ಭಾನುವಾರ, ಡಿಸೆಂಬರ್ 15, 2019
19 °C

ಕಾಂಗ್ರೆಸ್‌–ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌–ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರು

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ಮೂವರು ಹಾಲಿ ಮತ್ತು ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್‌ ತೊರೆಯಲು ತೀರ್ಮಾನಿಸಿದ್ದಾರೆ.

ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸೋಮಣ್ಣ ಬೇವಿನಮರದ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಶಾಸಕರಾದ ಜಿ.ಎಚ್. ಶ್ರೀನಿವಾಸ್ (ತರೀಕೆರೆ) ಜೆಡಿಎಸ್‌ ಸೇರಿದ್ದಾರೆ. ಕಿತ್ತೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಇನ್ನೂ ಟಿಕೆಟ್‌ ಘೋಷಣೆ ಮಾಡಿಲ್ಲ. ಆದರೆ, ಅನಾರೋಗ್ಯದ ಕಾರಣದಿಂದ ಅವಕಾಶ ನಿರಾಕರಿಸಲಾಗಿದೆ ಎಂಬ ಮಾಹಿತಿ ಬಂದ ಕಾರಣ, ಅಲ್ಲಿನ ಕಾಂಗ್ರೆಸ್‌ ಶಾಸಕ ಡಿ.ಬಿ. ಇನಾಮದಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಜಿ ಸಚಿವ ಅಂಜನಾ ಮೂರ್ತಿ (ನೆಲಮಂಗಲ), ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್ (ಪುಲಿಕೇಶಿ ನಗರ) ಪಕ್ಷ ತೊರೆಯಲು ಅಣಿಯಾಗಿದ್ದಾರೆ.

ಸೋಮಣ್ಣ ಬೇವಿನಮರದ ಅವರ ಸದಸ್ಯತ್ವದ ಅವಧಿ ಜೂನ್‌ವರೆಗೆ ಇತ್ತು. ಅವರು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ. ‘ಬಿ.ಎಸ್‌.ಯಡಿಯೂರಪ್ಪ ಹಾಗೂ ಬೊಮ್ಮಾಯಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ ಸಿಗದಿರುವ ಕಾಂಗ್ರೆಸ್‌ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಗುರುವಾರ ಕಮಲ ಪಕ್ಷ ಸೇರಲಿದ್ದಾರೆ. ಈ ಕ್ಷೇತ್ರದಲ್ಲಿ ಬಿ.ನಾಗೇಂದ್ರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಗೋಪಾಲಕೃಷ್ಣ ಅವರನ್ನು ಕೂಡ್ಲಿಗಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ಉದ್ದೇಶಿಸಿದೆ.

ಈ ಸಂಬಂಧ ಸಂಸದ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಸೋಮವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಹೋದರ ಎನ್‌.ವೈ.ಹನುಮಂತಪ್ಪ ಅವರಿಗೆ ಬಳ್ಳಾರಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡುಬರುತ್ತೇವೆ. ಕೂಡ್ಲಿಗಿಯಲ್ಲಿ ನಿಮ್ಮನ್ನು ದಡ ಮುಟ್ಟಿಸುತ್ತೇವೆ’ ಎಂದು ಈ ವೇಳೆ ಭರವಸೆ ನೀಡಿದ್ದರು ಎಂದು ಗೊತ್ತಾಗಿದೆ.

ಪ್ರತಿಕ್ರಿಯಿಸಿ (+)