ಭಾನುವಾರ, ಡಿಸೆಂಬರ್ 15, 2019
23 °C

ಹೊಸರುಚಿ ಆಸ್ವಾದಿಸಲು ಸದಾ ರೆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸರುಚಿ ಆಸ್ವಾದಿಸಲು ಸದಾ ರೆಡಿ

ನನಗೆ ಅಡುಗೆ ಅಂದ್ರೆ ಒತ್ತಡ ನಿವಾರಣೆ ಮಾರ್ಗ. ಬಿಡುವಿದ್ದಾಗ, ಜೋರು ಹಸಿವಾದಾಗ ನಾನು ಅಡುಗೆ ಮನೆಗೆ ಹೋಗಿ ಏನಾದರೂ ಹೊಸ ರುಚಿಯಾದ್ದು ಮಾಡಿಕೊಂಡು ತಿನ್ನುತ್ತಿರುತ್ತೇನೆ.

ನಾನು ಮಾಡಿದ ಮೊದಲ ಅಡುಗೆ ಅಂದರೆ ಟೀ. ನಾನು ಸಣ್ಣವಳಿರುವಾಗಲೇ ನನ್ನಜ್ಜಿ ಟೀ ಕುಡಿಯುವಾಗ ಒಂದು ಕಪ್‌ನಲ್ಲಿ ಸ್ವಲ್ಪ ನಂಗೂ ಕೋಡೋರು. ಹಾಲು, ಏಲಕ್ಕಿ ಹಾಕಿದ ರುಚಿಯಾದ ಟೀ ಅದು. ಬರಬರುತ್ತಾ ಟೀಗೆ ನಾನು ಅಡಿಕ್ಟ್‌ ಆದೆ. ಈಗ ಮಧ್ಯರಾತ್ರಿ ಎಬ್ಬಿಸಿ ಟೀ ಕುಡಿತೀಯಾ ಅಂತ ಕೇಳಿದ್ರೂ ನಾನು ಖುಷಿಯಿಂದ ಕುಡಿಯುತ್ತೇನೆ. ಹಾಗೇ ದಪ್ಪ ಹಾಲು ಸಿಕ್ಕರೆ ಚೆನ್ನಾಗಿ ಟೀ ಮಾಡುತ್ತೀನಿ. ಕಾಲೇಜಿಗೆ ಹೋಗುವಾಗ ನನಗೆ ಮ್ಯಾಗಿ ಕ್ರೇಜ್‌. ಅಂಗಡಿಯಿಂದ ಮ್ಯಾಗಿ ಪ್ಯಾಕೆಟ್‌ ತಗೊಂಡು ಬಂದು ಅದಕ್ಕೆ ತರಕಾರಿ ಬೇಯಿಸಿ ಹಾಕಿ ಬಗೆಬಗೆಯಲ್ಲಿ ಮ್ಯಾಗಿ ಮಾಡಿಕೊಂಡು ತಿನ್ನುತ್ತಿದ್ದೆ. ಕ್ರಮೇಣ ಬೇರೆ ಅಡುಗೆಗಳನ್ನು ಕಲಿತುಕೊಂಡೆ. ಉತ್ತರ ಕರ್ನಾಟಕದಲ್ಲಿ ರೊಟ್ಟಿ, ಕಾಳುಪಲ್ಯ ಫೇಮಸ್‌. ನಂಗೆ ರೊಟ್ಟಿ ತಟ್ಟೋಕೆ ಅಷ್ಟು ಚೆನ್ನಾಗಿ ಬರಲ್ಲ. ಆದ್ರೆ ಕಾಳು ಪಲ್ಯಗಳನ್ನು ಚೆನ್ನಾಗಿ ಮಾಡ್ತೀನಿ.

ನಾನು ಅಡುಗೆ ಎಲ್ಲಾ ಕಲಿತಿದ್ದು ಮರಾಠಿ ಶೈಲಿಯಲ್ಲಿ. ನನ್ನ ಸ್ನೇಹಿತರಲ್ಲಿ ಮಾರ್ವಾಡಿಗಳೇ ಜಾಸ್ತಿ. ಹಾಗಾಗಿ ಅವರ ಮನೆಗೆ ಹೋಗಿ ಅಡುಗೆ ಮಾಡಿ, ನೋಡಿ ಅವರ ಶೈಲಿಯನ್ನೇ ಕಲಿತಿದ್ದೇನೆ. ನಾನು ಮಾಡುವ ಪುಲ್ಕಾ, ಸಬ್ಜಿ ಎಲ್ಲರಿಗೂ ಇಷ್ಟ. ಇದರಲ್ಲಿ ಕೆಲ ಸಾಮಗ್ರಿಗಳು ಅದಲುಬದಲು ಮಾಡಿ ಕೆಲ ಹೊಸ ರುಚಿ ಪ್ರಯೋಗ ಆಗಾಗ ನಮ್ಮನೆಯಲ್ಲಿ ಇದ್ದಿದ್ದೆ.

ನಾನು ಶುದ್ಧ ಸಸ್ಯಾಹಾರಿ. ಮೊಟ್ಟೆಯನ್ನೂ ಕೈಯಲ್ಲಿ ಮುಟ್ಟಲ್ಲ. ನನಗೆ ಜಂಕ್‌ಫುಡ್‌ ಅಂದ್ರೆ ಇಷ್ಟ. ಬೇಸಿಗೆ, ಚಳಿಗಾಲ ಅಥವಾ ಮಳೆಗಾಲ ಯಾವುದೇ ಆಗಿರಲಿ ಸಂಜೆ ಸಿನಿಮಾ ನೋಡುತ್ತಾ ಅಥವಾ ಟಿ.ವಿಯಲ್ಲಿ ಕ್ರಿಕೆಟ್‌ ನೋಡುತ್ತಾ ಗಿರಮಿಟ್ಟೆ, ಮಿರ್ಚಿ, ಟೀ ಕುಡಿಯಲು ನನಗೆ ಭಾರಿ ಇಷ್ಟ. ಮಿರ್ಚಿ ಇದ್ಯಲ್ಲಾ ಅದು ಬ್ಯಾಡಗಿ ಮೆಣಸಿನಕಾಯಿಯಿಂದಲೇ ಮಾಡಿರಬೇಕು. ಅದರ ರುಚಿಯೇ ಬೇರೆ. ಅಮ್ಮ ಆಗಾಗ ಮಾಡುತ್ತಿರುತ್ತಾರೆ.

ಉತ್ತರ ಕರ್ನಾಟಕದ ಕಡೆ ಎಳೆ ಸೌತೆಕಾಯಿ ಸಿಗುತ್ತೆ. ಇದು ಟೇಸ್ಟಿ ಅಂದ್ರೆ ಟೇಸ್ಟಿ. ಈ ಸೌತೆಕಾಯಿ ಬೆಂಗಳೂರಿನಲ್ಲಿ ಸಿಗಲ್ಲ. ಹಾಗಾಗಿ ಹುಬ್ಬಳ್ಳಿ– ಧಾರವಾಡದಿಂದ ಬರುವವರಲ್ಲಿ ಎಳೆ ಸೌತೆಕಾಯಿಯನ್ನು ತರಿಸಿಕೊಳ್ಳುತ್ತೇನೆ. ನಾವು ಅಡುಗೆಯಲ್ಲಿ ಬಳಸುವುದು ಸಾವಯವ ತರಕಾರಿಯನ್ನೇ. ಜಯನಗರದಲ್ಲಿ ಬೆಳಿಗ್ಗೆ ಅಟೋದಲ್ಲಿ ಸಾವಯವ ತರಕಾರಿಗಳನ್ನು ಮಾರುತ್ತಾರೆ. ವಾಕಿಂಗ್‌ ಹೋದಾಗ ಅಲ್ಲಿಂದ ತರಕಾರಿ ಖರೀದಿಸುತ್ತೇವೆ. ಹೈಬ್ರೀಡ್‌ ತರಕಾರಿಗಳಿಂದ ದೂರ.

ನಾನು ಆಹಾರಪ್ರಿಯೆ. ಹೊಸ ರುಚಿ ಆಸ್ವಾದಿಸಲು ಯಾವಾಗಲೂ ರೆಡಿ. ಎಷ್ಟು ತಿಂತಿನೋ ಅಷ್ಟೇ ಕೆಲಸ ಮಾಡ್ತೀನಿ, ವ್ಯಾಯಾಮ ಮಾಡ್ತೀನಿ.

ಪ್ರತಿಕ್ರಿಯಿಸಿ (+)