ಶುಕ್ರವಾರ, ಜೂನ್ 5, 2020
27 °C

ರೂಪದರ್ಶಿಯರ ಸೋಗಿನಲ್ಲಿ ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂಪದರ್ಶಿಯರ ಸೋಗಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು: ಜಯನಗರದ ‘ಅಂಬಟಿ’ ಮಳಿಗೆಗೆ ರೂಪದರ್ಶಿಯರ ಸೋಗಿನಲ್ಲಿ ತೆರಳಿದ್ದ ಐವರು ಮಹಿಳೆಯರು, ₹2.9 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.

ಈ ಸಂಬಂಧ ಮಳಿಗೆಯ ಮಾಲೀಕ ಪ್ರಸಾದ್, ಜಯನಗರ ಠಾಣೆಗೆ ದೂರು ನೀಡಿದ್ದಾರೆ.  

‘ರೂಪದರ್ಶಿಯರಂತೆ ಬಣ್ಣ ಬಣ್ಣದ ಬಟ್ಟೆ ತೊಟ್ಟುಕೊಂಡಿದ್ದ ಮಹಿಳೆಯರು, ಗ್ರಾಹಕರ ಸೋಗಿನಲ್ಲಿ ಏಪ್ರಿಲ್ 7ರಂದು ಸಂಜೆ 5.45 ಗಂಟೆಗೆ ಮಳಿಗೆಗೆ ಹೋಗಿದ್ದರು. ಈ ವೇಳೆ ಇಬ್ಬರು ಕೆಲಸಗಾರರಷ್ಟೇ ಮಳಿಗೆಯಲ್ಲಿದ್ದರು. ಮಹಿಳೆಯರು ಶ್ರೀಮಂತರಿರಬಹುದು. ಆಭರಣ ಖರೀದಿಸಲು ಬಂದಿರಬಹುದು ಎಂದು ತಿಳಿದಿದ್ದ ಅವರು, ನಾನಾ ಬಗೆಯ ಆಭರಣಗಳನ್ನು ತೋರಿಸಿದ್ದರು. ಅದೇ ವೇಳೆ ಕೆಲಸಗಾರರ ದಿಕ್ಕುತಪ್ಪಿಸಿ ಆಭರಣ ಕದ್ದಿದ್ದಾರೆ’ ಎಂದು ಪ್ರಸಾದ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಒಬ್ಬ ಕೆಲಸಗಾರನ ಬಳಿ ತಲಾ ಇಬ್ಬರು ಮಹಿಳೆಯರು ಮಾತನಾಡುತ್ತಿದ್ದರು. ಕೆಲಸಗಾರರು, ಆಭರಣ ತೋರಿಸುವಲ್ಲಿ ನಿರತರಾಗಿದ್ದರು. ಅದೇ ವೇಳೆ ಮತ್ತೊಬ್ಬ ಮಹಿಳೆ, ಮಳಿಗೆಯಲ್ಲಿ ಪ್ರದರ್ಶಿಸಲಾಗಿದ್ದ ಆಭರಣಗಳನ್ನು ಕದ್ದು ತಮ್ಮ ಬಳಿಯ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟುಕೊಂಡಿದ್ದರು. ಕೆಲ ನಿಮಿಷಗಳ ಬಳಿಕ, ‘ಆಭರಣ ಸರಿ ಇಲ್ಲ. ಮತ್ತೊಮ್ಮೆ ಬರುತ್ತೇವೆ’ ಎಂದು ಹೇಳಿ ಮಳಿಗೆಯಿಂದ ಹೊರಟು ಹೋಗಿದ್ದಾರೆ’.

‘ಕಳ್ಳತನವಾಗಿದ್ದು ಸಂಜೆ ಆಭರಣಗಳನ್ನು ಎಣಿಕೆ ಮಾಡುವಾಗಲೇ ಗೊತ್ತಾಯಿತು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಆ ಮಹಿಳೆಯರು ಆಭರಣ ಕದ್ದಿದ್ದು ತಿಳಿಯಿತು’ ಎಂದು ಪ್ರಸಾದ್‌ ಹೇಳಿದ್ದಾರೆ.

ಜಯನಗರ ಪೊಲೀಸರು, ‘ಮಹಿಳೆಯರು ತಂಡ ಕೃತ್ಯ ಎಸಗಿದೆ. ಸಾದಾ ಬಟ್ಟೆ ತೊಟ್ಟರೆ ಮಳಿಗೆಯವರು ಚೆನ್ನಾಗಿ ಮಾತನಾಡುವುದಿಲ್ಲವೆಂದು ತಿಳಿದು ರೂಪದರ್ಶಿಯರಂತೆ ಬಟ್ಟೆ ತೊಟ್ಟುಕೊಂಡು ಬಂದಿದ್ದಾರೆ. ಮೂರು ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಮುಖಚಹರೆ ಸೆರೆಯಾಗಿದೆ. ಅದರ ಆಧಾರದಲ್ಲಿ ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.