ಮಂಗಳವಾರ, ಆಗಸ್ಟ್ 4, 2020
26 °C
ವಾರದ ರಜೆ ಇದ್ದರೂ ವಹಿವಾಟು ನಡೆಸಿದ ಚಿನ್ನಾಭರಣ ಅಂಗಡಿಗಳು

ಅಕ್ಷಯ ತೃತೀಯ; ಖರೀದಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಷಯ ತೃತೀಯ; ಖರೀದಿ ಜೋರು

ವಿಜಯಪುರ: ನಗರವೂ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಬಸವ ಜಯಂತಿ ಸಡಗರ. ಇದರೊಟ್ಟಿಗೆ ಅಕ್ಷಯ ತೃತೀಯದ ಸಂಭ್ರಮವೂ ಹೌದು. ಎತ್ತ ನೋಡಿದರೂ ಖರೀದಿ ಭರಾಟೆ... ಮಂಗಳವಾರ ಮುಸ್ಸಂಜೆಯಿಂದಲೇ ವಹಿವಾಟು ಬಿರುಸುಗೊಂಡಿತ್ತು.

ಬಂಗಾರದ ಬೆಲೆ ಗಗನಮುಖಿ ಯಾದರೂ; ಸಂಪ್ರದಾಯಕ್ಕೆ ಜೋತು ಬಿದ್ದ ಜನಸ್ತೋಮ ಚಿನ್ನಾಭರಣ ಅಂಗಡಿ ಗಳಿಗೆ ಮುಗಿ ಬಿದ್ದು ಖರೀದಿ ನಡೆಸಿತು. ಹೊಸ ಉತ್ಪನ್ನ ಖರೀದಿಗಾಗಿ ತಂಡೋಪ ತಂಡವಾಗಿ ಜನರು ಬಜಾರ್‌ಗಳಲ್ಲಿನ ಅಂಗಡಿಗೆ ದಾಂಗುಡಿಯಿಟ್ಟ ದೃಶ್ಯ ಜಿಲ್ಲೆಯ ಎಲ್ಲೆಡೆ ಗೋಚರಿಸಿತು.

‘ಅಕ್ಷಯ ತೃತೀಯ’ ಖರೀದಿಗೆ ಶುಭದಿನ. ಯಾವುದೇ ಹೊಸ ವಸ್ತು ಖರೀದಿಸಿದರೂ ಚಲೋ. ಸಂಪತ್ತು ವೃದ್ಧಿಯಾಗಲಿದೆ. ವರ್ಷ ಪೂರ್ತಿ ಆದಾಯ, ಸಂಪತ್ತಿನ ಖರೀದಿ ಮುಂದುವರೆಯಲಿದೆ ಎಂಬ ನಂಬಿಕೆಯಿಂದ ಖರೀದಿಗೆ ಮುಗಿ ಬೀಳುವವರೇ ಹೆಚ್ಚು. ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಸದಿದ್ದರೂ; ಕೊಂಚವನ್ನಾದರೂ ಖರೀದಿಸಬೇಕು ಎಂಬ ಆಕಾಂಕ್ಷೆ ಬಹುತೇಕರದ್ದು.

ಅಪಾರ ಸಂಖ್ಯೆಯ ಜನರು ಅಕ್ಷಯ ತೃತೀಯದಂದು ಬಂಗಾರ ಖರೀದಿಸುತ್ತಾರೆ. ಈ ದಿನ ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಹಲವರದ್ದು. 10 ಗ್ರಾಂ ಬಂಗಾರ ಖರೀದಿಸುವ ಯೋಜನೆ ರೂಪಿಸಿದವರು ಎಂತಹ ಕಠಿಣ ಪರಿಸ್ಥಿತಿ ಎದುರಾದರೂ; ಕನಿಷ್ಠ 1 ಗ್ರಾಂ ಚಿನ್ನ ಖರೀದಿಸುವುದು ವಾಡಿಕೆ.

ಚಿನ್ನ ಈ ಬಾರಿ ತುಸು ತುಟ್ಟಿಯಾಗಿದೆ. ಹಿಂದಿನ ವರ್ಷದ ಅಕ್ಷಯ ತೃತೀಯದ ಸಂದರ್ಭ 10 ಗ್ರಾಂ ಚಿನ್ನದ ಬೆಲೆ ₹ 29400. ಈ ಬಾರಿ 10 ಗ್ರಾಂಗೆ ₹ 32200 ನಡೆದಿದೆ. 10 ಗ್ರಾಂಗೆ ₹ 2800 ಹೆಚ್ಚಿದ್ದರೂ, ಖರೀದಿದಾರರ ಸಂಭ್ರಮಕ್ಕೇನು ಕಡಿವಾಣ ಬಿದ್ದಿಲ್ಲ. ಭರ್ಜರಿಯಾಗಿ ಖರೀದಿ ನಡೆಸಿದ ದೃಶ್ಯಾವಳಿಗಳು ಚಿನ್ನಾಭರಣ ಅಂಗಡಿಗಳಲ್ಲಿ ಕಂಡು ಬಂತು.

‘ಬಹುತೇಕರು ಚಿನ್ನಾಭರಣ ಕೊಳ್ಳುವ ಬದಲು 24 ಕ್ಯಾರಟ್‌ ಚಿನ್ನದ ಉಂಗುರ, ಗಟ್ಟಿ, ಬಿಸ್ಕತ್ತು ಖರೀದಿಸಿದರು. ಇದರಿಂದ ಚಿನ್ನದ ತೂಕಕ್ಕೆ ಯಾವುದೇ ಲೋಪವಾಗುವುದಿಲ್ಲ. ಆಭರಣ ಖರೀದಿಸಿದರೆ ಆಪತ್‌ಕಾಲದಲ್ಲಿ ಮಾರಲು ಮುಂದಾದರೆ, ತೂಕದಲ್ಲಿ ತಾಮ್ರ ವಜಾಗೊಳಿಸುವರು. ಹೂಡಿದ ಬಂಡವಾಳ ನಷ್ಟವಾಗಲಿದೆ. ಅಪ್ಪಟ ಬಂಗಾರ ಖರೀದಿಸಿದರೆ ಮೌಲ್ಯದಲ್ಲಿ ವ್ಯತ್ಯಾಸವಾದರೂ ತೂಕದಲ್ಲಿ ಏನಾಗುವುದಿಲ್ಲ’ ಎನ್ನುತ್ತಾರೆ ಚಿನ್ನ ಖರೀದಿಸಿದ ಸುಜಾತಾ ಯರಗಲ್ಲ.

‘ಬಂಗಾರದ ಧಾರಣೆ ಗಗನಮುಖಿಯಿದೆ. ಹತ್ತು ವರ್ಷದಿಂದ ಖರೀದಿಸುತ್ತಿರುವೆವು. ಚಲೋ ಆಗಿದೆ. ಪ್ರತಿ ವರ್ಷವೂ ಅಕ್ಷಯ ತೃತೀಯ ದಿನದ ಖರೀದಿಗೆ ಎಂದು ಮುಂಗಡವಾಗಿಯೇ ಕಾಸು ಕೂಡಿಟ್ಟಿರುತ್ತೇವೆ. ಆ ದಿನದ ಬೆಲೆಗೆ ಎಷ್ಟು ಬಂಗಾರ ಬರುತ್ತದೆ ಅಷ್ಟನ್ನು ಖರೀದಿಸುತ್ತೇವೆ’ ಎಂದು ಕಾವೇರಿ ಅಪ್ಪಣ್ಣ ಉಮದಿ ತಿಳಿಸಿದರು.

‘ಅಕ್ಷಯ ತೃತೀಯದಂದು ಖರೀದಿಗಾಗಿ ಮುಂಗಡ ಬುಕ್ಕಿಂಗ್‌ ಮಾಡುವವರು ಇದ್ದಾರೆ. 100 ಗ್ರಾಹಕರಲ್ಲಿ 10 ಮಂದಿ ಮೊದಲೇ ತಮಗಿಷ್ಟದ ಬಂಗಾರದ ಆಭರಣ ಆಯ್ಕೆ ಮಾಡಿಕೊಂಡು, ಆರ್ಡರ್‌ ಕೊಟ್ಟಿರುತ್ತಾರೆ. ನಿಗದಿತ ದಿನ ಬಂದು ಮನೆಗೆ ಕೊಂಡೊಯ್ದು ಪೂಜೆ ಸಲ್ಲಿಸಿ ಧರಿಸಿ ಸಂಭ್ರಮಿಸುತ್ತಾರೆ. ಮಂಗಳವಾರ ಮಧ್ಯಾಹ್ನದಿಂದಲೇ ಖರೀದಿ ನಡೆದಿದೆ. ಬಹುತೇಕರು ಅಕ್ಷಯ ತೃತೀಯ ದಿನದಂದೇ ಅಂಗಡಿಗೆ ಬಂದು 24 ಕ್ಯಾರಟ್‌ ಚಿನ್ನ ಖರೀದಿಸುತ್ತಾರೆ’ ಎಂದು ಸೋನಾರ್ ಜ್ಯುವೆಲ್ಲರಿ ಅಂಗಡಿಯ ಆಕಾಶ ಸೋನಾರ್ ಹೇಳಿದರು.

**

ಬಂಗಾರ ತುಟ್ಟಿಯಾದ್ರೂ, ಖರೀದಿ ಕಷ್ಟವಾದ್ರೂ ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಖಾತ್ರಿ. ಇದಕ್ಕಾಗಿಯೇ ವರ್ಷದಿಂದ ಹಣ ಕೂಡಿಡುತ್ತೇವೆ

-ಚೈತ್ರಾ ಅಸುಗಡೆ, ಚಿನ್ನ ಖರೀದಿಸಿದಾಕೆ

**

ಅಕ್ಷಯ ತೃತೀಯ ಅಂಗವಾಗಿ ಎರಡು ದಿನ ಭರ್ಜರಿ ವಹಿವಾಟು ನಡೆಸಿದೆವು. ಬಂಗಾರದ ಬೆಲೆ ತುಟ್ಟಿಯಾದರೂ ಜನ ಸಂಪ್ರದಾಯದಂತೆ ಖರೀದಿಸಿದರು

-ಆಕಾಶ ಸೋನಾರ್, ಚಿನ್ನಾಭರಣ ಅಂಗಡಿ ಮಾಲೀಕ

**

ಹಳೇ ಬೈಕ್‌ ಮಾರಿದ್ದೆ. ಚಲೋ ಮುಹೂರ್ತದಲ್ಲಿ ಖರೀದಿಸಬೇಕು ಎಂದು ಬುಧವಾರ ಯಮಹಾ ಕಂಪೆನಿಯ ₹ 71,000 ಮೌಲ್ಯದ ಬೈಕ್‌ ಖರೀದಿಸಿರುವೆ.

-ಅಶೋಕ ತಿಮ್ಮಶೆಟ್ಟಿ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.