ಭಾನುವಾರ, ಡಿಸೆಂಬರ್ 15, 2019
25 °C
ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಕ್ಕೆ ಕ್ಷಮೆ ಯಾಚನೆ

ಮಾಧ್ಯಮಗಳಿಗೆ ತಲಾ ₹ 10 ಲಕ್ಷ ದಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಮಾಧ್ಯಮಗಳಿಗೆ ತಲಾ ₹ 10 ಲಕ್ಷ ದಂಡ

ನವದೆಹಲಿ: ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಹೆಸರು ಹಾಗೂ ಚಿತ್ರವನ್ನು ಬಹಿರಂಗಪಡಿಸಿದ್ದ 12 ಮಾಧ್ಯಮ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ತಲಾ ₹ 10 ಲಕ್ಷ ದಂಡ ವಿಧಿಸಿದೆ.

ಸಂತ್ರಸ್ತೆಯ ವೈಯಕ್ತಿಕ ವಿವರಗಳು ಬಹಿರಂಗವಾದದ್ದನ್ನು ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ.ಹರಿ ಶಂಕರ್ ಅವರಿದ್ದ ಪೀಠವು ಗಂಭೀರವಾಗಿ ಪರಿಗಣಿಸಿತ್ತು. ಈ ಸಂಬಂಧ 12 ಮಾಧ್ಯಮ ಸಂಸ್ಥೆಗಳ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೆ ಅವುಗಳಿಗೆ ನೋಟಿಸನ್ನೂ ಜಾರಿ ಮಾಡಿತ್ತು.

ಬುಧವಾರ ಪ್ರಕರಣದ ಅಂತಿಮ ವಿಚಾರಣೆ ನಡೆದಿದ್ದು, 12ರಲ್ಲಿ 9 ಮಾಧ್ಯಮ ಸಂಸ್ಥೆಗಳ ಪರ ವಕೀಲರು ಹಾಜರಿದ್ದರು. ‘ಕಾನೂನನ್ನು ಅರ್ಥಮಾಡಿಕೊಳ್ಳುವಲ್ಲಿ ಆದ ಲೋಪದಿಂದ ಈ ತಪ್ಪು ಆಗಿದೆ. ಅಲ್ಲದೆ ಸಂತ್ರಸ್ತ ಬಾಲಕಿ ಮೃತಪಟ್ಟಿದ್ದರಿಂದ ಆಕೆಯ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ. ಈ ಪ್ರಮಾದಕ್ಕಾಗಿ ಕ್ಷಮೆ ಯಾಚಿಸುತ್ತೇವೆ’ ಎಂದು ಮಾಧ್ಯಮಗಳ ಪರ ವಕೀಲರು ವಿವರಿಸಿದರು.

ಅವರ ಕ್ಷಮಾಪಣೆಯನ್ನು ಒಪ್ಪಿದ ಪೀಠವು, ದಂಡವನ್ನಷ್ಟೇ ವಿಧಿಸಿತು. ದಂಡದ ಮೊತ್ತವನ್ನು ಜಮ್ಮು ಮತ್ತು ಕಾಶ್ಮೀರದ ಸಂತ್ರಸ್ತರ ನಿಧಿಗೆ ನೀಡುವಂತೆ ಸೂಚಿಸಿತು.

‘ಮಕ್ಕಳ ಮೇಲಿನ ಅತ್ಯಾಚಾರ ನಾಚಿಕೆಗೇಡು’

ಕಕರಿಯಾಲ್ (ಜಮ್ಮು ಮತ್ತು ಕಾಶ್ಮೀರ):
‘ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅತ್ಯಂತ ಘೋರವಾದದ್ದು ಮತ್ತು ನಾಚಿಕೆಗೇಡಿನದ್ದು’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ನಾವು ಎಂತಹ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ ಎಂಬುದನ್ನು ಅವಲೋಕಿಸುವ ಅಗತ್ಯತೆ ಇದೆ’ ಎಂದು ಪ್ರತಿಪಾದಿಸಿದ್ದಾರೆ.

‘ಕಠುವಾ ಅತ್ಯಾಚಾರದ ಕ್ರೌರ್ಯವನ್ನು ನಾವ್ಯಾರೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ದೇಶದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡು. ನಾವು ಎತ್ತ ಸಾಗುತ್ತಿದ್ದೇವೆ, ನಮ್ಮ ಮುಂದಿನ ತಲೆಮಾರಿಗೆ ಏನನ್ನು ನೀಡುತ್ತಿದ್ದೇವೆ ಎಂದು ಗಂಭೀರವಾಗಿ ಚಿಂತಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಸಂವಿಧಾನದಲ್ಲಿ ಕೊಡಮಾಡಿರುವ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನಮ್ಮ ತಾಯಿ, ತಂಗಿ ಮತ್ತು ಮಗಳು ಮುಕ್ತವಾಗಿ ಅನುಭವಿಸುವಂತಹ ಸಮಾಜವನ್ನು ನಾವು ಸೃಷ್ಟಿಸಿದ್ದೇವಾ’ ಎಂದು ಅವರು ಪ್ರಶ್ನಿಸಿದ್ದಾರೆ.

ಆಕ್ರೋಶದಿಂದ ಪ್ರೇರಣೆ ಪಡೆದು ದೂರು

ಮುಜಾಪ್ಫರ್‌ನಗರ:
ಯುವತಿಯೊಬ್ಬರನ್ನು ಎರಡು ತಿಂಗಳ ಕಾಲ ಕೂಡಿ ಹಾಕಿ ಅತ್ಯಾಚಾರ ನಡೆಸಿರುವ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಆರೋಪಿ ಮತ್ತು ಆತನ ಚಿಕ್ಕಪ್ಪ, ಯುವತಿಯನ್ನು ತಮ್ಮ ಮನೆಯಲ್ಲಿ ಎರಡು ತಿಂಗಳು ಕೂಡಿ ಹಾಕಿದ್ದರು. ಆ ಅವಧಿಯಲ್ಲಿ ಇಬ್ಬರೂ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಫೆಬ್ರುವರಿ 1ರಂದು ಆ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ಯಾಚಾರಗಳ ವಿರುದ್ಧ ದೇಶದಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶದಿಂದ ಪ್ರೇರಣೆ ಪಡೆದು ದೂರು ನೀಡಿದ್ದೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬನನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

*

ಮಗುವಿನ ಮುಖದಲ್ಲಿರುವ ನಗುವೇ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಸಂಗತಿ. ಆ ನಗುವನ್ನು ಉಳಿಸುವ ಮತ್ತು ನಮ್ಮ ಹೆಣ್ಣುಮಕ್ಕಳಿಗೆ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರದ್ದು

–ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಪ್ರತಿಕ್ರಿಯಿಸಿ (+)