ಶುಕ್ರವಾರ, ಡಿಸೆಂಬರ್ 6, 2019
25 °C

ಚೀನಾದಿಂದ ಆರ್ಥಿಕ ಕಾರಿಡಾರ್‌ಗೆ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

ಚೀನಾದಿಂದ ಆರ್ಥಿಕ ಕಾರಿಡಾರ್‌ಗೆ ಪ್ರಸ್ತಾವ

ಬೀಜಿಂಗ್: ಬೀಜಿಂಗ್‌ ಪರ ನಿಲುವು ತಾಳಿರುವ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ನೇತೃತ್ವದ ಹೊಸ ಸರ್ಕಾರದ ಮೇಲಿನ ಪ್ರಭಾವಳಿಯನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಚೀನಾ, ಆರ್ಥಿಕ ಕಾರಿಡಾರ್‌ ನಿರ್ಮಾಣಕ್ಕೆ ಬುಧವಾರ ಪ್ರಸ್ತಾವವನ್ನು ಸಲ್ಲಿಸಿದೆ.

ಹಿಮಾಲಯದ ಮೂಲಕ ಭಾರತ– ನೇಪಾಳ–ಚೀನಾಕ್ಕೆ ಸಂಪರ್ಕ ಕಲ್ಪಿಸುವ ಬಹು ಆಯಾಮದ ಆರ್ಥಿಕ ಕಾರಿಡಾರ್‌ ಇದಾಗಿದೆ.

ನೇಪಾಳದ ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗ್ಯಾವಾಲಿ ಅವರು ತಮ್ಮ ಚೀನಾದ ಸಹವರ್ತಿ ವಾಂಗ್‌ ಯಿ ಜೊತೆ ಮಾತುಕತೆ ನಡೆಸಿದ ಬಳಿಕ ಚೀನಾ ಈ ಪ್ರಸ್ತಾವಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಈ ಸಂಪರ್ಕಕ್ಕೆ ಚೀನಾ ಮತ್ತು ನೇಪಾಳ ಒಪ್ಪಿಕೊಂಡಿವೆ. ಮೂರೂ ದೇಶಗಳ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂಬ ಭರವಸೆ ನನಗಿದೆ’ ಎಂದು ಪ್ರದೀಪ್‌ಕುಮಾರ್‌ ಪತ್ರಕರ್ತರಿಗೆ ಹೇಳಿದರು. ಒಲಿ ಅವರು ಪ್ರಧಾನಿಯಾದ ನಂತರ ಬೀಜಿಂಗ್‌ಗೆ ಮೊದಲ ಬಾರಿಗೆ ಪ್ರದೀಪ್‌ಕುಮಾರ್‌ ಭೇಟಿ ನೀಡಿದ್ದಾರೆ.

ನಮ್ಮದು ಮಿತ್ರ ರಾಷ್ಟ್ರ: ’ಚೀನಾ, ನೇಪಾಳ ಮತ್ತು ಭಾರತ ಮಿತ್ರ ರಾಷ್ಟ್ರಗಳು. ನದಿ ಮತ್ತು ಬೆಟ್ಟಗುಡ್ಡಗಳಿಂದ ನಾವೆಲ್ಲಾ ನೆರೆಹೊರೆಯವರಾಗಿದ್ದೇವೆ. ಈ ಮೂರು ದೇಶಗಳ ಒಳಗೆ ಇನ್ನಾವುದೇ ಘಟನೆಗಳು ನಡೆದರೂ ನಮ್ಮ ಸ್ನೇಹಕ್ಕೆ ಅವು ಅಡ್ಡಿ ಬರುವುದಿಲ್ಲ. ನಾವು ನೆರೆಹೊರೆಯವರು, ಸ್ನೇಹಿತರುಎಂಬುದು ಎಂದಿಗೂ ಬದಲಾಗುವುದಿಲ್ಲ’ ಎಂದು ವಾಂಗ್‌ ಹೇಳಿದರು.

‘ನೇಪಾಳದ ಅಭಿವೃದ್ಧಿಗೆ ಸಹಕಾರ ನೀಡುವುದು ಚೀನಾ ಮತ್ತು ಭಾರತಕ್ಕೆ ತಿಳಿದಿದೆ. ಆರ್ಥಿಕವಾಗಿ ಮುಂದುವರಿದಿರುವ ಈ ಎರಡು ದೇಶಗಳು ನೇಪಾಳದ ಅಭಿವೃದ್ಧಿಗೆ ಶ್ರಮಿಸಬೇಕಿದೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)