ ತುಂಡು ಬೆಲ್ಲ, 1 ಕಪ್ ಸಿಹಿಯಾದ ದಪ್ಪ ಮಜ್ಜಿಗೆ, 1 ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಅಕ್ಕಿ, ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆ ನೆನೆಸಿ, ನಂತರ ತೊಳೆದು, ಬೆಲ್ಲ, ಒಣಮೆಣಸು, ಉಪ್ಪು ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ ಮಾರನೆ ದಿನ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ಒಲೆಯ ಮೇಲಿಟ್ಟ ಕಾವಲಿ ಬಿಸಿಯಾದಾಗ ಸ್ವಲ್ಪ ತುಪ್ಪ ಹಚ್ಚಿ ದೋಸೆ ಹುಯ್ದು ಮುಚ್ಚಿಡಿ. ಸ್ವಲ್ಪ ಹೊತ್ತಿನಲ್ಲಿ ತಿರುವಿ ಹಾಕಿ ಹಳದಿ ಬಣ್ಣಕ್ಕೆ ಬರುವಾಗ ತೆಗೆಯಿರಿ. ಇದನ್ನು ಈರುಳ್ಳಿ ಚಟ್ನಿಯೊಂದಿಗೆ ಬಿಸಿ ಬಿಸಿ ತಿನ್ನಿ. ಬೆಳಗಿನ ಉಪಾಹಾರಕ್ಕೆ ತುಂಬಾ ರುಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT