ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಯಾಚನೆಗೆ ಹೊನ್ನಪ್ಪಗೌಡ ಒತ್ತಾಯ

ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯಿಂದ ಅಮಾನತು ವಿಚಾರ
Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಸದಸ್ಯನಾಗಿಲ್ಲ. ಆದರೂ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಮ್‌. ಶ್ರೀಕಾಂತ್ ಅವರು, ನನ್ನನ್ನು ಅಮಾನತು ಮಾಡಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅವಮಾನಿಸಿದ್ದಾರೆ. ಈ ಕುರಿತು ಅವರು ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ಅಂತರರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ ಹೊನ್ನಪ್ಪಗೌಡ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ನಾನು ಸದಸ್ಯನಾಗಿರುವ ದಾಖಲೆಗಳಿದ್ದರೆ, ಅವುಗಳನ್ನು ಬಹಿರಂಗ ಮಾಡಬೇಕು. ಇಲ್ಲವಾದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಶ್ರೀಕಾಂತ್‌ ಅವರಿಗೆ ಅನುಭವದ ಕೊರತೆ ಇದ್ದು, ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡುತ್ತಿವೆ’ ಎಂದು ದೂರಿದ್ದಾರೆ.

‘ಕರ್ನಾಟಕ ಕ್ರೀಡಾ ಪ್ರಾಧಿಕಾರ, ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಸರ್ಕಾರದ ಗೌರವಾನ್ವಿತ ಹುದ್ದೆಗಳಲ್ಲಿ ಇರುವ ಕಬಡ್ಡಿ ಕೋಚ್‌ಗಳನ್ನು ಕ್ರೀಡಾ ಸಂಸ್ಥೆ ಅಥವಾ ಫೆಡರೇಷನ್‌ಗೆ ತರಬೇತಿ ನೀಡಲು ನಿಯೋಜಿಸಬಹುದಾಗಿದೆ. ಹೀಗೆ, ನಿಯೋಜನೆಗೊಂಡ ಯಾರೂ ಅಮೆಚೂರ್ ಕಬಡ್ಡಿ ಸಂಸ್ಥೆಯಲ್ಲಿ ಸದಸ್ಯರಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಕಬಡ್ಡಿ ಕೋಚ್‌ಗಳಾದ ಕೆ.ಎ. ಲಕ್ಷ್ಮೀನಾರಾಯಣ, ಚಂದ್ರಶೇಖರ, ಈಶ್ವರ ಅಂಗಡಿ, ಅನಿಲ್‌ ಹೊಸಮನಿ, ರಾಮಚಂದ್ರ, ಚಂದ್ರಶೇಖರ್‌, ಮಂಜುನಾಥ ಅವರು ಸ್ವಂತ ಇಚ್ಛೆಯಿಂದ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅಮಾನತು ಮಾಡುವ ಮುನ್ನ ನೋಟಿಸ್‌ ಕೊಡಬೇಕಾಗಿತ್ತು. ಏಕಾಏಕಿ ಅಮಾನತು ನಿರ್ಧಾರ ತೆಗೆದುಕೊಂಡಿದ್ದು ಏಕೆ’ ಎಂದು ಹೊನ್ನಪ್ಪ ಮತ್ತು ಅಮಾನತುಗೊಂಡಿರುವವರು ಪ್ರಶ್ನಿಸಿದ್ದಾರೆ.

‘ರಾಜ್ಯ ಅಮೆಚೂರ್ ಸಂಸ್ಥೆಯ ಸದಸ್ಯನಲ್ಲದಿದ್ದರೂ, ನನ್ನನ್ನು ಅಮಾನತು ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ ಅವಮಾನವಾಗಿದೆ. ಕ್ಷಮೆಯಾಚಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರ ಧಾರವಾಡದ ಕೇಂದ್ರದ ಉಸ್ತುವಾರಿ ಈಶ್ವರ ಅಂಗಡಿ ಹೇಳಿದ್ದಾರೆ.

‘ಯುವಕರ ದಾರಿ ತಪ್ಪಿಸುವ ಪ್ರಯತ್ನ’
‘ಅಮಾನತುಗೊಂಡವರು ಅಧಿಕೃತ ಸಂಸ್ಥೆಯಲ್ಲಿಯೇ ಇದ್ದರು. ನಿಯಮಬಾಹಿರವಾಗಿ ಕಬಡ್ಡಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ಅಮಾನತು ಮಾಡಿದ್ದೇವೆ’ ಎಂದು ಶ್ರೀಕಾಂತ್‌ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆ ಸಂಘಟನಾ ಕಾರ್ಯದರ್ಶಿ ಬಿ.ಸಿ. ರಮೇಶ್‌ ‘ಅಧಿಕೃತ ಸಂಸ್ಥೆ ಹಾಗೂ ಕಬಡ್ಡಿ ಫೆಡರೇಷನ್‌ ಇದ್ದ ಮೇಲೂ ಮತ್ತೊಂದು ಕಬಡ್ಡಿ ಸಂಸ್ಥೆ ಆರಂಭಿಸುವ ಅಗತ್ಯವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಸಂಸ್ಥೆ ಆರಂಭಿಸಲು ಅವರು ಅನುಮತಿ ಪಡೆದುಕೊಂಡಿಲ್ಲ. ಇದು ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT