ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ನೈಟ್‌ರೈಡರ್ಸ್‌ ಜಯಭೇರಿ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜೈಪುರ: ರಾಬಿನ್‌ ಉತ್ತಪ್ಪ (48; 36ಎ, 6ಬೌಂ, 2ಸಿ) ಮತ್ತು ನಾಯಕ ದಿನೇಶ್‌ ಕಾರ್ತಿಕ್‌ (ಔಟಾಗದೆ 42; 23ಎ, 2ಬೌಂ, 2ಸಿ) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದೆ.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಅಜಿಂಕ್ಯ ರಹಾನೆ ಸಾರಥ್ಯದ ರಾಯಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160ರನ್‌ ಕಲೆಹಾಕಿತು. ಸವಾಲಿನ ಗುರಿಯನ್ನು ನೈಟ್‌ರೈಡರ್ಸ್‌ 18.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆರಂಭಿಕ ಆಘಾತ: ಗುರಿ ಬೆನ್ನಟ್ಟಿದ ಕಾರ್ತಿಕ್‌ ಪಡೆಗೆ ಮೊದಲ ಓವರ್‌ನಲ್ಲಿ ಆಘಾತ ಎದುರಾಯಿತು. ಕೆ.ಗೌತಮ್‌ ಬೌಲ್‌ ಮಾಡಿದ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕ್ರಿಸ್‌ ಲಿನ್‌ (0) ಬೌಲ್ಡ್‌ ಆದರು.

ನಂತರ ಕರ್ನಾಟಕದ ರಾಬಿನ್‌ ಉತ್ತಪ್ಪ ಮತ್ತು ವೆಸ್ಟ್‌ ಇಂಡೀಸ್‌ನ ಸುನಿಲ್‌ ನಾರಾಯಣ್ (35; 25ಎ, 5ಬೌಂ, 1ಸಿ) ಬಿರುಸಿನ ಆಟ ಆಡಿ ತಂಡದ ರನ್‌ ವೇಗ ಹೆಚ್ಚಿಸಿದರು. ಇವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 70ರನ್‌ ಸೇರಿಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು.

ಒಂಬತ್ತನೇ ಓವರ್‌ನಲ್ಲಿ ಸುನಿಲ್‌ ರನ್‌ಔಟ್‌ ಆದರು. ಇದರ ಬೆನ್ನಲೇ ಉತ್ತಪ್ಪ ಕೂಡ ಪೆವಿಲಿಯನ್‌ ಸೇರಿಕೊಂಡರು.

ನಂತರ ನಿತೀಶ್‌ ರಾಣಾ (ಔಟಾಗದೆ 35; 27ಎ, 2ಬೌಂ, 1ಸಿ) ಮತ್ತು ಕಾರ್ತಿಕ್‌ ಮಿಂಚಿನ ಆಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ದಿಟ್ಟ ಆರಂಭ: ಬ್ಯಾಟಿಂಗ್‌ ಆರಂಭಿಸಿದ ರಾಯಲ್ಸ್‌ ತಂಡಕ್ಕೆ ನಾಯಕ ರಹಾನೆ (36; 19ಎ, 5ಬೌಂ, 1ಸಿ) ಮತ್ತು ಆರ್ಸಿ ಶಾರ್ಟ್‌ (44; 43ಎ, 5ಬೌಂ, 1ಸಿ) ಉತ್ತಮ ಆರಂಭ ನೀಡಿದರು. ನೈಟ್‌ರೈಡರ್ಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 54ರನ್‌ ಸೇರಿಸಿದರು.

ಏಳನೇ ಓವರ್‌ ಬೌಲ್‌ ಮಾಡಿದ ನಿತೀಶ್‌ ರಾಣಾ, ರಾಯಲ್ಸ್‌ಗೆ ಮೊದಲ ಆಘಾತ ನೀಡಿದರು. ಐದನೇ ಎಸೆತದಲ್ಲಿ ಅವರು ರಹಾನೆ ವಿಕೆಟ್‌ ಉರುಳಿಸಿದರು.

ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್‌, ಶಿವಂ ಮಾವಿಗೆ ವಿಕೆಟ್‌ ಒಪ್ಪಿಸಿದರು. ಸಂಜು, ಎಂಟು ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 7ರನ್‌ ದಾಖಲಿಸಿದರು.

ನಂತರ ಶಾರ್ಟ್‌ ಮತ್ತು ರಾಹುಲ್‌ ತ್ರಿಪಾಠಿ (15; 11ಎ, 2ಬೌಂ) ಎಚ್ಚರಿಕೆಯ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು. 13ನೇ ಓವರ್‌ನಲ್ಲಿ ಶಾರ್ಟ್‌ ಔಟಾದರು. ಬೆನ್‌ ಸ್ಟೋಕ್ಸ್‌ (14; 11ಎ, 1ಸಿ) ಕೂಡ ಬೇಗನೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ರಾಯಲ್ಸ್‌ ಪಾಳಯದ ಮೇಲೆ ಆತಂಕ ಆವರಿಸಿತ್ತು.

ಜಾಸ್‌ ಬಟ್ಲರ್‌ (ಔಟಾಗದೆ 24; 18ಎ, 2ಬೌಂ) ಮತ್ತು ಕರ್ನಾಟಕದ ಕೆ.ಗೌತಮ್‌ (12; 7ಎ, 1ಸಿ) ಸ್ಫೋಟಕ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160 (ಅಜಿಂಕ್ಯ ರಹಾನೆ 36, ಡಿ ಆರ್ಸಿ ಶಾರ್ಟ್‌ 44, ಸಂಜು ಸ್ಯಾಮ್ಸನ್‌ 7, ರಾಹುಲ್‌ ತ್ರಿಪಾಠಿ 15, ಬೆನ್‌ ಸ್ಟೋಕ್ಸ್‌ 14, ಜಾಸ್‌ ಬಟ್ಲರ್‌ ಔಟಾಗದೆ 24, ಕೆ.ಗೌತಮ್‌ 12; ಪೀಯೂಷ್‌ ಚಾವ್ಲಾ 18ಕ್ಕೆ1, ಕುಲದೀಪ್‌ ಯಾದವ್‌ 23ಕ್ಕೆ1, ಶಿವಂ ಮಾವಿ 40ಕ್ಕೆ1, ನಿತೀಶ್‌ ರಾಣಾ 11ಕ್ಕೆ2, ಟಾಮ್‌ ಕರನ್‌ 19ಕ್ಕೆ2).

ಕೋಲ್ಕತ್ತ ನೈಟ್‌ರೈಡರ್ಸ್‌: 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 163 (ಸುನಿಲ್‌ ನಾರಾಯಣ್‌ 35, ರಾಬಿನ್‌ ಉತ್ತಪ್ಪ 48, ನಿತೀಶ್‌ ರಾಣಾ ಔಟಾಗದೆ 35, ದಿನೇಶ್‌ ಕಾರ್ತಿಕ್‌ ಔಟಾಗದೆ 42; ಕೆ.ಗೌತಮ್‌ 23ಕ್ಕೆ2).

ಫಲಿತಾಂಶ: ಕೋಲ್ಕತ್ತ ನೈಟ್‌ರೈಡರ್ಸ್‌ಗೆ 7 ವಿಕೆಟ್‌ ಜಯ.
ಪಂದ್ಯಶ್ರೇಷ್ಠ: ನಿತೀಶ್‌ ರಾಣಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT