ಹೈ ವಾಲ್ಯೂಮ್ ವ್ಯಾಮೋಹಕ್ಕೆ ಬ್ರೇಕ್ ಬೇಕಿದೆ

ಭಾನುವಾರ, ಮಾರ್ಚ್ 24, 2019
33 °C

ಹೈ ವಾಲ್ಯೂಮ್ ವ್ಯಾಮೋಹಕ್ಕೆ ಬ್ರೇಕ್ ಬೇಕಿದೆ

Published:
Updated:
ಹೈ ವಾಲ್ಯೂಮ್ ವ್ಯಾಮೋಹಕ್ಕೆ ಬ್ರೇಕ್ ಬೇಕಿದೆ

ಅದೊಂದು ಜೋಡಾಟ. ವೇಷಗಳು ಸ್ಪರ್ಧೆಯ ಜಿದ್ದಿಗೆ ಬಿದ್ದಂತೆ ದುಡಿಯುತ್ತಿವೆ, ದುಡಿಯಬೇಕು, ರಂಗವೇ ದುಡಿಸುತ್ತದೆ! ಕೊನೆಗೆ ದಣಿಸುತ್ತದೆ. ಅಂದಿನ ಜೋಡಾಟದಲ್ಲಿ ವೇಷಗಳು ದಣಿಯಲಿಲ್ಲ. ಆಟ ನೋಡಲು ಬಂದ ಸುಮಾರು ಐನೂರು ಸಭಾಸದರು ದಣಿದಿದ್ದರು. ಎರಡೂ ಮೇಳಗಳ ಧ್ವನಿವರ್ಧಕಗಳಲ್ಲಿ ಪೈಪೋಟಿ. ಅದರಿಂದ ಹೊರಹೊಮ್ಮುವ ಧ್ವನಿಯ ಧಾರಿಕೆಯ ಪರೀಕ್ಷೆ.

ಮದ್ದಳೆಗೆ ಎರಡು, ಭಾಗವತರಿಗೆ ಎರಡು, ಚೆಂಡೆಗೊಂದು ಅಲ್ಲದೆ ಭಾಗವತರ ಪಡಿಮಂಚದಲ್ಲಿ ಮತ್ತೊಂದು, ಎಂದಿನಂತೆ ರಂಗದ ಮುಂಭಾಗ, ಮೇಲ್ಭಾಗಗಳಲ್ಲಿ ಮೈಕ್ರೋಫೋನ್‍ಗಳ ಅಲಂಕಾರ. ಆಟ ಶುರುವಾಯಿತು. ಒಂದರ್ಧ ಗಂಟೆಯಷ್ಟೇ. ಪ್ರೇಕ್ಷಕರ ಕಿವಿಗಳು ‘ಭಯಂಕರ ಧ್ವನಿ’ಗೆ ಮುಷ್ಕರ ಹೂಡಿದುವು. ಧ್ವನಿಯನ್ನು ತಾಳಲಾರದೆ ನಿಧಾನವಾಗಿ ಕರಗಲಾರಂಭಿಸಿತು.

ಆಟ ನೋಡುವ ಭಾವವೂ ಜತಜತೆಗೆ ಕರಗುತ್ತಿತ್ತು. ನಡುರಾತ್ರಿ ಕಳೆಯುವಾಗ ಬೆರಳೆಣಿಕೆಯ ಪ್ರೇಕ್ಷಕರು ಉಳಿದಿದ್ದರು. ಆಟಕ್ಕೆ ಬಂದ ಬಹುತೇಕರಿಗೆ ಮೈಕಾಸುರನ ಭಯವೂ ಅಂಟಿತ್ತು. ಪ್ರೇಕ್ಷಕರನ್ನು ಉಳಿಸಿಕೊಳ್ಳಲಾಗದಷ್ಟು ಧ್ವನಿವರ್ಧಕ ವ್ಯವಸ್ಥೆಗಳು ವರ್ತಮಾನದ ಪ್ರದರ್ಶನಗಳಲ್ಲಿ ಅನಿವಾರ್ಯ ಅನ್ನಿಸುವಷ್ಟು ಸ್ಥಾಪಿತವಾಗಿದೆ.

ಧ್ವನಿವರ್ಧಕ ಪರಿಕರಗಳು ಈಗ ಸುಧಾರಿಸಿವೆ. ಸ್ವರಗಳನ್ನು ಬೇಕಾದಂತೆ, ಬೇಕಾದಷ್ಟು ಪ್ರೇಕ್ಷಕರ ಕಿವಿಗಳಿಗೆ ಸುರಿಯುವ ತಂತ್ರಜ್ಞಾನಗಳು ಬಂದಿವೆ. ಇದನ್ನು ಬಳಸುವಲ್ಲಿ ಬಹುತೇಕ ಕಡೆ ಧ್ವನಿವರ್ಧಕದ ಯಜಮಾನರಿಗೆ ಜ್ಞಾನದ ತೊಡಕು ಕಾಣುತ್ತದೆ. ಯಾವ್ಯಾವ ಕಲಾಪಕ್ಕೆ ಎಷ್ಟೆಷ್ಟು ಧ್ವನಿಗಳನ್ನು ಸೆಟ್ ಮಾಡಬೇಕು, ಅಲ್ಲಿನ ರಂಗಾಳ್ತನದ ವಿಸ್ತಾರಕ್ಕೆ ಯಾವ ತರಹದ ಮೈಕ್ ವ್ಯವಸ್ಥೆಗಳು ಬೇಕೆನ್ನುವುದು ತಿಳಿದಿರಬೇಕು.

ಲೋಪಗಳನ್ನು ತೋರಿಸಿದಾಗ ಒಬ್ಬರ ಕಣ್ಣಂತೂ ಕೆಂಪಗಾಯಿತು- ‘ಸಾಲ ಮಾಡಿ, ಲಕ್ಷಗಟ್ಟಲೆ ದುಡ್ಡನ್ನು ಮೈಕ್‍ಸೆಟ್ಟಿಗೆ ಹಾಕಿದ್ದೇನೆ. ನಮ್ಮ ಅವಸ್ಥೆ ನಿಮಗೇನು ಗೊತ್ತು....’ ಎಂದು ಸಿಟ್ಟಿನಲ್ಲಿ ಮಾತನಾಡಿದರು. ಅವರು ಮಾಡಿದ ಸಾಲಕ್ಕೂ, ಯಕ್ಷಗಾನ ಪ್ರದರ್ಶನಕ್ಕೂ ಎಲ್ಲಿಯ ಸಂಬಂಧ? ಕೆಲವೊಮ್ಮೆ ತಂತ್ರಜ್ಞರೇ ಇದ್ದಾರೆ ಎಂದಿಟ್ಟುಕೊಳ್ಳೋಣ. ಅವರ ಯೋಜನೆಗಳು, ಯೋಚನೆಗಳು ನಮ್ಮ ಕಲಾವಿದರಿಗೆ ಹೊಂದುವುದೇ ಇಲ್ಲ.

ತನ್ನ ಸ್ವರಕ್ಕೆ ಮೈಕಿನ ವಾಲ್ಯೂಮ್ ಎಷ್ಟು ಬೇಕು ಎನ್ನುವ ಪರಿಜ್ಞಾನ ಭಾಗವತರಿಗೆ ಇಲ್ಲದಿದ್ದರೆ ಮೈಕಿನ ತಂತ್ರಜ್ಞ ಏನು ಮಾಡಿಯಾನು? ಪ್ರದರ್ಶನ ಪೂರ್ವದಲ್ಲಿ ಈ ವಿಚಾರದಲ್ಲಿ ಭಾಗವತರಿಗೂ ಮೈಕಿನವರಿಗೂ ಜಟಾಪಟಿ ಮಾಮೂಲಿಯಾಗಿದೆ. ಜತೆಗೆ ಮದ್ದಳೆಯ ಎಡ-ಬಲದ ಧ್ವನಿಯ ಏರಿಳಿತದಲ್ಲೂ ತಕರಾರು. ಈಗೀಗ ಅಲ್ಲಿಲ್ಲಿ ಚೆಂಡೆಗೂ ಮೈಕ್ರೋಫೋನ್ ಒದಗಿಸುವುದನ್ನು ನೋಡಿದ್ದೇನೆ. ವಾಲ್ಯೂಮ್, ಶಾರ್ಪ್, ಏರಿಳಿತಗಳೊಳಗೆ ಗುದ್ದಾಡುತ್ತಾ, ಪ್ರದರ್ಶನದ ಒಂದರ್ಧ ಗಂಟೆಯನ್ನು ಕಬಳಿಸಿದ್ದು ಗೊತ್ತಾಗುವಾಗ ಹೊತ್ತಾಗಿರುತ್ತದೆ.



ಸಾಂದರ್ಭಿಕ ಚಿತ್ರ : ಅನಿಲ್ ಎಸ್. ಕರ್ಕೇರಾ

ಕಲಾವಿದರಿಗೆ ತೃಪ್ತಿಯಾಗುವಷ್ಟು ವ್ಯವಸ್ಥೆ ಆಯಿತೆನ್ನಿ. ಇವರ ಹಾಡನ್ನೋ, ಚೆಂಡೆ-ಮದ್ದಳೆಗಳ ಸುಖವನ್ನೋ ಅನುಭವಿಸೋಣ ಎಂದರೆ ಅತಿ ಧ್ವನಿಯು ಪ್ರೇಕ್ಷಕರ ಪಾಲಿಗೆ ಶಾಪವಾಗಿದೆ. ಎಲ್ಲರ ಕೈಯೂ ಕಿವಿಯನ್ನಾನಿಸಿಕೊಂಡಿರುತ್ತದೆ. ಪ್ರೇಕ್ಷಕನೇ ಹೋಗಿ ಮೈಕಿನವರಲ್ಲಿ ಗೊಣಗಾಡಿದರೆ ಸ್ಟೇಜಿನತ್ತ ಬೆರಳು ತೋರುತ್ತಾರೆ. ಕಾಯಕಲ್ಪ ಆಗಬೇಕಾದುದು ಎಲ್ಲಿ? ಮಾಡಬೇಕಾದವರು ಯಾರು? ಅತಿ ವ್ಯವಸ್ಥೆಗಳಿಂದ ಕಲಾವಿದರಿಗೆ ರಂಗಸುಖ ಪ್ರಾಪ್ತವಾಗುತ್ತದೆ ಎನ್ನೋಣವೇ?

ಧ್ವನಿವರ್ಧಕ ತಂತ್ರಜ್ಞಾನವನ್ನು ಬಳಸುವುದು ಕೂಡಾ ವಿಜ್ಞಾನ. ಯಕ್ಷಗಾನದಂಥ ಭಾವಪ್ರಧಾನ ಪ್ರಕಾರವು ಎಷ್ಟು ಪ್ರಮಾಣದ ಧ್ವನಿಯನ್ನು ಬಯಸುತ್ತದೆ? ಭಾಗವತರ ಸ್ವರದೊಂದಿಗೆ ಚೆಂಡೆ-ಮದ್ದಳೆಗಳು ವಿಲೀನಗೊಳ್ಳುವುದೋ ಅಥವಾ ಆ ಸ್ವರದೊಂದಿಗೆ ಪೈಪೋಟಿಯೋ? ಪೈಪೋಟಿಯಾದರೆ ಎಷ್ಟು ಪ್ರಮಾಣದಲ್ಲಿ?

ಸ್ವತಃ ಭಾಗವತರಾಗಿರುವ ಸುಬ್ರಾಯ ಸಂಪಾಜೆಯವರು ಒಂದೆಡೆ ವಿಶ್ಲೇಷಿಸುತ್ತಾರೆ- ‘ಭಾಗವತನ ಬಾಯಿಯಿಂದ ಮೈಕ್ ಕನಿಷ್ಠ ಐದರಿಂದ ಆರಿಂಚು ದೂರವಿರಲಿ. ‘ಎಕೋ’ (ಪ್ರತಿಧ್ವನಿ) ಅನಿವಾರ್ಯವೇ? ‘ಎಕೋ’ ಕೊಡುವುದರಿಂದ ಜನರಿಗೆ ಮುಟ್ಟುವುದು ಅಸಹಜ ಸ್ವರ. ಮದ್ದಳೆಗೆ ಮೈಕ್ ಬೇಕು. ಆದರೆ ವಾಲ್ಯೂಮ್ ಎಷ್ಟು ಬೇಕೋ ಅಷ್ಟೇ ಇರಲಿ. ಅದನ್ನು ಸೂತ್ರಧಾರ ನಿರ್ಣಯಿಸಲಿ. ಮದ್ದಳೆಯ ವಾಲ್ಯೂಮ್ ಹೆಚ್ಚಿಸುವುದರಿಂದ ಭಾಗವತನಿಗೆ ಕಿರಿಕಿರಿ. ಪ್ರಸಂಗ ಸಾಹಿತ್ಯ ಮುಚ್ಚಿಹೋಗುತ್ತದೆ. ಭಾಗವತನ ಮೈಕ್ ವಾಲ್ಯೂಮ್ ಹೆಚ್ಚಿಸಿ ಮುಮ್ಮೇಳದವರ ವಾಲ್ಯೂಮ್ ತಗ್ಗಿಸಿದರೆ ಸಂತುಲಿತ ಕೇಳುವಿಕೆಗೆ ಕೊಡಲಿಯೇಟು’.

ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿಯವರು ತಮ್ಮ ಟೊರೆಂಟೊ ಪ್ರವಾಸದಲ್ಲಿ ತಾಳಮದ್ದಳೆಯಲ್ಲಿಯೂ ಭಾಗವಹಿಸಿದ್ದರು. ಅಲ್ಲಿನ ಮತ್ತು ಇಲ್ಲಿನ ಧ್ವನಿವರ್ಧಕ ವ್ಯವಸ್ಥೆಗಳನ್ನೊಮ್ಮೆ ಮಾತಿನ ಮಧ್ಯೆ ವಿವರಿಸಿದ್ದರು- ‘ಟೊರೆಂಟೊದಲ್ಲಿ ಕಾರ್ಯಕ್ರಮಕ್ಕೆ ಒಂದರ್ಧ ಗಂಟೆ ಮೊದಲು ಮೈಕ್ ಬ್ಯಾಲೆನ್ಸ್ ಮಾಡಿಬಿಡುತ್ತಾರೆ. ಮಧ್ಯೆಮಧ್ಯೆ ಏರಿಸುವ, ಇಳಿಸುವ ಪ್ರಕ್ರಿಯೆ ಇಲ್ಲ. ನಮ್ಮಲ್ಲೂ ಇಂತಹ ಪ್ರಕ್ರಿಯೆಗಳತ್ತ ಯೋಚಿಸಬೇಕು’ ಎನ್ನುತ್ತಾರೆ ಅವರು.

ಯಕ್ಷಗಾನದ ಕುರಿತಾದ ಕಮ್ಮಟ, ವಿಚಾರಗೋಷ್ಠಿಗಳು ನಡೆಯುತ್ತಲೇ ಇರುತ್ತವೆ. ಇಂಥ ಗೋಷ್ಠಿಗಳಲ್ಲಿ ಧ್ವನಿವರ್ಧಕ, ಬೆಳಕು, ಆಡಂಬರ, ಗೌಜಿಯಂಥ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಮಾತುಕತೆ ನಡೆಯಬೇಕು. ಕಲಾವಿದರ ಜೊತೆಗೆ ತಂತ್ರಜ್ಞರೂ ಇಂಥ ಗೋಷ್ಠಿಗಳಲ್ಲಿ ಭಾಗವಹಿಸುವಂತಾದರೆ ಪರಸ್ಪರ ಚರ್ಚಿಸಿ ಅನುಕರಣೀಯ ಹಾದಿ ಕಂಡುಕೊಳ್ಳಬಹುದು. ಇದು ಯಕ್ಷಗಾನಕ್ಕೆ ದೊಡ್ಡ ಕೊಡುಗೆ ಏನೂ ಆಗಲಾರದು. ಇರುವ ಒಂದಿಷ್ಟು ಪ್ರೇಕ್ಷಕರನ್ನು ಉಳಿಸಿಕೊಳ್ಳಲು ಸಹಕಾರಿಯಾದೀತು. 

***

‘ಚಿಂತನೆ ನಡೆಯಬೇಕು’

ನಮ್ಮಲ್ಲಿ ಧ್ವನಿವರ್ಧಕದ ಬೊಬ್ಬಾಟದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದು, ಆಲಿಸುವುದು ತೀರಾ ಹಿಂಸೆ. ಎಲ್ಲಿಯವರೆಗೆ ಅಂದರೆ ಧ್ವನಿಯ ಅಟ್ಟಹಾಸಕ್ಕೆ ಪ್ರೇಕ್ಷಕರೇ ಎದ್ದು ಹೊರಗೆ ಹೋಗಿರುವುದನ್ನು ನೋಡಿದ್ದೇನೆ. ಕಲಾವಿದರಿಗೆ ವಾಲ್ಯೂಮ್ ಹೈ ಮತ್ತು ಶಾರ್ಪ್ ಕೊಟ್ಟಷ್ಟು ಸಂತೃಪ್ತಿ. ಎಷ್ಟೋ ಸಲ ಭಾಗವತಿಕೆಯನ್ನು ಚೆಂಡೆ, ಮದ್ದಳೆಗಳ ನುಡಿತಗಳು ನುಂಗಿಬಿಡುತ್ತವೆ. ಹೈ ವಾಲ್ಯೂಮ್‍ನಿಂದ ಬಹುತೇಕರ ಕಿವಿ ಸ್ತಬ್ಧವಾಗಿದೆ. ಯಕ್ಷಗಾನದಲ್ಲಿ ಧ್ವನಿವರ್ಧಕಗಳನ್ನು ಬಳಸುವ ರೀತಿನೀತಿ ಕುರಿತು ಚಿಂತನೆ ನಡೆಯಬೇಕಿದೆ.

ಡಾ.ಎಂ.ಪ್ರಭಾಕರ ಜೋಷಿ, ತಾಳಮದ್ದಳೆ ಅರ್ಥಧಾರಿ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry