ಶುಕ್ರವಾರ, ಡಿಸೆಂಬರ್ 13, 2019
19 °C

ಚುನಾವಣಾ ಸಮರಕ್ಕೆ ಭ್ರಷ್ಟಾಚಾರ ಆರೋಪದ ಅಸ್ತ್ರ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಚುನಾವಣಾ ಸಮರಕ್ಕೆ ಭ್ರಷ್ಟಾಚಾರ ಆರೋಪದ ಅಸ್ತ್ರ

ರಾಜಕೀಯದಲ್ಲಿ ‘ಮೌಲ್ಯ’ ಎನ್ನುವುದು ಆದರ್ಶವೆನಿಸಿದರೆ; ‘ಭ್ರಷ್ಟಾಚಾರ’ ಮಾತ್ರ ಸಾರ್ವಕಾಲಿಕ ಸತ್ಯ ಎಂಬಂತಾಗಿದೆ. ರಾಜಕಾರಣ ಮತ್ತು ಭ್ರಷ್ಟಾಚಾರ ಪರಸ್ಪರ ಅವಲಂಬಿತ ಎನ್ನುವಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆ. ಪ್ರಜಾತಂತ್ರದಲ್ಲಂತೂ ಆಡಳಿತ ನಡೆಸುವವರೇ ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗುವುದು ಹೆಚ್ಚು. ಆ ಕಾರಣಕ್ಕಾಗಿ ಎಷ್ಟೋ ಸರ್ಕಾರಗಳು ಉರುಳಿ ಹೋಗಿವೆ. ಭ್ರಷ್ಟಾಚಾರದ ಬೆನ್ನು ಹತ್ತಬೇಕಾದ ತನಿಖಾ ಸಂಸ್ಥೆಗಳನ್ನು ಒಂದೋ ನಿಷ್ಕ್ರಿಯಗೊಳಿಸಿರುತ್ತಾರೆ, ಇಲ್ಲವೇ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುತ್ತಾರೆ. ಆರೋಪ ಕೇಳಿ ಬಂದಾಗ, ಸತ್ಯದ ತಲೆಯ ಮೇಲೆ ಹೊಡೆಯುವ ಹಾಗೆ ಬಿ–ರಿಪೋರ್ಟ್‌ಗಳನ್ನು (ದೋಷಮುಕ್ತ ವರದಿ) ಪಡೆಯುವ ಕಲೆಯನ್ನು ರಾಜಕಾರಣಿಗಳು ಕರಗತ ಮಾಡಿಕೊಂಡಿರುತ್ತಾರೆ.

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷಗಳ ನಾಯಕರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದವು. ಇವು ಪರಸ್ಪರರ ವಿರುದ್ಧ ರಾಜಕೀಯ ಸಮರದ ಅಸ್ತ್ರಗಳಾದವು. ಹಲವು ಪ್ರಕರಣಗಳಲ್ಲಿ ವಿಚಾರಣೆ ಮತ್ತು ತನಿಖೆಗಳೂ ನಡೆದವು. ಯಾವ ಆರೋಪಗಳೂ ಸಾಬೀತಾದ ವರದಿ ಬರಲಿಲ್ಲ. ಮುಜುಗರ ಎನಿಸುವ ವರದಿಗಳನ್ನು ಬಯಲು ಮಾಡಲಿಲ್ಲ. ಆದರೆ, ಜನಸಾಮಾನ್ಯರ ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವನ್ನು, ಆರೋಪ ಎದುರಿಸುತ್ತಿರುವ ಯಾವುದೇ ನಾಯಕರು ಮಾಡಲಿಲ್ಲ. ಆದರೆ, ಚುನಾವಣೆ ಹೊತ್ತಿನಲ್ಲಿ ಇವು ಅಸ್ತ್ರಗಳಾಗಿ ಬಳಕೆಯಾಗುತ್ತಿವೆ.

* ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ಅಂದಿನ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಸಂತೋಷ್ ಲಾಡ್‌ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದ್ದು ₹80 ಲಕ್ಷ ಮೌಲ್ಯದ ಹ್ಯೂಬ್ಲೊ ವಾಚ್‌ ಧರಿಸಿದ ಪ್ರಕರಣ. ಇಷ್ಟು ಬೆಲೆ ಬಾಳುವ ಕೈಗಡಿಯಾರವನ್ನು ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದು ಎಂದು ಮುಖ್ಯಮಂತ್ರಿ ಸಮಜಾಯಿಷಿ ನೀಡಿದರೂ ವಿರೋಧ ಪಕ್ಷಗಳು ಒಪ್ಪಲಿಲ್ಲ. ಒಂದು ಹೆಜ್ಜೆ ಮುಂದಕ್ಕೆ ಹೋದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಕಳ್ಳರಿಂದ ಪೊಲೀಸರು ವಶಪಡಿಸಿಕೊಂಡಿದ್ದ ಹ್ಯೂಬ್ಲೊ ವಾಚ್‌ ಮುಖ್ಯಮಂತ್ರಿ ಕೈಯಲ್ಲಿದೆ ಎಂದು ಆರೋಪಿಸಿದರು. ಪ್ರಕರಣದ ಬಗ್ಗೆ ಎಸಿಬಿ ತನಿಖೆ ನಡೆಯಿತು. ಮುಖ್ಯಮಂತ್ರಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಎಸಿಬಿ ಕ್ಲೀನ್‌ ಚಿಟ್‌ ನೀಡಿತು. ಸಿದ್ದರಾಮಯ್ಯ ಅವರು ವಾಚ್‌ ಅನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದೂ ಆಯಿತು.

* ಅರ್ಕಾವತಿ ಬಡಾವಣೆಯಲ್ಲಿ 541 ಎಕರೆ ಜಮೀನನ್ನು ‘ರಿಡೂ’ ಹೆಸರಿನಲ್ಲಿ ಡಿನೋಟಿಫಿಕೇಶನ್‌ ಮಾಡಲಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಆರೋಪಿಸಿದವು. ವಿಧಾನಸಭೆಯಲ್ಲಿ ಇದರ ವಿರುದ್ಧ ವಿರೋಧ ಪಕ್ಷಗಳು ಹೋರಾಟ ನಡೆಸಿದವು. ವಿಚಾರಣೆಗಾಗಿ ಸರ್ಕಾರ ನ್ಯಾ. ಕೆಂಪಣ್ಣ ನೇತೃತ್ವದಲ್ಲಿ ಆಯೋಗ ರಚಿಸಿತು. ಆಯೋಗ ಎರಡು ವರ್ಷಗಳಷ್ಟು ಸುದೀರ್ಘವಾಗಿ ವಿಚಾರಣೆ ನಡೆಸಿ ಬಳಿಕ 9,449 ಪುಟಗಳ ಬೃಹತ್‌ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಹೇಳಲಾಗಿದೆ. ಆದರೆ, ಸರ್ಕಾರ ವರದಿ ಬಹಿರಂಗಪಡಿಸಿಲ್ಲ.

* ಸರ್ಕಾರಿ ನಿಯಂತ್ರಿತ ಬೆಂಗಳೂರು ಮೆಡಿಕಲ್‌ ಕಾಲೇಜಿನ ಸಿ.ಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಯಂತ್ರ ಖರೀದಿಸುವ ಟೆಂಡರ್‌ ಅನ್ನು ಮುಖ್ಯಮಂತ್ರಿ ಎರಡನೇ ಪುತ್ರ ಡಾ. ಯತೀಂದ್ರ ಅವರ ಒಡೆತನದ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸೊಲ್ಯುಶನ್ಸ್‌ ಸಂಸ್ಥೆಗೆ ಕೊಡಲಾಗಿದೆ ಎಂಬ ಆರೋಪದ ಕಾರಣ ಟೆಂಡರ್‌ ರದ್ದು ಪಡಿಸಲಾಯಿತು. ಬಿಡಿಎ ನಿವೇಶನವೊಂದನ್ನು ಮುಖ್ಯಮಂತ್ರಿ ಪುತ್ರನ ಸ್ನೇಹಿತನಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂತು. ನಿವೇಶನದ ಮೌಲ್ಯ ₹150 ಕೋಟಿ ಎಂಬುದು ವಿರೋಧ ಪಕ್ಷಗಳ ದೂರು.

* ಹಾಸಿಗೆ, ದಿಂಬು ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂಬ ಆರೋಪ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ವಿರುದ್ಧ ಕೇಳಿ ಬಂತು. ಹಾಸಿಗೆ ಮತ್ತು ದಿಂಬುಗಳಿಗೆ ಹೆಚ್ಚು ದರ ನಿಗದಿ ಮಾಡಿದ್ದರಿಂದ ಬೊಕ್ಕಸಕ್ಕೆ ₹ 14 ಕೋಟಿ ನಷ್ಟ ಆಯಿತು ಎಂಬುದೇ ಆರೋಪ.

* ಬೆಂಗಳೂರಿನ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣದ ಬಗ್ಗೆ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗಿತ್ತು. ₹ 3,000 ಕೋಟಿಯ ಈ ಯೋಜನೆಯಲ್ಲಿ ₹ 100 ಕೋಟಿಗೂ ಹೆಚ್ಚು ಕಿಕ್‌ಬ್ಯಾಕ್‌ ಅನ್ನು ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ನೀಡಲಾಗಿದೆ ಎಂಬುದಾಗಿ ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಸಾರ್ವಜನಿಕರ ವಿರೋಧದ ಕಾರಣ ಯೋಜನೆಯನ್ನು ಕೈಬಿಡಲಾಯಿತು.

* ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ. ಗೋವಿಂದರಾಜು ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿದ ಡೈರಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಡೈರಿಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಿಗೆ ಕಪ್ಪ ನೀಡಿರುವ ಉಲ್ಲೇಖವಿದೆ ಎಂಬ ಆರೋಪ ಕೇಳಿ ಬಂದಿತು. ಸುಮಾರು ₹ 650 ಕೋಟಿ ನೀಡಿರುವ ಲೆಕ್ಕ ಈ ದಿನಚರಿಯಲ್ಲಿತ್ತು ಎಂಬ ಆರೋಪವನ್ನು ಬಿಜೆಪಿ ಮಾಡಿತ್ತು. 

* ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಅವರ ಆಪ್ತರ ಮನೆಗಳು, ಕಚೇರಿ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ದೇಶದಲ್ಲೇ ಸಂಚಲನ ಮೂಡಿಸಿತ್ತು. ಅಪಾರ ಪ್ರಮಾಣದಲ್ಲಿ ತೆರಿಗೆ ವಂಚನೆ, ಲೆಕ್ಕ ಇಲ್ಲದ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ವಿರೋಧ ಪಕ್ಷಗಳಿಂದ ಕೇಳಿ ಬಂದಿತು.

* ಸಮಾಜ ಕಲ್ಯಾಣ ಇಲಾಖೆ 2017– 18ರಲ್ಲಿ 1.50 ಲಕ್ಷ ವಿದ್ಯಾರ್ಥಿಗಳಿಗೆ ₹ 300 ಕೋಟಿ ವೆಚ್ಚದಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿತ್ತು. ಇದಕ್ಕೆ ಕ್ರಮಬದ್ಧ ಟೆಂಡರ್‌ ಪ್ರಕ್ರಿಯೆ ಇಲ್ಲದೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇಲಾಖೆಯ ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹಾಗೂ ಸಚಿವಾಲಯದ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು, ನಿಯೋಜನೆ ಮೇಲೆ ಇರುವ ಅಧಿಕಾರಿಗಳ ಮೂಲಕ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಈ ಆರೋಪದ ಬಗ್ಗೆ ಸದನ ಸಮಿತಿ ವಿಚಾರಣೆ ನಡೆಸಿತು.

* ಮರಳು ಗಣಿಗಾರಿಕೆ ಪರವಾನಗಿ ನೀಡಿಕೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ, ಸಚಿವ ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ವಿರುದ್ಧ ದೂರು ದಾಖಲಾಗಿತ್ತು. ರಾಜ್ಯದ ಹಲವೆಡೆ ಮರಳು ಮಾಫಿಯಾವು ಅಧಿಕಾರಿಗಳನ್ನು ಹೆದರಿಸಿ, ಹಲ್ಲೆ ನಡೆಸಿದ ಪ್ರಕರಣಗಳೂ ವರದಿ ಆಗಿದ್ದವು.

* ವಿಧಾನಸೌಧ ಮತ್ತು ಶಾಸಕರ ಕೊಠಡಿಗಳ ನವೀಕರಣದಲ್ಲಿ ಅಕ್ರಮ ನಡೆದಿದೆ, ಸ್ಪೀಕರ್‌ಗೆ ಪರಮಾಧಿಕಾರ ಇದೆ ಎಂಬ ಕಾರಣ ಮುಂದಿಟ್ಟುಕೊಂಡು 90 ಸಿಬ್ಬಂದಿ ನೇಮಕದ ಬದಲಿಗೆ 160ಕ್ಕೂ ಹೆಚ್ಚು ಸಿಬ್ಬಂದಿಯ ನೇಮಕ ಆಗಿದೆ, ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ನೇಮಕಾತಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಬಿಎಸ್‌ವೈ ವಿರುದ್ಧ ದೂರು ದಾಖಲು

* ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 257 ಎಕರೆ 20.5 ಗುಂಟೆ ಡಿನೋಟಿಫಿಕೇಶನ್‌ಗೆ ಆದೇಶ ನೀಡಿದ್ದರು ಎಂಬ ದೂರಿನ ಮೇರೆಗೆ, ಎಸಿಬಿ ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್‌ ಹಾಕಿತ್ತು. ಈ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತು.

* ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಶಾಸಕ ಆರ್‌.ಅಶೋಕ್ ಅವರು, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ್ದರು ಎಂಬ ಆರೋಪ ಬಂದಿತ್ತು. ಅವರ ವಿರುದ್ಧ ಎಸಿಬಿ ಎಫ್‌ಐಆರ್‌ ದಾಖಲಿಸಿತ್ತು. ಇದರ ತನಿಖೆಗೆ ಅಶೋಕ್‌ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

* ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಂತಕಲ್‌ ಮೈನಿಂಗ್‌ ಕಂಪನಿಯಿಂದ ಲಂಚ ಪಡೆದು ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಜಂತಕಲ್‌ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ದೂರು ಸಲ್ಲಿಕೆಯಾಗಿತ್ತು. ಈ ಹಿಂದೆ ಈ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ಮರು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಹೀಗಾಗಿ, ಲೋಕಾಯುಕ್ತ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು.

* ಬಿಜೆಪಿ ಅವಧಿಯಲ್ಲಿ ನಡೆದಿದ್ದ ಕರ್ನಾಟಕ ಗೃಹ ಮಂಡಳಿ ಭೂ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ನಾಯಕ ಜಿ.ಟಿ.ದೇವೇಗೌಡ ಅವರ ಪುತ್ರನ ಮೇಲೆ ಎಸಿಬಿ ಎಫ್‌ಐಆರ್‌ ದಾಖಲು ಮಾಡಿತ್ತು.

ಬೇರು ಸಮೇತ ಕಿತ್ತು ಹಾಕಬೇಕು

ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಒಂದು ಶಾಪ. ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಎಲ್ಲರೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಜಾಣ ಕಿವುಡರಾಗುತ್ತಾರೆ. ಈ ಪ್ರವೃತ್ತಿ ಹೋಗಲಾಡಿಸುವ ಶಕ್ತಿ ಇರುವುದು ಜನಸಾಮಾನ್ಯರಲ್ಲಿ. ಜನತೆ ರಾಜಕೀಯ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. ರಾಜಕೀಯ ಪಕ್ಷಗಳೂ ಭ್ರಷ್ಟ ರಾಜಕಾರಣಿಗಳನ್ನು ಗುರುತಿಸಿ ಕೈಬಿಡುವುದು ಸೂಕ್ತ.

ವಿ.ಎಸ್‌.ಉಗ್ರಪ್ಪ, ಕಾಂಗ್ರೆಸ್‌ ಮುಖಂಡ

ಭ್ರಷ್ಟರ ಪೋಷಣೆಯೇ ಸರ್ಕಾರದ ಹೆಗ್ಗಳಿಕೆ

ರಾಜಕೀಯ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. ಆದರೆ, ಭ್ರಷ್ಟಾಚಾರ ವಿರೋಧಿಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮಾಡಿದ್ದೇನು? ಭ್ರಷ್ಟಾಚಾರ ಬಯಲಿಗೆ ಬರಬಾರದು ಎಂಬ ಕಾರಣಕ್ಕೇ ಲೋಕಾಯುಕ್ತವನ್ನು ದುರ್ಬಲಗೊಳಿಸಿದರು. ವಿರೋಧಿಗಳನ್ನು ಬಗ್ಗುಬಡಿಯಲೆಂದೇ ಎಸಿಬಿಗೆ ಜೀವ ನೀಡಲಾಯಿತು. ನೈಸ್‌ ಅಕ್ರಮಗಳ ಬಗ್ಗೆ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ವರದಿ ನೀಡಿತು. ಆದರೆ, ಅದನ್ನು ಮೂಲೆಗುಂಪು ಮಾಡಿದ್ದೂ ಅಲ್ಲದೆ, ಆಶೋಕ್‌ ಖೇಣಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಗಣಿ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ಆನಂದ ಸಿಂಗ್‌ ಮತ್ತು ನಾಗೇಂದ್ರಬಾಬು ಅವರನ್ನೂ ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್‌ ಮುಖಂಡ

ಯೋಗ್ಯರ ಆಯ್ಕೆಯೇ ಪರಿಹಾರ

ರಾಜಕೀಯದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳಬೇಕಾದರೆ, ಪ್ರಾಮಾಣಿಕರು ಮತ್ತು ಯೋಗ್ಯರ ಆಯ್ಕೆ ಆಗಬೇಕು. ಭ್ರಷ್ಟರು ಮತ್ತು ಅಪ್ರಾಮಾಣಿಕರನ್ನು ಮತದಾರರು ದೂರ ಇಟ್ಟರೆ, ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ಶಾಸಕರು ಸಮಾಜ ಮತ್ತು ಸಮಷ್ಟಿಯ ಹಿತದಿಂದ ಶಾಸನ ರಚಿಸುವಂತಾಗಬೇಕು. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಎಲ್ಲಿಂದಲೋ ಹಣ ತಂದು, ಖರ್ಚು ಮಾಡಿ ಗೆಲ್ಲುತ್ತಾರೆ. ಗೆದ್ದ ಬಳಿಕ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಚುನಾವಣೆಯಲ್ಲಿ ಹಣದ ಬಳಕೆಯೇ ಇಲ್ಲದ ಸ್ಥಿತಿಗೆ ತಲುಪಿದರೆ ಮಾತ್ರ ಯೋಗ್ಯರು, ಪ್ರಾಮಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯ.

ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡ

ಪ್ರತಿಕ್ರಿಯಿಸಿ (+)