ಸೋಮವಾರ, ಆಗಸ್ಟ್ 10, 2020
26 °C

ಮನೆ ಬಾಡಿಗೆ ವಿವಾದ; ಫೇಸ್‍ಬುಕ್ ಲೈವ್ ಮೂಲಕ ವಾಸ್ತವ ಸಂಗತಿ ವಿವರಿಸಿದ ಯಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆ ಬಾಡಿಗೆ ವಿವಾದ; ಫೇಸ್‍ಬುಕ್ ಲೈವ್ ಮೂಲಕ ವಾಸ್ತವ ಸಂಗತಿ ವಿವರಿಸಿದ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆ ಬಾಡಿಗೆ ನೀಡಿಲ್ಲ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ಬಗ್ಗೆ ಮಂಗಳವಾರ ಬೆಂಗಳೂರಿನ 42ನೇ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ವಿಚಾರಣೆ ನಡೆದಿದ್ದು ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ನ್ಯಾಯಾಲಯ ಯಶ್‍ಗೆ ಆದೇಶಿಸಿದೆ.

ಏನಿದು ಪ್ರಕರಣ?

2010ರ ಅಕ್ಟೋಬರ್ 16 ರಿಂದ ಕತ್ರಿಗುಪ್ಪೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ನೀಡದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ

ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಬಾಡಿಗೆ ತರ್ಕದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ವಿರುದ್ದ ಮನೆ ಮಾಲೀಕರು ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪುಷ್ಪಾ ಅವರು  ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಮತ್ತು ಮನೆ ಬಾಡಿಗೆ ಬಾಕಿ ₹9ಲಕ್ಷ 60 ಸಾವಿರ ಮನೆ ಮಾಲೀಕರಿಗೆ ಪಾವತಿಸುವಂತೆ ಹಾಗೂ ಮುಂಗಡವಾಗಿ ಪಡೆದಿದ್ದ ₹4 ಲಕ್ಷ ರುಪಾಯಿಯನ್ನು ಬಾಡಿಗೆದಾರರಿಗೆ ಮರಳಿಸುವಂತೆ ಮನೆ ಮಾಲೀಕರಿಗೆ ಆದೇಶಿಸಿದೆ. ಯಶ್ ತಾಯಿಯಿಂದ ನಮಗೆ ₹21.37 ಲಕ್ಷ ರು ಬಾಡಿಗೆ ಹಣ ಬರಬೇಕಿದೆ ಎಂದು ಮನೆ ಮಾಲೀಕರು ತಮ್ಮ ದೂರಿನಲ್ಲಿ ತಿಳಿಸಿದ್ದರು.

ಆರೋಪ ಏನು?

2010ರ ಅಕ್ಟೋಬರ್‌ನಲ್ಲಿ ಯಶ್ ಅವರ ಕುಟುಂಬಕ್ಕೆ ಮನೆಯನ್ನು 11 ತಿಂಗಳ ಅವಧಿ ಭೋಗ್ಯಕ್ಕೆ ನೀಡಲಾಗಿತ್ತು. 2011ರಲ್ಲಿ ಭೋಗ್ಯದ ಅವಧಿ ಮುಗಿದ ನಂತರ ಬಾಡಿಗೆ ನೀಡಬೇಕಿತ್ತು. ಕೆಲವು ತಿಂಗಳುಗಳ ಕಾಲ ಮಾತ್ರ ಅಲ್ಪಸ್ವಲ್ಪ ಬಾಡಿಗೆ ನೀಡಿದ ಆ ಕುಟುಂಬ ಆನಂತರ ಬಾಡಿಗೆಯನ್ನೂ ನಿಲ್ಲಿಸಿಬಿಟ್ಟಿದ್ದಾರೆ. ಮನೆಯನ್ನೂ ಖಾಲಿ ಮಾಡದೆ ₹21.37 ಲಕ್ಷ ರು. ಬಾಡಿಗೆ ಉಳಿಸಿಕೊಂಡಿದ್ದಾರೆ. ಬಾಡಿಗೆ ಕೊಡಿ ಎಂದು ಕೇಳಿದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿಪ್ರಸಾದ್ ಆರೋಪಿಸಿದ್ದರು.

ಫೇಸ್‍ಬುಕ್‍ ಲೈವ್‍ನಲ್ಲಿ ವಾಸ್ತವ ಸಂಗತಿ ವಿವರಿಸಿದ ಯಶ್
ಮನೆ ಬಾಡಿಗೆ ನೀಡದೆ ಯಶ್ ಮನೆ ಮಾಲೀಕರಿಗೆ ಬೆದರಿಕೆಯೊಡ್ಡಿದ್ದಾರೆ ಎಂಬ ವಿಷಯ ಸಾಮಾಜಿಕತಾಣಗಳಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯದಲ್ಲಿ ಯಶ್‍ಗೆ ಬೆಂಬಲ ಸೂಚಿಸಿದ ಅಭಿಮಾನಿಗಳಿಗೂ ಸಾಮಾಜಿಕ ತಾಣದಲ್ಲಿ ಕೆಟ್ಟ ಪದಗಳಿಂದ ಬೈದ ಘಟನೆಗಳು ನಡೆದಿತ್ತು. ಆದಾಗ್ಯೂ, ನಿಜವಾದ ಸಂಗತಿ ಏನೆಂಬುದನ್ನು ತಮ್ಮ ಅಭಿಮಾನಿಗಳಿಗೆ, ಮಾಧ್ಯಮದವರಿಗೆ ತಿಳಿಸುವ ಸಲುವಾಗಿ ಬುಧವಾರ ಸಂಜೆ ಯಶ್ ಫೇಸ್‍ಬುಕ್ ಲೈವ್‍ನಲ್ಲಿ  ಬಂದು ಮಾತನಾಡಿದ್ದರು.

ಯಶ್ ಹೇಳಿದ್ದೇನು?
ನಾನು ಬಾಡಿಗೆ ಸರಿಯಾಗಿ ಕಟ್ಟಿಲ್ಲ, ಮನೆ ಮಾಲೀಕರಿಗೆ ಬೆದರಿಕೆಯೊಡ್ಡಿದ್ದೇನೆ ಎಂಬ ವಿಷಯ ಚರ್ಚೆಯಾಗುತ್ತಿದೆ. ಆದರೆ ಆ ರೀತಿ ಏನೂ ನಡೆದಿಲ್ಲ. ಆ ಮನೆ ನನಗೆ ಲಕ್ಕಿ ಹಾಗಾಗಿ ನಾನು ಮನೆ ಬಿಟ್ಟು ಕೊಡುವುದಿಲ್ಲ ಎಂಬ ಮಾತೂ ಕೇಳಿ ಬಂದಿದೆ. ಆ ಮನೆ ಲಕ್ಕಿ, ಈ ಮನೆ ಲಕ್ಕಿ ಎಂದು ನಂಬುವ ವ್ಯಕ್ತಿ ನಾನಲ್ಲ. ನಾನು ಯಾವ ಮನೆಗೆ ಹೋದರೂ ಅಲ್ಲಿ ನನಗೆ ಒಳ್ಳೆಯದೇ ಆಗಿದೆ. ಈ ಮನೆ ನನಗೆ ತುಂಬಾ ಇಷ್ಟವಾದುದು, ನಮ್ಮ ಮಾಲೀಕರು ನಮ್ಮೊಡನೆ ತುಂಬಾ ಚೆನ್ನಾಗಿಯೇ ಇದ್ದರು. ನಾವು ಯಾವತ್ತೂ ಬಾಡಿಗೆ ಕೊಡುವುದರಲ್ಲಿ ವಿಳಂಬ ಮಾಡಿಲ್ಲ. ಎಲ್ಲವನ್ನೂ ಸರಿಯಾಗಿಯೇ ಕೊಟ್ಟಿದ್ದೇವೆ. ಇನ್ನೇನು ಬೇರೆ ಮನೆಗೆ ಹೋಗಬೇಕು ಎಂದು ಈ ಮನೆ ಖಾಲಿ ಮಾಡಿ ಬೀಗದ ಕೀ ಕೊಡುವುದಕ್ಕೆ ಹೋದ ಟೈಮಲ್ಲಿ ಅಲ್ಲಿ ಮಾತಿನ ಜಗಳ ನಡೆದಿದೆ. ಅವರು ತುಂಬಾ ಹೀನಾಯವಾಗಿ ಮಾತನಾಡಿದಾಗ ಅದಕ್ಕೆ ನನ್ನ ಅಮ್ಮನೂ ಪ್ರತಿಕ್ರಿಯಿಸಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆದು ನಿಮ್ಮ ಮನೆಯ ವಸ್ತುಗಳನ್ನು ಆಚೆ ಬಿಸಾಡ್ತೀವಿ, ಖಾಲಿ ಮಾಡಿಸ್ತೀವಿ ಎಂದು ಅವರು ಬೆದರಿಕೆಯೊಡ್ಡಿದ್ದಾರೆ. ಆಮೇಲೆ ನನ್ನ ಮೇಲೆ ಇಲ್ಲ ಸಲ್ಲದ ಅಪಪ್ರಚಾರಗಳೂ ನಡೆದಿವೆ. ನಾನು ಏನೂ ಮಾಡದೆ ನನ್ನ ಮೇಲೆ ಈ ರೀತಿ ನನ್ನ ಮೇಲೆ ಆರೋಪ ಮಾಡಿದಾಗ ನನಗೂ ಹಠ ಬಂತು. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಅದರ ಬದಲು ನನಗೆ ಬೆದರಿಕೆಗಳು ಬಂದಿತ್ತು. ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆಮೇಲೆ ವಿಷಯ ಮಾಧ್ಯಮಗಳಲ್ಲಿ ಬಂತು, ಕೋರ್ಟ್ ಮೆಟ್ಟಿಲೇರಿದ್ದೂ ಆಯ್ತು ಎಂದು ನಡೆದ ಸಂಗತಿಗಳನ್ನು ಯಶ್ ಲೈವ್ ವಿಡಿಯೊದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.