ಶನಿವಾರ, ಜೂನ್ 6, 2020
27 °C

‘ಹನುಮಾನ್ ಚಿತ್ರವಿರುವ ಕ್ಯಾಬ್‌ ಚಾಲಕರು ಅತ್ಯಾಚಾರಿಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹನುಮಾನ್ ಚಿತ್ರವಿರುವ ಕ್ಯಾಬ್‌ ಚಾಲಕರು ಅತ್ಯಾಚಾರಿಗಳು’

ಬೆಂಗಳೂರು: ‘ಹಿಂದೂತ್ವದ ಸಂಕೇತವಾದ ‘ರುದ್ರ ಹನುಮಾನ್’ ಚಿತ್ರವನ್ನು ಅಂಟಿಸಿಕೊಂಡಿರುವ ಓಲಾ ಹಾಗೂ ಉಬರ್ ಕಂಪನಿಯ ಕ್ಯಾಬ್‌ಗಳಲ್ಲಿ ಪ್ರಯಾಣಿಸಬೇಡಿ. ಅದರ ಚಾಲಕರು ಅತ್ಯಾಚಾರಿಗಳು’ ಎಂದು ಕೇರಳದ ‘ಕಿಸ್‌ ಆಫ್‌ ಲವ್‌’ ಕಾರ್ಯಕ್ರಮದ ರಶ್ಮಿ ಅಯ್ಯರ್‌, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ವೇಶ್ಯಾವಾಟಿಕೆ ಆರೋಪದಡಿ ಪತಿ ರಾಹುಲ್ ಪಶುಪಾಲನ್ ಸಮೇತ ರಶ್ಮಿಯನ್ನು ಕೇರಳದ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದಿರುವ ರಶ್ಮಿ, ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಏಪ್ರಿಲ್ 16ರಂದು ‘ರುದ್ರ ಹನುಮಾನ್‌’ ಚಿತ್ರವಿರುವ ಕ್ಯಾಬ್‌ನ ಫೋಟೊ ಸಹಿತ ಪೋಸ್ಟ್‌ ಪ್ರಕಟಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧ ಚರ್ಚೆ ನಡೆಯುತ್ತಿದೆ.

‘ನಾನು ಬೆಂಗಳೂರಿನ ಉಬರ್/ಓಲಾ ಕ್ಯಾಬ್ ಬಳಸುತ್ತಿರುವ ಗ್ರಾಹಕಿ. ಹಲವು ಬಾರಿ ನಾನೊಬ್ಬಳೇ ಕ್ಯಾಬ್‌ನಲ್ಲಿ ಪ್ರಯಾಣ ಮಾಡುತ್ತಿರುತ್ತೇನೆ. ನನ್ನ ಜೊತೆ ಕೆಲಸ ಮಾಡಿಕೊಂಡಿರುವ ಮಹಿಳಾ ಸಹೋದ್ಯೋಗಿಗಳು ಕ್ಯಾಬ್‌ನಲ್ಲಿ ಒಬ್ಬೊಬ್ಬರೇ ಪ್ರಯಾಣಿಸುತ್ತಿರುತ್ತಾರೆ’ ಎಂದು ರಶ್ಮಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕೆಲವು ಕ್ಯಾಬ್‌ಗಳ ಮೇಲೆ ಹಿಂದೂತ್ವದ ಸಂಕೇತವುಳ್ಳ ‘ರುದ್ರ ಹನುಮಾನ್’ ಮುಂತಾದ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಸಾಕಷ್ಟು ಹಿಂದೂತ್ವ ಸಂಘಟನೆಗಳು ಮತ್ತು ಮುಖಂಡರು, ಕಠುವಾದಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಪರವಾಗಿ ವಾದಿಸುತ್ತಿದ್ದಾರೆ. ನಾನು ಮತ್ತು ನನ್ನ ಸಹೋದ್ಯೋಗಿಗಳು, ಹಿಂದುತ್ವದ ಸಂಕೇತವುಳ್ಳ ಕ್ಯಾಬ್‌ನಲ್ಲಿ ಪ್ರಯಾಣಿಸಲು ಭಯಪಡುತ್ತಿದ್ದೇವೆ.’

‘ಹಿಂದುತ್ವದ ಸಂಕೇತ, ಭಾವಚಿತ್ರ ಮತ್ತು ಚಿಹ್ನೆವುಳ್ಳ ಕ್ಯಾಬ್‍ಗಳಲ್ಲಿ ನಾವ್ಯಾರು ಸಂಚರಿಸಲ್ಲ. ಈ ರೀತಿಯ ಕ್ಯಾಬ್‍ಗಳು ಬಂದರೆ, ನನ್ನ ಬುಕ್ಕಿಂಗ್ ರದ್ದು ಮಾಡುತ್ತೇನೆ. ರದ್ದು ಮಾಡಿದ್ದಕ್ಕೆ ಕಂಪನಿಯವರು ಹಣ ಕೇಳಿದರೆ ಕೊಡುವುದಿಲ್ಲ. ಏಕೆಂದರೆ, ಅತ್ಯಾಚಾರಿಗಳಿಗೆ ಹಾಗೂ ಅದನ್ನು ಬೆಂಬಲಿಸುವವರಿಗೆ ನನ್ನ ಹಣ ನೀಡಲು ಇಷ್ಟವಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಖಂಡಿಸಿರುವ ಹಲವರು, ರಶ್ಮಿ ಬಂಧನವಾಗಿದ್ದ ವೇಳೆ ಪ್ರಕಟವಾಗಿದ್ದ ಸುದ್ದಿಗಳ ತುಣುಕು ಸಮೇತ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್‌ ಮಾಡಿರುವ ರಶ್ಮಿ, ‘ಕಾಮೆಂಟ್‌ ಮಾಡುವುದರಲ್ಲೇ ಸಮಯ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲ ಕಾಮೆಂಟ್‌ ನಾನು ಡಿಲೀಟ್‌ ಮಾಡುತ್ತೇನೆ. ಏಕೆಂದರೆ, ಭಯೋತ್ಪಾದಕರ ಜತೆ ನಾನು ಚರ್ಚೆ ಮಾಡುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.