ಶನಿವಾರ, ಡಿಸೆಂಬರ್ 7, 2019
16 °C

ಹಿಂದೂ ಧರ್ಮಕ್ಕೆ ಕಳಂಕ ತಂದ ಕಾಂಗ್ರೆಸ್‌: ಶಾ ಟೀಕೆ

Published:
Updated:
ಹಿಂದೂ ಧರ್ಮಕ್ಕೆ ಕಳಂಕ ತಂದ ಕಾಂಗ್ರೆಸ್‌: ಶಾ ಟೀಕೆ

ಬೆಂಗಳೂರು: ಹಿಂದೂ ಧರ್ಮಕ್ಕೆ ಭಯೋತ್ಪಾದನೆಯ ಕಳಂಕ ಅಂಟಿಸಿದ ಕಾಂಗ್ರೆಸ್‌ ಅನ್ನು ಚುನಾವಣೆಯಲ್ಲಿ ಜನ ಸೋಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

‘ಹಿಂದೂ ಭಯೋತ್ಪಾದನೆ– ಕೇಸರಿ ಭಯೋತ್ಪಾದನೆ’ ಎಂದು ಹೇಳುವ ಮೂಲಕ ಹಿಂದೂ ಧರ್ಮದ ಪಾವಿತ್ರ್ಯವನ್ನು ಕಾಂಗ್ರೆಸ್‌ ನಾಯಕರು ಹಾಳು ಮಾಡಿದರು. ಇದು ರಾಜ್ಯದಲ್ಲಿ ಚುನಾವಣೆಯ ಪ್ರಮುಖ ವಿಷಯ ಆಗಲಿದೆ ಎಂದು ಅವರು, ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ತಿಳಿಸಿದರು.

ಮೆಕ್ಕಾ ಮಸೀದಿ ಬಾಂಬ್‌ ಸ್ಫೋಟದ ಆರೋಪಿಗಳನ್ನು ನಿರ್ದೋಷಿಗಳೆಂದು ನ್ಯಾಯಾಲಯ ಬಿಡುಗಡೆ ಮಾಡಿದೆ. ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷ  ಹಿಂದೂ ಧರ್ಮವನ್ನು ಎಳೆದು ತಂದಿತು. ಧರ್ಮ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದ ಕಾರಣಕ್ಕೆ ಕರ್ನಾಟಕದ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಮನೆ ಬಾಗಿಲಿಗೆ ಮತ ಕೇಳಲು ಬರುವ ಕಾಂಗ್ರೆಸ್ ನಾಯಕರನ್ನು ಈ ಬಗ್ಗೆ ಪ್ರಶ್ನಿಸಬೇಕು ಎಂದು ಶಾ ಹೇಳಿದರು.

ಬಿಜೆಪಿಯ ವಿಜಯರಥ ಕರ್ನಾಟಕ ತಲುಪಿದೆ. ಇಲ್ಲಿ ಪಕ್ಷ ವಿಜಯ ಸಾಧಿಸಲಿದೆ. ಇದರಿಂದ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಮತ್ತು ತೆಲಂಗಾಣಕ್ಕೆ ದಾರಿ ಮಾಡಲಿದೆ ಎಂದು ಶಾ ತಿಳಿಸಿದರು.

14ನೇ ಹಣಕಾಸು ಆಯೋಗ ರಾಜ್ಯಕ್ಕೆ ₹ 2.19 ಲಕ್ಷ ಕೋಟಿ ನೀಡಿತ್ತು. ಅಲ್ಲದೆ, ಹೆಚ್ಚುವರಿಯಾಗಿ ₹ 79,000 ಕೋಟಿ ನೀಡಿದೆ. ಈ ಹಣ ಎಲ್ಲಿಗೆ ಹೋಗಿದೆ? ಈ ಹಣವನ್ನು ಭ್ರಷ್ಟ ಸರ್ಕಾರ ನುಂಗಿ ಹಾಕಿರಬೇಕು ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)