ಟಿಕೆಟ್‌ ಆಕಾಂಕ್ಷಿಗಳ ಮುಗಿಯದ ಬೇಡಿಕೆ

7

ಟಿಕೆಟ್‌ ಆಕಾಂಕ್ಷಿಗಳ ಮುಗಿಯದ ಬೇಡಿಕೆ

Published:
Updated:

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರಗಳಲ್ಲಿ ಬಿಡುವಿಲ್ಲದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಕಾಂಗ್ರೆಸ್ ಟಿಕೆಟ್ ವಂಚಿತರು ಒತ್ತಡ ಹಾಕಲು ಭೇಟಿ ನೀಡುತ್ತಲೇ ಇದ್ದಾರೆ.

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂ.ಶ್ರೀನಿವಾಸ ಅವರು ಬುಧವಾರ ಬೆಳಿಗ್ಗೆ ಭೇಟಿ ನೀಡಿದರು. ‘ಬಿಜೆಪಿಯ ಆರ್‌.ಅಶೋಕ್‌ ಅವರನ್ನು ಸೋಲಿಸಲು ನನಗೆ ಶಕ್ತಿಯಿದೆ. ಆದರೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ಟಿಕೆಟ್‌ ನೀಡದೇ ಇರುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಸಿದ್ದರಾಮಯ್ಯ ಅವರ ಮೇಲೆ ನನಗೆ ನಂಬಿಕೆ ಇದೆ. ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದಾರೆ’ ಎಂದು ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಹಿರೇಕೆರೂರು ಕ್ಷೇತ್ರದ ಅಭ್ಯರ್ಥಿ ಬಿ.ಸಿ.ಪಾಟೀಲ ಅವರು ಬ್ಯಾಡಗಿ ಶಾಸಕ ಬಸವರಾಜು ಅವರ ಪರ ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದರು. ಅವರಿಗೆ ಟಿಕೆಟ್‌ ನೀಡಿದರೆ ಗೆಲುವು ಖಚಿತ ಎಂದು ಮನವರಿಕೆ ಮಾಡಿಕೊಟ್ಟರು.

ಕೊಡಗಿನ ವಿರಾಜಪೇಟೆ ಕ್ಷೇತ್ರಕ್ಕೆ ಟಿಕೆಟ್‌ ನೀಡುವಂತೆ ಕೋರಿ ಕಾಂಗ್ರೆಸ್ ಮುಖಂಡ ಹರೀಶ್‌ ಬೋಪಣ್ಣ ನೇತೃತ್ವದ ನಿಯೋಗವು ಪ್ರಚಾರದ ವೇಳೆಯೇ ಭೇಟಿ ನೀಡಿತು. ಚಾಮುಂಡೇಶ್ವರಿ ಕ್ಷೇತ್ರದ ಗೋಹಳ್ಳಿ ಬಳಿ ಸಿದ್ದರಾಮಯ್ಯ ಅವರ ಕಾರನ್ನು ತಡೆದು ಟಿಕೆಟ್‌ ಕೊಡುವಂತೆ ಮನವಿ ಮಾಡಿತು. ‘ಟಿಕೆಟ್‌ ಕೊಡಲು ಕಾಲ ಮಿಂಚಿದೆ’ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೋಪಣ್ಣ, ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry