ಭಾನುವಾರ, ಡಿಸೆಂಬರ್ 15, 2019
25 °C

ಜನ‘ನಾಯಕ’ ಆಗಿರಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನ‘ನಾಯಕ’ ಆಗಿರಬೇಕು

ನನ್ನ ಪ್ರಕಾರ ಮಾದರಿ ನಾಯಕ ಎಂದರೆ, ಉತ್ತಮ ಕಾನೂನು ಮತ್ತು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುವವ. ಯೋಜನೆಗಳು ಸಮಾಜದ ಕೆಳ ಹಂತದವರೆಗೂ ತಲುಪಿದೆಯೇ ಎನ್ನುವುದರ ಬಗ್ಗೆ ಗಮನ ಹರಿಸಬೇಕು. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟು ಜಾರಿ ಮಾಡಲು ಹಿಂಜರಿಯುವವನಾಗಬಾರದು. ಅದರ ಬದಲಿಗೆ ಕೃಷಿಗೆ ಬೇಕಾಗುವ ರಸಗೂಬ್ಬರ, ಬಿತ್ತನೆ ಬೀಜ, ಇತರೆ ಪರಿಕರಗಳ ಬೆಲೆಗಳಲ್ಲಿ ಹೆಚ್ಚು ರಿಯಾಯಿತಿ ನೀಡಬೇಕು. ಜನರ ಸಮಸ್ಯೆಗಳಿಗೆ ಮತ್ತು ದೂರುಗಳಿಗೆ ಸ್ಪಂದಿಸಬೇಕು. ಆಗಲೇ ಒಳ್ಳೆಯ ನಾಯಕ ಎನಿಸಿಕೂಳ್ಳಲು ಸಾಧ್ಯ.

–ನರೇಂದ್ರ ಎನ್, ಚಿಕ್ಕಗುಂಡಪ್ಪನಾಯಕನಹಳ್ಳಿ

*

ಕಳಂಕರಹಿತ ಆಗಿರಬೇಕು

ಸರಳ ವ್ಯಕ್ತಿಯಾಗಿರಬೇಕು. ಸೇವಾ ಮನೋಭಾವ ಇರಬೇಕು. ಜನರ ಕಷ್ಟಗಳಿಗೆ ಸ್ಪಂದಿಸಿ ಅದಕ್ಕೆ ತಕ್ಕ ಪರಿಹಾರ ಕೊಡಬೇಕು. ಯಾವುದೇ ಕಳಂಕವಿರದೆ ಅಭಿವೃದ್ಧಿ ಕೆಲಸ ಮಾಡಬೇಕು. ಸರ್ಕಾರದ ಸವಲತ್ತುಗಳು ಫಲಾನುಭವಿಗಳಿಗೆ ಸರಿಯಾಗಿ ಸಿಗುತ್ತಿದೆಯೇ ಎಂದು ಗಮನಹರಿಸಬೇಕು. ಅವನ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಸ್ಥಿತಿ, ಕುಡಿಯುವ ನೀರು, ಸ್ತ್ರೀಯರ ರಕ್ಷಣೆ, ಜನರಿಗೆ ಊದ್ಯೋಗ ದೊರಕಿದೆಯೇ, ಜನರ ಕುಂದುಕೊರತೆ ಏನು ಎಂದು ಅರಿತುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

–ಲಕ್ಷ್ಮಿಕಾಂತ ಶಮ೯, ಬಂಡಿಕೊಡಿಗೇನಹಳ್ಳಿ (ಬೆಂಗಳೂರು ಉತ್ತರ)

*

ನುಡಿದಂತೆ ನಡೆಯಬೇಕು

ಕ್ಷೇತ್ರದ ಸಮಗ್ರ ಪರಿಚಯವಿರಬೇಕು. ಅಭಿವೃದ್ಧಿಯಲ್ಲಿ ಪಾರದರ್ಶಕತೆಯ ಜೊತೆಗೆ ಶೀಘ್ರ ಅನುಷ್ಠಾನದ ಬದ್ಧತೆಯಿರಬೇಕು. ಐದು ದಶಕಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು. ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಿಂಗಳಿಗೆ ಒಮ್ಮೆಯಾದರೂ ಸ್ವಕ್ಷೇತ್ರದಲ್ಲಿ ತಿರುಗಾಡಿ, ಸ್ಥಿತಿಗತಿಗಳ ಕುರಿತು ಚರ್ಚಿಸಿ ಅರಿತುಕೊಳ್ಳಬೇಕು. ಜಾತಿ, ಧರ್ಮಗಳನ್ನು ಮೀರಿದ ಮಾನವೀಯತೆ ಹೊಂದಿರಬೇಕು. ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಿರದಂಥ ವ್ಯಕ್ತಿ ಆಗಿರಬೇಕು.

–ಧರ್ಮಾನಂದ ಶಿರ್ವ, ವಿಜಯನಗರ

*

ಭ್ರಷ್ಟಾಚಾರ ಮುಕ್ತ

ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುವ ವ್ಯಕ್ತಿ ನಾಯಕನಾಗಬೇಕು. ಸ್ವಾರ್ಥ ಬಿಟ್ಟು ಜನಪರ ದುಡಿಯಬೇಕು. ಅಧಿಕಾರದ ಮದ ಬಿಟ್ಟು ಸಾಮಾನ್ಯ ವ್ಯಕ್ತಿಯಂತೆ ಇರಬೇಕು. ಸಮಾನತೆಯ ಸರ್ಕಾರ ನಡೆಸಬೇಕು. ರೈತರಪರ ಹೆಚ್ಚಿನ ಗಮನ ಇರಬೇಕು. ಉದ್ಯೋಗ ಅವಕಾಶ, ಶಿಕ್ಷಣ, ವಸತಿ ಕಲ್ಪಿಸುವ ಮೂಲಕ ಐದು ವರ್ಷಗಳ ಕಾಲ ಪ್ರಾಮಾಣಿಕ ಕರ್ತವ್ಯ ನಡೆಸಬೇಕು.

–ಮಲ್ಲಿಕಾರ್ಜುನ, ವಿಜಯನಗರ

*

ಸುಶಿಕ್ಷಿತ ನಾಯಕನಿರಬೇಕು

ಹುದ್ದೆಯ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ನಾಗರಿಕರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆರೋಗ್ಯ, ಶಿಕ್ಷಣ, ಆಹಾರ, ನೀರು, ರಸ್ತೆ, ಸರ್ಕಾರದ ನೇಮಕಾತಿಗಳನ್ನು ‌ಸಮಾನತೆ‌ಯಿಂದ ಮಾಡಬೇಕು. ನಾಯಕ 40 ರಿಂದ 75 ವರ್ಷದ ಒಳಗಿರಬೇಕು. ವರ್ಷಕ್ಕೆ ಭಾನುವಾರ ಮತ್ತು ಎರಡನೇ ಶನಿವಾರ ಮಾತ್ರ ರಜೆ ಪಡೆಯಬೇಕು. ಪೊಲೀಸ್ ವ್ಯವ‌‍ಸ್ಥೆ ಬಲಪಡಿಸಬೇಕು. ಕನಿಷ್ಠ ಪದವೀಧರನಾಗಿರಬೇಕು.

–ಶ್ರೀಕಾಂತ ಜೋಶಿ, ಮಾಗಡಿ ರಸ್ತೆ

*

ಅಧಿಪತಿ ಆಗಬಾರದು

ಜನಪ್ರತಿನಿಧಿಯು ಸಾಮಾನ್ಯ ಜನರಂತೆ ಸರಳಜೀವನ ನಡೆಸುವವನಾಗಿರಬೇಕು. ಜನರ ಅಧಿಪತಿಯಾಗಿರದೆ ಸೇವಕನಂತಿರಬೇಕು. ನಿಸ್ವಾರ್ಥಿಯೂ ಕರುಣೆ ಉಳ್ಳವನೂ ಆಗಿರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳ್ಗೆಗೆ ವಿಶೇಷ ಕಾಳಜಿ ವಹಿಸಬೇಕು. ಮುಖ್ಯವಾಗಿ ವಿಧಾನಸಭಾ ಅಧಿವೇಶನಗಳಲ್ಲಿ ಭಾಗವಹಿಸಿ ಸರ್ಕಾರದ ವೈಫಲ್ಯಗಳನ್ನ ಎತ್ತಿ ತೋರಿಸಬೇಕು.

–ಮಂಜುನಾಥ್ ಕೋಟೂರು, ಹೊಸಕೋಟೆ (ತಾ)

*

ಜನರ ಆಶೋತ್ತರಗಳಿಗೆ ಸ್ಪಂದಿಸಲಿ

ಮಾದರಿ ನಾಯಕ ಹೀಗಿರಬೇಕು, ಹಾಗಿರಬೇಕೆಂದೇನಿಲ್ಲ. ಜನಸಾಮಾನ್ಯರ ನ್ಯಾಯಯುತ ಆಶೋತ್ತರಗಳಿಗೆ ಸ್ಪಂದಿಸುವಂತವರಾಗಿರಬೇಕು.

ರಾಜಕೀಯ ಪಕ್ಷಗಳು ಗೆಲ್ಲುವವರಿಗೆ, ಹಣವಂತರಿಗೆ ಟಿಕೇಟ್ ನೀಡುವ ಬದಲು, ಸಾಮಾನ್ಯರಲ್ಲಿ ಸಾಮಾಜಿಕ ಕಳಕಳಿ ಇರುವವರನ್ನು ಗುರುತಿಸಿ ಚುನಾವಣೆಗೆ ನಿಲ್ಲಿಸಬೇಕು. ಇದರಿಂದ ಆತ ಹಣ ಮಾಡುವುದರ ಬದಲು ಓಳ್ಳೆಯ ಕೆಲಸಗಳನ್ನು ಮಾಡುತ್ತಾನೆ.

–ಜೆ. ರೂ‍ಪೇಶ್‌ ಕುಮಾರ್‌, ಗಂಗಾನಗರ

ಪ್ರತಿಕ್ರಿಯಿಸಿ (+)