ಭಾನುವಾರ, ಡಿಸೆಂಬರ್ 15, 2019
23 °C

ಸಕ್ಕರೆ ಪ್ಯಾಕೆಟ್‌ನಲ್ಲಿ ನಿಷೇಧಿತ ‘ಮೆಥಕ್ವಿಲೋನ್‌’ ಔಷಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕ್ಕರೆ ಪ್ಯಾಕೆಟ್‌ನಲ್ಲಿ ನಿಷೇಧಿತ ‘ಮೆಥಕ್ವಿಲೋನ್‌’ ಔಷಧಿ

ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ ಅಂದಾಜು ₹6.45 ಕೋಟಿ ಮೌಲ್ಯದ 12.9 ಕೆ.ಜಿ ನಿಷೇಧಿತ ‘ಮೆಥಕ್ವಿಲೋನ್‌‘  ಔಷಧಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್‌ ವಿಭಾಗದಲ್ಲಿ ಬುಧವಾರ ಜಪ್ತಿ ಮಾಡಿದ್ದಾರೆ.

‘ಮಧುಮೇಹಕ್ಕೆ ಔಷಧಿಯಾಗಿ ಬಳಸುವ ತಾಳೆ ಸಕ್ಕರೆಯ ಪ್ಯಾಕೆಟ್‌ನಲ್ಲಿ ಈ ಔಷಧಿಯನ್ನು ಹಾಕಿ, ಅದರ ಮೇಲೆ ವೈಯಕ್ತಿಕ ಬಳಕೆಗೆ ಎಂದು ಬರೆದು, ₹6000 ದರ ನಮೂದಿಸಿದ ಚೆನ್ನೈ ಮೂಲದ ರಫ್ತುದಾರರು ಕ್ವಾಲಾಲಂಪುರ ಮತ್ತು ಮಲೇಷ್ಯಾಗೆ ಸಾಗಿಸಲು‌ ಯತ್ನಿಸಿದ್ದರು’ ಎಂದು ಕಸ್ಟಮ್ಸ್‌ನ (ಕೊರಿಯರ್‌ ವಿಭಾಗ) ಹೆಚ್ಚುವರಿ ಕಮಿಷನರ್‌ ಹರ್ಷವರ್ಧನ್‌ ತಿಳಿಸಿದ್ದಾರೆ.

‘ನಿಲ್ದಾಣದ ಕೊರಿಯರ್‌ ವಿಭಾಗದ ಅಧಿಕಾರಿಗಳು ಸಂಶಯಗೊಂಡು, ಪ್ಯಾಕೆಟ್‌ಗಳನ್ನು ತೆರೆದು ಪರೀಕ್ಷಿಸಿದಾಗ ಅದರೊಳಗೆ ಬಿಳಿ ಬಣ್ಣದ ಸ್ಫಟಿಕದಂಥಹ ಪುಡಿ ಇರುವುದು ಕಂಡುಬಂದಿದೆ. ಈ ಪುಡಿ ನಿಷೇಧಿತ ಮೆಥಕ್ವಿಲೊನ್‌  ಔಷಧಿ ಇರಬಹುದು ಎಂದು ಶಂಕಿಸಲಾಗಿದೆ.

ಇಐಸಿಐ (ಎಕ್ಸ್‌ಪ್ರೆಸ್‌ ಇಂಡಸ್ಟ್ರಿ ಕೌನ್ಸಿಲ್‌ ಆಫ್‌ ಇಂಡಿಯಾ) ಮೂಲಕ ಸಾಗಣೆ ಮಾಡಲು, ಫೆಡ್‌ಎಕ್ಸ್‌ ಕೊರಿಯರ್‌ ಕಂಪನಿಯ ಮೂಲಕ ಚೆನ್ನೈನಿಂದ ಪ್ಯಾಕೆಟ್‌ಗಳನ್ನು

ಬುಕ್‌ ಮಾಡಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡಲಾಗುತ್ತಿತ್ತು.

ಪ್ಯಾಕೆಟ್‌ನಲ್ಲಿರುವ ಬಿಳಿ ಬಣ್ಣದ ಪುಡಿಯ ಪ್ರಾಥಮಿಕ ತನಿಖೆ ನಡೆಸಿರುವ ಅಧಿಕಾರಿಗಳು ಅದು ಮೆಥಕ್ವಿಲೋನ್‌ ಔಷಧಿ ಇರಬಹುದು ಎಂದು ತಿಳಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ನಿಷೇಧಿ ಔಷಧಿಗಳನ್ನು ರಫ್ತು ಮಾಡಲು ಯತ್ನಿಸುತ್ತಿರುವುದು ಈ ವರ್ಷದಲ್ಲಿ ಇದು ಎರಡನೇ ಪ್ರಕರಣ. ಜನವರಿಯಲ್ಲಿ ಅಂದಾಜು ₹1 ಕೋಟಿ ಮೌಲ್ಯದ ನಿಷೇಧಿತ ‘ಕೆಟಮೈನ್‌’ ಅನ್ನು ಭಾರತೀಯ ಸಿಹಿ ತಿಂಡಿ ಎಂದು ಪ್ಯಾಕೆಟ್‌ ಮೇಲೆ ಬರೆದು ಕ್ವಾಲಾಲಂಪುರಕ್ಕೆ ಕಳ್ಳ ಸಾಗಣೆ ಮಾಡಲಾಗುತ್ತಿತ್ತು. ಅದನ್ನೂ ಫೆಡ್‌ಎಕ್ಸ್‌ ಮೂಲಕವೇ ಕೊರಿಯರ್ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)