ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣತಂತ್ರಕ್ಕೆ ಗುಪ್ತದಳದ ಮಾಹಿತಿ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪ್ರತಿಷ್ಠಾಪಿಸಲು ದೃಢ ಸಂಕಲ್ಪ ಮಾಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರದ ಗುಪ್ತಚರ ವಿಭಾಗಗಳ ಮಾಹಿತಿಯನ್ನು ಮುಂದಿಟ್ಟುಕೊಂಡು ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

ರಾಜ್ಯದ ಚುನಾವಣಾ ಸ್ಥಿತಿಗತಿಯ ಬಗ್ಗೆ ಕೇಂದ್ರ ಗುಪ್ತದಳವಲ್ಲದೆ, ರಿಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ನಿಂದಲೂ (ರಾ) ಮಾಹಿತಿ ಪಡೆದುಕೊಂಡಿರುವ ಶಾ, ಅದಕ್ಕೆ ಪೂರಕವಾಗಿ ಕಾರ್ಯತಂತ್ರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಲ್ಲದೆ, ಆರ್‌ಎಸ್‌ಎಸ್‌ ಸಮೀಕ್ಷೆ ಮತ್ತು ತಾವೇ ಸ್ವತಂತ್ರವಾಗಿ ಸಮೀಕ್ಷೆ ಮಾಡಿಸಿ ಪಡೆದಿರುವ ಮಾಹಿತಿಗಳನ್ನು ಕ್ರೋಡೀಕರಿಸಿ, ಆಗಬೇಕಾಗಿರುವ ಸಣ್ಣ ಪುಟ್ಟ ಬದಲಾವಣೆಗಳ ಬಗ್ಗೆ ಗಮನಹರಿಸಿದ್ದಾರೆ. ಇದಕ್ಕೆ ಪೂರಕವಾಗಿ, ಉತ್ತರ ಪ್ರದೇಶ, ಗುಜರಾತ್, ತ್ರಿಪುರಾ ರಾಜ್ಯಗಳ ಗೆಲುವಿಗೆ ಕಾರಣವಾದ ಚುನಾವಣಾ ಪರಿಣತರ ತಂಡವನ್ನು ಪೂರ್ಣ ಪ್ರಮಾಣದಲ್ಲಿ ಕಣಕ್ಕಿಳಿಸಿದ್ದಾರೆ.

ಬೆಂಗಳೂರಿನಲ್ಲೇ ಠಿಕಾಣಿ: ಚುನಾವಣೆ ಮುಗಿಯುವವರೆಗೆ ಶಾ ನಗರದಲ್ಲೇ ಠಿಕಾಣಿ ಹೂಡಲಿದ್ದಾರೆ. ಮತದಾನದ ದಿನದವರೆಗೂ ಅವರು ಪೇಜ್‌ ಪ್ರಮುಖ್‌ ಮತ್ತು ಶಕ್ತಿ ಕೇಂದ್ರದ ಪ್ರಮುಖರ ಜತೆ ನೇರ ಸಂಪರ್ಕದಲ್ಲಿದ್ದು, ಮತದಾರರ ಮನವೊಲಿಸುವ ಬಗ್ಗೆ ಮಾರ್ಗದರ್ಶನ ನೀಡುವರು. ಪ್ರತಿನಿತ್ಯ ರಾಜ್ಯದ ಯಾವುದೇ ಭಾಗದ ಕಾರ್ಯಕರ್ತರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ ಮತ್ತು ಇತರ ತಾರಾ ಪ್ರಚಾರಕರು ಬಹಿರಂಗ ಪ್ರಚಾರದಲ್ಲಿ ತೊಡಗಿಕೊಂಡರೆ, ಶಾ ಮತ್ತು ಅವರ ಚುನಾವಣಾ ಕಾರ್ಯತಂತ್ರದ 11 ಪ್ರಮುಖ ನಾಯಕರು ನೇಪಥ್ಯದಲ್ಲಿದ್ದು ಕೆಲಸ ಮಾಡಲಿದ್ದಾರೆ.

ಈ ನಾಯಕರನ್ನು ವಿವಿಧ ಪ್ರದೇಶಗಳಿಗೆ ಉಸ್ತುವಾರಿಯನ್ನಾಗಿಸಲಾಗಿದೆ. ಹೈದರಾಬಾದ್‌ ಕರ್ನಾಟಕ– ರಾಮ್‌ ಮಾಧವ್‌, ಸ್ವತಂತ್ರದೇವ್‌ ಸಿಂಗ್‌, ಮುಂಬೈ ಕರ್ನಾಟಕ– ಭೂಪೇಂದ್ರ ಯಾದವ್‌, ಚಂದ್ರಕಾಂತ ಪಾಟೀಲ, ಮಧ್ಯ ಕರ್ನಾಟಕ– ಮಂಗಲಪಾಂಡೆ, ಹಳೆ ಮೈಸೂರು ಪ್ರದೇಶ– ಸತೀಶ್‌ ಉಪಾಧ್ಯ, ಸಿ.ಆರ್‌.ಪಾಟೀಲ, ಕರಾವಳಿ ಕರ್ನಾಟಕ– ಓಂ ಪ್ರಕಾಶ್‌ ಮಾಥೂರ್, ರಾಮದೇವ ಸಿಂಗ್‌, ಬೆಂಗಳೂರು– ಆಶಿಶ್‌ ಶೆಲಾರ್‌ ಮತ್ತು ಗೋಪಾಲ ಅವರು ಕಾರ್ಯ ಆರಂಭಿಸಿದ್ದಾರೆ.

ಈ ತಂಡಗಳು ಸ್ಥಳೀಯ ಮಟ್ಟದ ವರದಿಯನ್ನು ಪಡೆದು ಪ್ರತ್ಯೇಕವಾಗಿ ಕಾರ್ಯತಂತ್ರ ರೂಪಿಸುತ್ತವೆ. ಅಭ್ಯರ್ಥಿಗಳು, ಕಾರ್ಯಕರ್ತರ ಮಧ್ಯೆ ಸಮನ್ವಯ ಸಾಧಿಸುವುದರ ಜೊತೆಗೆ ಮತದಾರರೊಂದಿಗೆ ಸಂಪರ್ಕ ಬೆಳೆಸುವ ಕಾರ್ಯದಲ್ಲಿ ಶಾ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮತದಾರರ ಪಟ್ಟಿಗಳನ್ನು ಎ, ಬಿ, ಸಿ ಎಂದು ವರ್ಗೀಕರಣ ಮಾಡಿದ್ದು, ಎ ವರ್ಗ ಬಿಜೆಪಿಗೆ ಮತದಾನ ಮಾಡುವವರು, ಬಿ ವರ್ಗ ಯಾವ ಪಕ್ಷಕ್ಕೆ ಹಾಕಬೇಕು ಎಂದು ಗೊಂದಲದಲ್ಲಿ ಇರುವವರು, ಸಿ ವರ್ಗ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಮತದಾರರು. ಎ ಮತ್ತು ಬಿ ಪಕ್ಕಾ ಮಾಡಿಕೊಂಡು, ಸಿ ವರ್ಗದಲ್ಲಿರುವವರನ್ನು ಸೆಳೆಯುವುದಕ್ಕೆ ಪ್ರಯತ್ನ ನಡೆಸುವುದು ಶಾ ಅವರ ಮೂಲ ಕಾರ್ಯತಂತ್ರವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಮೋದಿ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಇದೇ 29ರಿಂದ ರಾಜ್ಯದಲ್ಲಿ ಚುನಾವಣಾ ಪ್ರವಾಸ ನಡೆಸಲಿದ್ದಾರೆ.

* 29– ರಾಯಚೂರಿನಲ್ಲಿ ಪ್ರಚಾರ ಭಾಷಣ

* ಮೇ 1– ಬಳ್ಳಾರಿ, ಬೆಳಗಾವಿಯಲ್ಲಿ ರ‍್ಯಾಲಿ

* ಮೇ 3– ಚಾಮರಾಜನಗರ, ಉಡುಪಿಯಲ್ಲಿ ಮತ ಯಾಚನೆ ಸಾರ್ವಜನಿಕ ಸಮಾರಂಭ:

* ಮೇ 5– ಕಲಬುರ್ಗಿ, ಹುಬ್ಬಳ್ಳಿ

*ಮೇ 6– ಶಿವಮೊಗ್ಗ, ತುಮಕೂರು

* ಮೇ 7– ಮಂಗಳೂರು, ಬೆಂಗಳೂರು

* ಒಟ್ಟು 20 ಪ್ರಚಾರ ಸಭೆಗಳಲ್ಲಿ ಭಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT