ಶನಿವಾರ, ಡಿಸೆಂಬರ್ 14, 2019
20 °C

ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಕರ್ನಾಟಕವೂ ಸೇರಿದಂತೆ ಎಂಟ್ಹತ್ತು ರಾಜ್ಯಗಳ ಬ್ಯಾಂಕ್‌ ಎಟಿಎಂಗಳಲ್ಲಿ ನಗದು ದೊರೆಯದಿರುವುದು ಕಳವಳಕಾರಿ ವಿದ್ಯಮಾನ. ಗರಿಷ್ಠ ಮುಖಬೆಲೆಯ ನೋಟುಗಳ ಹಠಾತ್‌ ರದ್ದತಿಯಿಂದ 2016ರಲ್ಲಿ ಉದ್ಭವಿಸಿದ್ದ ನಗದು ಅಲಭ್ಯತೆ ಭೂತ ಮತ್ತೆ ಧುತ್ತೆಂದು ಎದುರಾಗಿದೆ. ಮೂರು ತಿಂಗಳಿನಿಂದ ನಗದು ಬೇಡಿಕೆ ಹಠಾತ್ತಾಗಿ ಹೆಚ್ಚಳಗೊಂಡು ತಾತ್ಕಾಲಿಕವಾಗಿ ಕೊರತೆ ಉಂಟಾಗಿದೆ ಎಂದು ಸರ್ಕಾರ ಕಾರಣ ನೀಡಿದೆ. ಹಾಗಿದ್ದರೆ, ಪರಿಸ್ಥಿತಿಯ ಅಂದಾಜು ಮಾಡುವಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರ ವಿಫಲಗೊಂಡಿವೆ ಎಂದೇ ಇದರರ್ಥ. ವಸೂಲಾಗದ ಸಾಲದ ಸಮಸ್ಯೆ, ವಂಚನೆ, ಹಗರಣ, ಕಡಿಮೆ ಬಡ್ಡಿ ದರ ಮತ್ತಿತರ ಕಾರಣಗಳಿಗೆ ಬ್ಯಾಂಕ್‌ಗಳ ಕುರಿತಾದ ಗ್ರಾಹಕರ ವಿಶ್ವಾಸವು ಈಗಾಗಲೇ ಅಲುಗಾಡುತ್ತಿದೆ.

ಆರ್‌ಬಿಐ ಅಂಕಿ ಅಂಶಗಳ ಪ್ರಕಾರ, ಸದ್ಯಕ್ಕೆ ₹ 18.42 ಲಕ್ಷ ಕೋಟಿ ಮೊತ್ತದ ನೋಟುಗಳು ಚಲಾವಣೆಯಲ್ಲಿ ಇವೆ. ಗ್ರಾಹಕರು ಕೇಳಿದಷ್ಟು ಹಣ ಬ್ಯಾಂಕ್‌ಗಳಲ್ಲಿ ಸಿಗದಿರುವುದು ಮತ್ತು ಎಟಿಎಂಗಳಲ್ಲಿ ನಗದು ದೊರೆಯದಿರುವುದಕ್ಕೆ ಬೇರೆ ಕಾರಣಗಳು ಇರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ನೋಟು ರದ್ದತಿ ನಂತರದ ದಿನಗಳಲ್ಲಿ ನಗದುರಹಿತ (ಡಿಜಿಟಲ್‌) ವಹಿವಾಟು ಜನಪ್ರಿಯಗೊಳ್ಳುತ್ತಿದೆ. ಆದರೂ, ರಿಟೇಲ್‌ ಮತ್ತು ಇತರ ವಹಿವಾಟಿನಲ್ಲಿ ನಗದು ಬಳಕೆಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ಕಡಿವಾಣ ಬಿದ್ದಿಲ್ಲ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿನ ನಗದು ಅಲಭ್ಯತೆ ಸಮಸ್ಯೆ ಹೆಚ್ಚು ಉಲ್ಬಣಗೊಂಡಿದೆ. ‘ನಗದು ಬೇಡಿಕೆ ಹಠಾತ್ತಾಗಿ ಹೆಚ್ಚಿದೆ. ಹೀಗಾಗಿ ಅಭಾವ ಸೃಷ್ಟಿಯಾಗಿದೆ’ ಎನ್ನುವ ಸರ್ಕಾರದ ವಾದದಲ್ಲಿ ಹುರುಳಿಲ್ಲ. ವಾಸ್ತವದಲ್ಲಿ ಬ್ಯಾಂಕ್‌ ಗ್ರಾಹಕರ ಅನುಭವ ಬೇರೆಯೇ ಇದೆ. ಎಟಿಎಂಗಳಲ್ಲಿ ದಿನಬಳಕೆಗೆ ಬೇಕಾದ ₹ 100, 200, 500 ಮುಖಬೆಲೆಯ ನೋಟುಗಳು ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ. ಗರಿಷ್ಠ ಮುಖಬೆಲೆಯ ನೋಟಗಳ ರದ್ದತಿ ನಂತರ ಬಾಗಿಲು ಹಾಕಿದ ಕೆಲವು ಎಟಿಎಂಗಳು ಇದುವರೆಗೂ ಕಾರ್ಯಾರಂಭ ಮಾಡಿದ ನಿದರ್ಶನಗಳೂ ಇಲ್ಲ. ಬ್ಯಾಂಕ್‌ಗಳು ಅನೇಕ ಕಾರಣಗಳಿಗಾಗಿ ಎಟಿಎಂಗಳ ಸಂಖ್ಯೆಯನ್ನೂ ನಿಧಾನವಾಗಿ ಕಡಿಮೆ ಮಾಡುತ್ತಿವೆ.

ನಗದು ಕೊರತೆ ಸಮಸ್ಯೆಯು ತಾತ್ಕಾಲಿಕವಾಗಿದೆ. ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸರಿ ಹೋಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಭರವಸೆಯನ್ನೇನೋ ನೀಡಿದ್ದಾರೆ. ನಿಜ. ಜನರು ಆತಂಕಪಡಬೇಕಾಗಿಲ್ಲ. ಆದರೆ, ನಗದು ಪೂರೈಕೆಯನ್ನು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರಬೇಕಾಗಿದೆ. ಇದೊಂದು ದಿಢೀರನೆ ಉದ್ಭವಿಸಿರುವ ಬಿಕ್ಟಟ್ಟೂ ಅಲ್ಲ. ತಮ್ಮ ದಿನನಿತ್ಯದ ಬೇಡಿಕೆ ಪೂರೈಸುವಷ್ಟು ನಗದು ಆರ್‌ಬಿಐನಿಂದ ಪೂರೈಕೆಯಾಗುತ್ತಿಲ್ಲ ಎಂದು ಬ್ಯಾಂಕಿಂಗ್‌ ಮೂಲಗಳೇ ದೂರುತ್ತವೆ. ನೋಟುಗಳನ್ನು ಮುದ್ರಿಸಿ, ಪೂರೈಸುವ ಮತ್ತು ಚಲಾವಣೆಯ ಹೊಣೆ ಹೊತ್ತಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ಎಡವಿದೆ ಎನ್ನುವುದೂ ಇದರಿಂದ ವೇದ್ಯವಾಗುತ್ತದೆ.

ಈ ಬಿಕ್ಕಟ್ಟು ಉದ್ಭವಗೊಳ್ಳಲು ಹಲವಾರು ಕಾರಣಗಳಿವೆ. ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ಹಗರಣಗಳ ಕಾರಣಕ್ಕೆ ಗ್ರಾಹಕರು ನಗದು ವಾಪಸ್‌ ಪಡೆಯುವ ಪ್ರಮಾಣದಲ್ಲಿ ಹೆಚ್ಚಳ, ಹೊಸ ಫಸಲು ಕೊಯ್ಲಿಗೆ ಬಂದಿರುವುದು, ಮದುವೆ ದಿನಗಳು, ಸರ್ಕಾರ ವಾರ್ಷಿಕ ಹಣ ಪಾವತಿಗೆ ಮುಂದಾಗಿರುವುದರಿಂದ ನಗದಿಗೆ ಬೇಡಿಕೆ ಹೆಚ್ಚಳಗೊಂಡಿದೆ. ಮುಂಬರುವ ಚುನಾವಣೆಗಳ ವೆಚ್ಚಕ್ಕೆ ರಾಜಕಾರಣಿಗಳು ಗರಿಷ್ಠ ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿ ಇಡುತ್ತಿರಬಹುದು ಎಂಬ ಶಂಕೆಯೂ ಇದೆ. ಇದು ಗುಟ್ಟಿನ ಸಂಗತಿ ಏನಲ್ಲ. ಸದ್ಯದ ವಿದ್ಯಮಾನಕ್ಕೆ ಈ ‍ಪ್ರವೃತ್ತಿಯ ಕೊಡುಗೆಯೂ ಇದೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ಮಾಡಲು ಚುನಾವಣಾ ವೆಚ್ಚದಲ್ಲಿ ಸುಧಾರಣೆಗಳನ್ನೂ ತರಬೇಕಾಗಿದೆ. ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ತುರ್ತಾಗಿ ಕಾರ್ಯೋನ್ಮುಖವಾಗಿದೆ. ನಗದು ಲಭ್ಯತೆ ಹೆಚ್ಚಿಗೆ ಇರುವ ಪ್ರದೇಶದಿಂದ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ವರ್ಗಾವಣೆ ಮಾಡುವುದಾಗಿ ಪ್ರಕಟಿಸಿದೆ. ₹ 500 ಮುಖಬೆಲೆಯ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸುವುದಾಗಿಯೂ ಹೇಳಿದೆ. ಇದರಿಂದ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎನ್ನುವ ನಿರೀಕ್ಷೆ ನಿಜವಾಗಲಿ.

ಪ್ರತಿಕ್ರಿಯಿಸಿ (+)