ಶುಕ್ರವಾರ, ಡಿಸೆಂಬರ್ 13, 2019
20 °C

ಸಿಇಟಿ: ಮೊದಲ ದಿನ ಸುಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಟಿ: ಮೊದಲ ದಿನ ಸುಸೂತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬುಧವಾರ ಸುಗಮವಾಗಿ ನಡೆಯಿತು. ಮೊದಲ ದಿನ ನಡೆದ ಜೀವ ವಿಜ್ಞಾನ ಹಾಗೂ ಗಣಿತ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ನಾನು ಗಣಿತ ಪರೀಕ್ಷೆ ಮಾತ್ರ ಬರೆದೆ. ಸ್ವಲ್ಪ ಕಷ್ಟ ಎನಿಸಿತು’ ಎಂದು ಜೈನ್‌ ಕಾಲೇಜಿನ ಕೃತಿ ಹೇಳಿದರು. ಅದೇ ಕಾಲೇಜಿನಲ್ಲಿ ಓದಿದ ಸಿಂಚನಾಗೆ ಗಣಿತ ತುಂಬಾ ಸುಲಭವಾಗಿತ್ತು. ‘ಜೀವ ವಿಜ್ಞಾನ ಮಾತ್ರ ಕಷ್ಟ ಎನಿಸಿತು. ಪ್ರಶ್ನೆಗಳು ಭಿನ್ನವಾಗಿದ್ದವು’ ಎಂದು ಹೇಳಿದರು.

ಸರಸ್ವತಿ ವಿದ್ಯಾನಿಕೇತನ ಕಾಲೇಜಿನ ಹೇಮಂತ್‌ಗೆ ಜೀವವಿಜ್ಞಾನ ಪರೀಕ್ಷೆ ತುಂಬಾ ಸುಲಭವಾಗಿತ್ತಂತೆ. ‘ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗೆ ಹೋಲಿಸಿದರೆ ಈ ಬಾರಿ ಕಷ್ಟ ಇತ್ತು’ ಎಂದರು.

ತಜ್ಞರ ಅಭಿಪ್ರಾಯ: ‘ಜೀವವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯದಿಂದಲೇ ಆಯ್ದುಕೊಳ್ಳಲಾಗಿದೆ. ಪ್ರಥಮ ಪಿಯುನಿಂದ 15 ಅಂಕದ ಪ್ರಶ್ನೆ ಹಾಗೂ ದ್ವಿತೀಯ ಪಿಯುನಿಂದ 45 ಅಂಕದ ಪ್ರಶ್ನೆ ಕೇಳಲಾಗಿದೆ. 41 ಹಾಗೂ 54ನೇ ಪ್ರಶ್ನೆಗಳಲ್ಲಿ ಕೆಲ ತಪ್ಪುಗಳಿದ್ದವು. ಇದನ್ನು ಬಿಟ್ಟರೆ ಪ್ರಶ್ನೆ ಪತ್ರಿಕೆ ಸಮತೋಲನದಿಂದ ಕೂಡಿತ್ತು’ ಎಂದು ಬೇಸ್‌ನ ತರಬೇತಿ ಸಂಸ್ಥೆಯ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಎಚ್. ಹನುಮಂತಾಚಾರ್ಯ ಹೇಳಿದರು.

‘ಗಣಿತ ಸುಲಭವಾಗಿತ್ತು. ಆದರೆ, ದೀರ್ಘವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಸಮತೋಲಿತವಾಗಿ ಪ್ರಶ್ನೆಗಳನ್ನು ಕೇಳಿದ್ದರು. 30 ಅಂಕ ಸುಲಭ, 23 ಅಂಕದ ಪ್ರಶ್ನೆ ಸಾಧಾರಣವಾಗಿತ್ತು. 7ಅಂಕದ ಪ್ರಶ್ನೆ ಕಷ್ಟ ಇದ್ದವು’ ಎಂದು ದೀಕ್ಷಾ ಸೆಂಟರ್‌ ಫಾರ್‌ ಲರ್ನಿಂಗ್‌ನ ಉಪಾಧ್ಯಕ್ಷ ಮಿಲಿಂದ್‌ ತಿಳಿಸಿದರು.

ಗಣಿತಕ್ಕೇ ಹೆಚ್ಚು

ಸಾಮಾನ್ಯ ಪ್ರವೇಶ ಪರೀಕ್ಷೆಗೆ 1,98,655 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಜೀವವಿಜ್ಞಾನ ವಿಷಯದ ಪರೀಕ್ಷೆಗೆ 1,53,450 (ಶೇ 77.24) ವಿದ್ಯಾರ್ಥಿಗಳು ಹಾಜರಾಗಿದ್ದರು. ಗಣಿತ ಪರೀಕ್ಷೆಗೆ 1,90,784 (96.04%,) ವಿದ್ಯಾರ್ಥಿಗಳು ಬಂದಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)