ಸೋಮವಾರ, ಜುಲೈ 13, 2020
25 °C
30 ವರ್ಷದ ಹಿಂದೆ ನವಜೋತ್‌ ಸಿಂಗ್‌ ಸಿಧು ನಡೆಸಿದ ಹಲ್ಲೆ ಪ್ರಕರಣ

ತೀರ್ಪು ಕಾಯ್ದಿಟ್ಟ ಸುಪ್ರೀಂಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ತೀರ್ಪು ಕಾಯ್ದಿಟ್ಟ ಸುಪ್ರೀಂಕೋರ್ಟ್‌

ನವದೆಹಲಿ: ಮೂವತ್ತು ವರ್ಷದ ಹಿಂದೆ ನಡು ರಸ್ತೆಯಲ್ಲಿ ನಡೆದ ಗಲಾಟೆ ಮತ್ತು ಮಾರಣಾಂತಿಕ ಹಲ್ಲೆ ಸಂಬಂಧ ಹೈಕೋರ್ಟ್ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಮುಗಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

1988ರಲ್ಲಿ ಪಂಜಾಬ್‌ನ ಪಟಿಯಾಲಾದ ರಸ್ತೆಯಲ್ಲಿ ವಾಹನಕ್ಕೆ ದಾರಿ ಬಿಡುವ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಗುರುನಾಮ ಸಿಂಗ್‌ ಎಂಬ ವ್ಯಕ್ತಿಯ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣ ಇದು.

ಮಾರಣಾಂತಿಕ ಹಲ್ಲೆ ಆರೋಪದಲ್ಲಿ ನವಜೋತ್‌ ಸಿಂಗ್‌ ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್‌ ಸಿಂಗ್‌ ಸಂಧು ಅವರಿಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಪ್ರಕರಣದ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ನೇತೃತ್ವದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

ವೈರುಧ್ಯದ ವರದಿ: ಗಲಾಟೆಯಲ್ಲಿ ಮೃತಪಟ್ಟ ಗುರುನಾಮ ಸಿಂಗ್‌ ಸಾವಿಗೆ ನೀಡಿದ ವೈದ್ಯಕೀಯ ಕಾರಣಗಳು ವೈರುಧ್ಯಗಳಿಂದ ಕೂಡಿವೆ. ಸಾವಿಗೆ ಹೃದಯಾಘಾತ ಕಾರಣ ಎಂದು ಒಂದು ವರದಿ ಹೇಳಿದರೆ, ಮತ್ತೊಂದು ವರದಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸಿದೆ ಎಂದು ಹೇಳಿದೆ.

ವೈದ್ಯಕೀಯ ಸಾಕ್ಷ್ಯಾಧಾರ ಪರಿಗಣಿಸದೆ ‘ಅಭಿಪ್ರಾಯ’ದ ಆಧಾರದ ಮೇಲೆ ಹೈಕೋರ್ಟ್‌ ಶಿಕ್ಷೆ ನೀಡಿದೆ ಎಂದು ಸಿಧು ಪರ ವಕೀಲರು ವಾದ ಮಂಡಿಸಿದರು.

ಘಟನಾವಳಿ

* 1988ರಲ್ಲಿ ಪಟಿಯಾಲಾದ ರಸ್ತೆಯಲ್ಲಿ ನಡೆದಿದ್ದ ಗಲಾಟೆ

* ಸಿಧು ಜತೆ ಜಗಳ ತೆಗೆದಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

* 1999ರಲ್ಲಿ ಕೆಳ ಹಂತದ ನ್ಯಾಯಾಲಯದಿಂದ ಸಿಧು ಆರೋಪಮುಕ್ತ

* 2006ರಲ್ಲಿ ಕೆಳ ಹಂತದ ನ್ಯಾಯಾಲಯದ ಆದೇಶ ವಜಾಗೊಳಿಸಿದ ಹೈಕೋರ್ಟ್‌

* ಸಿಧು ಮತ್ತು ಸಂಧು ಅವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

* 2007ರಲ್ಲಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.