ಶುಕ್ರವಾರ, ಡಿಸೆಂಬರ್ 13, 2019
19 °C

ಈ ಗ್ರಾಮಗಳಲ್ಲಿ ಮದ್ಯ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಗ್ರಾಮಗಳಲ್ಲಿ ಮದ್ಯ ನಿಷೇಧ

ಯಳಂದೂರು (ಚಾಮರಾಜನಗರ ಜಿಲ್ಲೆ): ಮದ್ಯದ ಆಮಿಷಕ್ಕೆ ಮತ ಮಾರಿಕೊಳ್ಳುವವರು ಎಷ್ಟೋ ಮಂದಿ. ಆದರೆ, ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಮದ್ಯ ಸೇವನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸರ್ಕಾರವೇ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರೂ ಗ್ರಾಮದ ಯಜಮಾನರು, ಕಟ್ಟುನಿಟ್ಟಾಗಿ ತಿರಸ್ಕರಿಸಿದ್ದಾರೆ.

ಯಳಂದೂರು ತಾಲ್ಲೂಕಿನ ಟಿ.ಹೊಸೂರು, ಶಿವಕಳ್ಳಿ ಗ್ರಾಮಗಳ ಜನರು ಮಾದರಿ ಹೆಜ್ಜೆ ಇಟ್ಟಿದ್ದಾರೆ. ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ಮದ್ಯ ಸರಬರಾಜು ಹಾಗೂ ಸೇವನೆ ಮಾಡುವವರು ಕಂಡುಬರುತ್ತಾರೆ. ಆದರೆ, ಈ ಗ್ರಾಮಗಳಲ್ಲಿ ಮದ್ಯ ಸೇವನೆ, ಮಾರಾಟ ಅಥವಾ ಸರಬರಾಜು ಮಾಡಿದರೆ ₹ 5,000 ದಂಡ ತೆರಬೇಕಾಗುತ್ತದೆ. ಮದ್ಯಕ್ಕೆ ಮತ ಮಾರಿಕೊಳ್ಳುವುದನ್ನು ತಡೆಯಲು ಹಿರಿಯರೆಲ್ಲ ಪಂಚಾಯಿತಿ ಸೇರಿ ಈ ನಿರ್ಧಾರ ತೆಗೆದು ಕೊಂಡಿದ್ದಾರೆ.

ಟಿ.ಹೊಸೂರು ಸರ್ಕಾರಿ ಪ್ರಾಥಮಿಕ ಶಾಲೆಯೇ ಮತಗಟ್ಟೆ. ಇಲ್ಲಿ 1,200 ಮತದಾರರು ಇದ್ದಾರೆ. ಕಳೆದ ಹಲವು ವರ್ಷಗಳಿಂದ ಗ್ರಾಮಗಳಲ್ಲಿ ಮದ್ಯದ ವಾಸನೆಯೇ ಬಂದಿಲ್ಲ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಈ ಕ್ರಮ ಇನ್ನಷ್ಟು ಬಿಗಿಯಾಗುತ್ತದೆ. ಸ್ಥಳೀಯರು ಮಾತ್ರವಲ್ಲ; ಹೊರಗಿನವರೂ ಮದ್ಯ ಸೇವಿಸಿ ಗ್ರಾಮಕ್ಕೆ ಬರುವಂತಿಲ್ಲ. ಯಾರಾದರೂ ಕುಡಿದಿದ್ದು ಕಂಡುಬಂದರೆ ಅವರನ್ನು ಗ್ರಾಮಸ್ಥರೇ ಹಿಡಿದು ತಂದು ಹಿರಿಯರ ಮುಂದೆ ನಿಲ್ಲಿಸುತ್ತಾರೆ. ಅಲ್ಲಿ ನ್ಯಾಯಪಂಚಾಯಿತಿ ಮಾಡಿ ದಂಡ ವಿಧಿಸಲಾಗುತ್ತದೆ.

ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಮದ್ಯ ನಿಷೇಧ ಮಾಡುವ ಮೂಲಕ ಸುಧಾರಣೆಯ ಹೆಜ್ಜೆ ಇಟ್ಟಿದ್ದಾರೆ. ಈ ಕ್ರಮ ರಾಜ್ಯಕ್ಕೆ ಮಾದರಿ ಎನ್ನುತ್ತಾರೆ ಸಿಪಿಐ ರಾಜೇಶ್.

‘ಹಿರಿಯರು ಹಿಂದಿನಿಂದಲೂ ಸಾರಾಯಿ ನಿಷೇಧಿಸಿದ್ದಾರೆ. ಒಂದೂವರೆ ವರ್ಷದಿಂದ ಕಠಿಣ ಕ್ರಮ ಕೈಗೊಂಡು ಕುಡಿತ ಬಿಡಲಾಗುತ್ತಿದೆ. ಬಾಟಲಿ ಆಸೆ ತೋರಿಸಿ ಯಾರೂ ಮತ ಕೇಳಲು ಸಾಧ್ಯವಿಲ್ಲ’ ಎಂದು ಟಿ.ಹೊಸೂರು ಗ್ರಾಮದ ನಿವಾಸಿ ಸಿದ್ದಮಾದಯ್ಯ ಹೇಳಿದರು.

‘ನಮ್ಮೂರಲ್ಲಿ ಹಬ್ಬ, ಉತ್ಸವ ಮತ್ತು ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ, ಸೇವನೆ ನಿಷಿದ್ಧ. ಗ್ರಾಮಸ್ಥರು ಸಹಬಾಳ್ವೆಯಿಂದ ಬದುಕಲು ಯಜಮಾನರು ತೆಗೆದುಕೊಂಡ ಕ್ರಮ ಸರಿಯಾಗಿದೆ’ ಎಂದು ಹೇಳುತ್ತಾರೆ ಶಿವಕಳ್ಳಿ ಗ್ರಾಮದ ನಿವಾಸಿ ರಾಜು.

**

ನಮ್ಮೂರಲ್ಲಿ ಹಬ್ಬ, ಉತ್ಸವ ಮತ್ತು ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ, ಸೇವನೆ ನಿಷಿದ್ಧ. ಗ್ರಾಮಸ್ಥರು ಸಹಬಾಳ್ವೆಯಿಂದ ಬದುಕಲು ಯಜಮಾನರು ತೆಗೆದುಕೊಂಡ ಕ್ರಮ ಸರಿಯಾಗಿದೆ

ರಾಜು ಶಿವಕಳ್ಳಿ, ಗ್ರಾಮದ ನಿವಾಸಿ

**

ಹಿರಿಯರು ಹಿಂದಿನಿಂದಲೂ ಸಾರಾಯಿ ನಿಷೇಧಿಸಿದ್ದಾರೆ. ಒಂದೂವರೆ ವರ್ಷದಿಂದ ಕಠಿಣ ಕ್ರಮ ಕೈಗೊಂಡು ಕುಡಿತ ಬಿಡಲಾಗುತ್ತಿದೆ. ಬಾಟಲಿ ಆಸೆ ತೋರಿಸಿ ಯಾರೂ ಮತ ಕೇಳಲು ಸಾಧ್ಯವಿಲ್ಲ

ಸಿದ್ದಮಾದಯ್ಯ, ಟಿ.ಹೊಸೂರು ಗ್ರಾಮದ ನಿವಾಸಿ

ಪ್ರತಿಕ್ರಿಯಿಸಿ (+)