ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಣಾಳಿಕೆಗೆ ಸಾಹಿತಿಗಳ ಸಲಹೆ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರುನಾಡ ಜಾಗೃತಿ ಯಾತ್ರೆ’ ಹೆಸರಿನಲ್ಲಿ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬುಧವಾರ ಬಸವಣ್ಣನವರ ಜಪ ಮಾಡುವುದರ ಜತೆಗೆ, ಪಕ್ಷದ ಪ್ರಣಾಳಿಕೆ ರಚನೆ ಸಂಬಂಧ ಸಾಹಿತಿಗಳೊಂದಿಗೆ ಚರ್ಚೆ ನಡೆಸಿ ಸಲಹೆಗಳನ್ನು ಪಡೆದರು.

‘ಬಸವ ಜಯಂತಿ’ ಪ್ರಯುಕ್ತ ಬುಧವಾರ ಬೆಳಿಗ್ಗೆ ಅವರು ಚಾಲುಕ್ಯ ವೃತ್ತದ ಬಸವೇಶ್ವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಮೊದಲು ಕ್ರೇನ್ ಹತ್ತಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾದರು. ಆದರೆ, ಶಾ ಹಾಕಿದ ಹಾರ ಜಾರಿ ಕೆಳಬಿದ್ದಿತು. ಯಡಿಯೂರಪ್ಪ ಹಾಕಿದ ಹಾರ ಸೀದಾ ಬಸವಣ್ಣನವರ ಕೊರಳು ಸೇರಿತು. ಆಗ ಅವರು ಶಾ ಕಡೆ ತಿರುಗಿ ಮಂದಹಾಸ ಬೀರಿದರು.

ಇದೇ ವೇಳೆ ‘ಪ್ರತ್ಯೇಕ ಲಿಂಗಾಯತ ಧರ್ಮ ರಚನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಅಮಿತ್ ಶಾ ಸ್ಪಷ್ಟಪಡಿಸಬೇಕು’ ಎಂದು ಘೋಷಣೆ ಕೂಗಿದ ಜಾಗತಿಕ ಲಿಂಗಾಯತ ಮಹಾಸಭಾದ ಕೆಲವು ಕಾರ್ಯಕರ್ತರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದರು.

ಸಾಹಿತಿಗಳ ಸಲಹೆ: ಬಳಿಕ ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಮನೆಗೆ ತೆರಳಿದ ಶಾ ನೇತೃತ್ವದ ನಿಯೋಗ, ಪ್ರಣಾಳಿಕೆ ರಚನೆಗೆ ಸಲಹೆ ನೀಡುವಂತೆ ಕೋರಿತು.

‘ನಾಡು–ನುಡಿ, ನೆಲ–ಜಲ, ಗಡಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಬೇಕು. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ. ಹೀಗಾಗಿ, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡಬಾರದು’ ಎಂದು ಚಿದಾನಂದಮೂರ್ತಿ ಒತ್ತಾಯಿಸಿದರು.

‘ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಬೆಳಗಾವಿ ಗಡಿ ವಿವಾದ ಬಗೆಹರಿಸಬೇಕು. ಬ್ರಿಟಿಷರು ಬಿಟ್ಟು ಹೋಗಿರುವ ‘ಇಂಡಿಯಾ’ ಎಂಬ ಪದವನ್ನು ಕೈಬಿಟ್ಟು, ಆ ಜಾಗದಲ್ಲಿ ‘ಭಾರತ್’ ಪದವನ್ನು ಬಳಸಬೇಕು. ಮತಾಂತರ ತಡೆಯಬೇಕು. ಗೋ ರಕ್ಷಣೆ ಕುರಿತು ವಿಶೇಷ ಕಾನೂನು ರಚಿಸಬೇಕು.’

‘ಬಿಜೆಪಿ ಮೇಲ್ವರ್ಗದವರ ಪಕ್ಷ ಎಂದು ಗುರುತಿಸಿಕೊಂಡಿದೆ. ಇದು ಬದಲಾಗಬೇಕು. ಆದರೂ, ಸ್ವಲ್ಪ ಮಟ್ಟಿಗೆ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಪಕ್ಷ ಇದಾಗಿದೆ. ನನ್ನ ಸಿದ್ಧಾಂತಗಳಿಗೂ, ಬಿಜೆಪಿಯ ನಿಲುವುಗಳಿಗೂ ಹೋಲಿಕೆ ಇರುವುದರಿಂದ ನಾನು ಪಕ್ಷದ ಜೊತೆಗಿದ್ದೇನೆ’ ಎಂದು ಹೇಳಿದರು.

ಆ ಬಳಿಕ ನಿಯೋಗ ರಾಜರಾಜೇಶ್ವರಿ ನಗರದಲ್ಲಿರುವ ಕವಿ ಸಿದ್ಧಲಿಂಗಯ್ಯ ಅವರ ಮನೆಗೆ ತೆರಳಿತು. ‘ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವಂಥ ಯಾವುದೇ ತಿದ್ದುಪಡಿ ತರಬಾರದು. ಬಡ್ತಿ ಮೀಸಲಾತಿ ರದ್ದತಿಯಿಂದ 20 ಸಾವಿರ ದಲಿತ ಅಧಿಕಾರಿಗಳಿಗೆ ಹಿಂಬಡ್ತಿಯಾಗುತ್ತದೆ. ಹೀಗಾಗಿ, ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಕೇಂದ್ರ ಹೋರಾಟ ಮಾಡಬೇಕು’ ಎಂದು ಸಿದ್ಧಲಿಂಗಯ್ಯ ಮನವಿ ಮಾಡಿದರು.

ಬ್ಯಾಂಕ್ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಖಾಸಗಿ ಕ್ಷೇತ್ರಗಳಲ್ಲೂ ದಲಿತರಿಗೆ ಮೀಸಲಾತಿ ಕಲ್ಪಿಸಬೇಕು ಎಂಬಂತಹ ದಲಿತರ ಹಲವಾರು ಸಮಸ್ಯೆಗಳನ್ನು ಅವರು ಶಾ ಗಮನಕ್ಕೆ ತಂದರು.

‘ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ದಲಿತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದೂ ಮನವಿ ಮಾಡಿದರು. ಕೊನೆಗೆ ಅಂಬೇಡ್ಕರ್ ಜೀವನ ಚರಿತ್ರೆಯ ಪುಸ್ತಕ ಹಾಗೂ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಶಾ ಅವರನ್ನು ಬೀಳ್ಕೊಟ್ಟರು.

ಸಲಹಾ ಪೆಟ್ಟಿಗೆಗೆ ಪೊಲೀಸರ ತಡೆ

ಬಿಜೆಪಿ ಕಾರ್ಯಕರ್ತರು ‘ಜನಪರ ಶಕ್ತಿ’ ಎಂದು ಬರೆದಿರುವ ಸಲಹಾ ಪೆಟ್ಟಿಗೆಯೊಂದನ್ನು ಸಿದ್ಧಲಿಂಗಯ್ಯ ಅವರ ಮನೆಯೊಳಗೆ ತೆಗೆದುಕೊಂಡು ಹೋಗಲು ಮುಂದಾದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು, ‘ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೆ ಯಾವುದೇ ಪೆಟ್ಟಿಗೆಯನ್ನು ಒಳಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ’ ಎಂದರು. ಕೊನೆಗೆ, ಸಿದ್ಧಲಿಂಗಯ್ಯ ಅವರೇ ಮನೆಯಿಂದ ಹೊರಬಂದು ತಮ್ಮ ಸಲಹೆಗಳ ಪಟ್ಟಿಯನ್ನು ಆ ಪೆಟ್ಟಿಗೆಗೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT